ಗುರುವಾರ , ಫೆಬ್ರವರಿ 27, 2020
19 °C
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ವಿಷಾದ

ಬೆಳಗಾವಿ| ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲಿ ಬಾಲಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಮಾಡುತ್ತಿರುವವರಲ್ಲಿ ಶೇ 30ರಷ್ಟು ಮಕ್ಕಳಿದ್ದಾರೆ. ದಿನವೂ ಇದನ್ನು ನೋಡುತ್ತಿದ್ದೇನೆ’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಆರ್‌.ಜೆ. ಸತೀಶ್‌ಸಿಂಗ್‌ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸ್ಪಂದನ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಮಕ್ಕಳು ಸಾಗಾಣಿಕೆಯಿಂದ ಮುಕ್ತ ಹಾಗೂ ಮಕ್ಕಳ ರಕ್ಷಣೆ ಕುರಿತ ಜಿಲ್ಲಾ ಮಟ್ಟದ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬಹಳ ಹೀನಾಯ ಸ್ಥಿತಿಯಲ್ಲಿದ್ದಾರೆ. ಮಲಗಲೂ ಜಾಗ ಇಲ್ಲ. ಶೌಚಾಲಯದ ವ್ಯವಸ್ಥೆ ಮಾಡಿಲ್ಲ. ನಮ್ಮ ಕಣ್ಮುಂದೆಯೇ ಇದೆಲ್ಲವೂ ನಡೆಯುತ್ತಿದೆ. ಯಾರಾದರೂ ದನಿ ಎತ್ತಿದ್ದಾರೆಯೇ, ಸಂಬಂಧಿಸಿದ ‌ಅಧಿಕಾರಿಗಳು ಗಮನಹರಿಸಿದ್ದಾರೆಯೇ? ಮಕ್ಕಳ ಹಕ್ಕುಗಳ ಬಗ್ಗೆ ನಾಲ್ಕು ಗೋಡೆಯೊಳಗೆ ವಿಚಾರಸಂಕಿರಣ ನಡೆಸಿದರೆ ಪ್ರಯೋಜನ ಆಗುವುದಿಲ್ಲ’ ಎಂದು ಹೇಳಿದರು.

ಕ್ರಿಮಿನಲ್ ಆಗುತ್ತಾರೆ: ‘ಮೈಸೂರು ದಸರಾ ಮಹೋತ್ಸವಕ್ಕೆ ಬರುವ ಮಾವುತರ ಮಕ್ಕಳಿಗೆ ಟೆಂಟ್‌ ಶಾಲೆ ನಡೆಸಲಾಗುತ್ತದೆ. ಆದರೆ, ಇಲ್ಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲ. ಅಧಿಕಾರಿಗಳನ್ನು ಕೇಳಿದರೆ, ಕಾರ್ಮಿಕರಷ್ಟೇ ಕೆಲಸ ಮಾಡುತ್ತಿದ್ದು ಅವರೊಂದಿಗೆ ಮಕ್ಕಳಿದ್ದಾರೆ ಎನ್ನಲೂಬಹುದು’ ಎಂದು ವ್ಯಂಗ್ಯವಾಡಿದರು.

‘ವಿದೇಶಗಳಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲಾಗುತ್ತಿದೆ. ಅಲ್ಲಿ ಅವರನ್ನು ದಂಡಿಸುವುದು ಕೂಡ ಅಪರಾಧವೇ. ದೇಶದಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಬಾಲಕಾರ್ಮಿಕ ಪದ್ಧತಿ ಹೋಗಿಲ್ಲ. ಫುಟ್‌ಪಾತ್‌ನಲ್ಲಿ ಬೆಳೆದ ಮಗು ಮುಂದೆ ಕ್ರಿಮಿನಲ್ ಆಗಲು ನಾವೇ (ಸಮಾಜ) ಕಾರಣವಾಗುತ್ತೇವೆ. ಮಗುವಿನ ಹಕ್ಕನ್ನು ಮೂಲದಲ್ಲೇ ರಕ್ಷಿಸಿದರೆ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳದಿದ್ದರೆ ಯಾವ ಕಾನೂನು ತಂದರೂ ಪ್ರಯೋಜನ ಆಗುವುದಿಲ್ಲ’ ಎಂದು ಸಲಹೆ ನೀಡಿದರು.

ಪ್ರಜ್ಞಾವಂತರಾಗಬೇಕು: ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ‘ನಾವು ಸುಶಿಕ್ಷಿತರೊಂದಿಗೆ ಪ್ರಜ್ಞಾವಂತರೂ ಆಗಬೇಕು. ಮಗು ಬಾಲ್ಯ‌ ಕಳೆದುಕೊಂಡರೆ ಇಡೀ ಭವಿಷ್ಯವೇ ಹಾಳಾಗುತ್ತದೆ. ಅದಕ್ಕೆ ಇಡೀ ಸಮುದಾಯವೇ ಹೊಣೆ ಆಗಬೇಕಾಗುತ್ತದೆ. ಇದಕ್ಕೆ ಅವಕಾಶವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದಾಗಿದೆ’ ಎಂದು ತಿಳಿಸಿದರು.

ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯದೇವರಾಜ ಅರಸ್, ಆರ್‌ಸಿಯು ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಡಾ.ಅಶೋಕ ಡಿಸೋಜಾ, ಅಥಣಿಯ ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್. ಪಾಟೀಲ, ಸ್ಪಂದನ ಸಂಸ್ಥೆ ನಿರ್ದೇಶಕಿ ವಿ. ಸುಶೀಲಾ, ಮಕ್ಕಳ ಕಲ್ಯಾಣ ಸಂಸ್ಥೆ ಅಧ್ಯಕ್ಷೆ ಸಿಸ್ಟರ್ ಲೂರ್ದ್‌ ಮೇರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು