ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಮೈತ್ರಿಕೂಟಗಳಿಗೆ ಬೇಕು ಅಂಕುಶ

Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕದ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಮತದಾರ ಸ್ಪಷ್ಟ ಬಹುಮತವನ್ನು ಯಾರಿಗೂ ನೀಡಲಿಲ್ಲ. ಇದರ ರಾಜಕೀಯ ಪರಿಣಾಮವೆಂಬಂತೆ, ಚುನಾವಣೆಯಲ್ಲಿ ಸೋತ ಪಕ್ಷಗಳು ಸರ್ಕಾರ ರಚಿಸಲು ಒಟ್ಟುಗೂಡಿದವು. ಹೀಗಾಗಲಿ ಎಂದು ಜನ ಬಯಸಿರಲಿಲ್ಲ. ಸರ್ಕಾರ ರಚನೆ ಹಾಗೂ ಪಕ್ಷಾಂತರಕ್ಕೆ ಸಂಬಂಧಿಸಿದ ಕಾನೂನುಗಳ ಪುನರ್‌ ಪರಿಶೀಲನೆಯ ಅಗತ್ಯವನ್ನು ಈ ಬೆಳವಣಿಗೆಯು ಹೇಳುತ್ತಿದೆ. ಜನರ ತೀರ್ಪು ಹಾಗೂ ಚುನಾವಣಾ ಫಲಿತಾಂಶ ಬಂದ ನಂತರ ರಚನೆಯಾಗುವ ಸರ್ಕಾರದ ನಡುವೆ ಏನಾದರೂ ಸಂಬಂಧ ಇರಬೇಕು ಎಂದು ಬಯಸುವುದಾದರೆ, ಚುನಾವಣಾಪೂರ್ವ ಮೈತ್ರಿಕೂಟಗಳಿಗೆ ಪಾವಿತ್ರ್ಯ ನೀಡುವ ಹಾಗೂ ಚುನಾವಣೋತ್ತರ ಅವಕಾಶವಾದಿ ಮೈತ್ರಿಕೂಟಗಳಿಗೆ ಮಾನ್ಯತೆ ಇಲ್ಲದಂತೆ ಮಾಡುವ ಕಾನೂನು ಜಾರಿಗೆ ತರಬೇಕೇನೋ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ವಿಶ್ವಾಸಮತ ಸಾಬೀತು ಮಾಡದೆ ಸೋಲೊಪ್ಪಿಕೊಳ್ಳುವುದು ಬಿ.ಎಸ್. ಯಡಿಯೂರಪ್ಪ ಅವರಿಗೆ ಆ ಸಂದರ್ಭದಲ್ಲಿ ಮುಕ್ತವಾಗಿದ್ದ ಏಕೈಕ ಗೌರವಯುತ ಆಯ್ಕೆ ಆಗಿತ್ತು. ಶಾಸಕರ ಖರೀದಿಯನ್ನು ಮುಕ್ತವಾಗಿ ನಡೆಸಬಹುದಿದ್ದ ಕಾಲವೊಂದು ಇತ್ತು. ಆದರೆ, ಆ ದಿನಗಳು ಮುಗಿದುಹೋಗಿವೆ. 60ರ ದಶಕದ ಮಧ್ಯ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಜನಪ್ರಿಯತೆ ಕಳೆದುಕೊಂಡಾಗ, ಪಕ್ಷಾಂತರ ಎಂಬುದು ಸಹಜವಾಗಿತ್ತು. ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್ಸಿಗೆ, ಅಧಿಕಾರದಿಂದ ಹೊರಗೆ ಇರುವ ಸ್ಥಿತಿಯನ್ನು ಅರಗಿಸಿಕೊಳ್ಳಲಿಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ಅದು ತಮ್ಮ ಸಂಪನ್ಮೂಲಗಳನ್ನು ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಲು ಹಾಗೂ ರಾಜ್ಯಗಳ ಮಟ್ಟದಲ್ಲಿ ರಚನೆ ಆಗಿದ್ದ ಮೈತ್ರಿ ಸರ್ಕಾರಗಳನ್ನು ಉರುಳಿಸಲು ಬಳಸಿಕೊಳ್ಳಲು ಆರಂಭಿಸಿತು.

ಎಗ್ಗಿಲ್ಲದೆ ನಡೆಯುತ್ತಿದ್ದ ‍ಪಕ್ಷಾಂತರವನ್ನು ತಡೆಯುವ ಮೊದಲ ಮಹತ್ವದ ಹೆಜ್ಜೆಯನ್ನು ಪಕ್ಷಾಂತರ ನಿಷೇಧ ಕಾನೂನಿಗೆ 1985ರಲ್ಲಿ ಸಂಸತ್ತು ಅನುಮೋದನೆ ನೀಡಿ, ಈ ಕಾನೂನನ್ನು ಸಂವಿಧಾನದ ಹತ್ತನೆಯ ಪರಿಚ್ಛೇದದಲ್ಲಿ ಸೇರಿಸುವ ಮೂಲಕ ಇಡಲಾಯಿತು. ಶಾಸನಸಭೆಯ ಸದಸ್ಯರು ಶಾಸನಸಭೆಗಳಲ್ಲಿ ಪಕ್ಷನಿಷ್ಠೆ ಬದಲಿಸುವುದನ್ನು ಈ ಕಾನೂನು ನಿರ್ಬಂಧಿಸಿತು. ಆದರೆ, ಪಕ್ಷಗಳ ವಿಭಜನೆ ಹಾಗೂ ವಿಲೀನಕ್ಕೆ ನಿರ್ಬಂಧ ಹೇರಲಿಲ್ಲ. ಶಾಸಕಾಂಗ ಪಕ್ಷವೊಂದರ ಮೂರನೆಯ ಒಂದರಷ್ಟು ಶಾಸಕರು ಪಕ್ಷದಿಂದ ಹೊರಬಂದು, ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಲು ಈ ಕಾನೂನು ಅವಕಾಶ ನೀಡಿತು. ಹಾಗೆಯೇ, ಶಾಸಕಾಂಗ ಪಕ್ಷವೊಂದರ ಮೂರನೆಯ ಎರಡರಷ್ಟು ಶಾಸಕರು ಪಕ್ಷದಿಂದ ಹೊರಬಂದು, ಇನ್ನೊಂದು ಪಕ್ಷದ ಜೊತೆ ವಿಲೀನ ಆಗಲು ಅಡ್ಡಿಯಿಲ್ಲ ಎಂದೂ ಕಾನೂನು ಹೇಳಿತು. ಈ ಕಾನೂನು ಪ್ರಶಂಸಾರ್ಹ ಪರಿಣಾಮವನ್ನು ಬೀರಿದಂತೆ ಆರಂಭದಲ್ಲಿ ಕಂಡುಬಂತು. ಆದರೆ, ರಾಜಕೀಯ ಪಕ್ಷಗಳು ಮತ್ತು ಶಾಸಕರು ಈ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಬಹುಬೇಗನೆ ಕಂಡುಕೊಂಡರು. ಶಾಸಕಾಂಗ ಪಕ್ಷವೊಂದನ್ನು ಒಡೆಯುವ ಅವಕಾಶವು ಅತಿಯಾಗಿ ದುರ್ಬಳಕೆ ಆಯಿತು. ಉದಾಹರಣೆಗೆ, ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ಎರಡು ಮತಗಳ ಕೊರತೆ ಎದುರಿಸುತ್ತಿರುವ ಮುಖ್ಯಮಂತ್ರಿಯೊಬ್ಬ, ಆರು ಜನ ಶಾಸಕರಿರುವ ಒಂದು ಪಕ್ಷದ ಇಬ್ಬರ ಮನವೊಲಿಸಿ ಆ ಪಕ್ಷವನ್ನು ‘ಒಡೆದು’, ಇಬ್ಬರು ತನ್ನ ಪರವಾಗಿ ಇರುವಂತೆ ಮಾಡಬಹುದಿತ್ತು. ಈ ಲೋಪವನ್ನು ಸಂವಿಧಾನದ 91ನೇ ತಿದ್ದುಪಡಿ ಮೂಲಕ ಸರಿಪಡಿಸಲು ಸಂಸತ್ತು ಮುಂದಾಯಿತು. ಈ ತಿದ್ದುಪಡಿಯು 2004ರಿಂದ ಜಾರಿಗೆ ಬಂತು. ಇದು ‍ಶಾಸಕಾಂಗ ಪಕ್ಷವನ್ನು ಒಡೆಯಲು ಇದ್ದ ಅವಕಾಶವನ್ನು ಕೊನೆಗೊಳಿಸಿತು. ಆ ಮೂಲಕ, ಪಕ್ಷದ ಮೂರನೆಯ ಒಂದರಷ್ಟು ಶಾಸಕರ ಪಕ್ಷನಿಷ್ಠೆ ಬದಲಾಗುವಂತೆ ಮಾಡುವ ಸಾಧ್ಯತೆಯನ್ನು ಇಲ್ಲವಾಗಿಸಿತು.

ಕರ್ನಾಟಕ ವಿಧಾನಸಭೆಗೆ 2008 ಹಾಗೂ 2018ರಲ್ಲಿ ಚುನಾವಣೆಗಳು ನಡೆದ ನಂತರದ ಬೆಳವಣಿಗೆಗಳ ಮೇಲೆ 91ನೇ ತಿದ್ದುಪಡಿಯು ಪರಿಣಾಮ ಬೀರಿದೆ. 2008ರಲ್ಲಿ ಯಡಿಯೂರಪ್ಪ ಅವರು ಪಕ್ಷವನ್ನು ಮುನ್ನಡೆಸಿ, ಅದ್ಭುತ ಪ್ರದರ್ಶನ ತೋರುವಂತೆ ಮಾಡಿದರು. ಆದರೆ, 224 ಸದಸ್ಯ ಬಲದ ವಿಧಾನಸಭೆಯಲ್ಲಿ ಅವರ ಪಕ್ಷ 110 ಸ್ಥಾನಗಳನ್ನು ಗೆದ್ದುಕೊಳ್ಳಲು ಸಾಧ್ಯವಾಯಿತು. ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಸಾಬೀತು ಮಾಡಲು ಕೇವಲ ಮೂರು ಶಾಸಕರ ಕೊರತೆ ಇತ್ತು. ಆರು ಜನ ಪಕ್ಷೇತರ ಶಾಸಕರ ಬೆಂಬಲ ಪಡೆದು, ಯಡಿಯೂರಪ್ಪ ಅವರು ತಕ್ಷಣಕ್ಕೆ ಆ ಕೊರತೆ ತುಂಬಿಸಿಕೊಂಡರು. ತಮ್ಮ ಸ್ಥಾನವನ್ನು ಇನ್ನಷ್ಟು ಭದ್ರ ಮಾಡಿಕೊಳ್ಳುವ ಉದ್ದೇಶದಿಂದ ಯಡಿಯೂರಪ್ಪ ಅವರು ‘ಆಪರೇಷನ್ ಕಮಲ’ ಆರಂಭಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಹಲವು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಮಾಡಿ, ಬಿಜೆಪಿ ಟಿಕೆಟ್‌ ಅಡಿ ಪುನಃ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದರು. ಅವರಲ್ಲಿ ಹಲವರು ಗೆಲುವು ಸಾಧಿಸಿದರು. ಆ ಮೂಲಕ ಯಡಿಯೂರಪ್ಪ ಅವರಿಗೆ ಅಗತ್ಯವಾದ ಬಹುಮತದ ಭದ್ರತೆ ದೊರೆಯಿತು.

2018ರಲ್ಲಿ ಎದುರಾದ ಸನ್ನಿವೇಶವೇ ಬೇರೆ. ಬಿಜೆಪಿ ಗೆದ್ದಿದ್ದು 104 ಸ್ಥಾನಗಳನ್ನು. ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಸಾಬೀತು ಮಾಡಲು ಇನ್ನೂ ಒಂಬತ್ತು ಶಾಸಕರ ಅಗತ್ಯ ಇತ್ತು. ಪಕ್ಷೇತರ ಶಾಸಕರು ಇದ್ದಿದ್ದು ಇಬ್ಬರು ಮಾತ್ರ. 2008ರಲ್ಲಿ ಮಾಡಿದ್ದನ್ನೇ ಪುನಃ ಮಾಡಬೇಕು ಎಂದಾಗಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಒಂದು ಡಜನ್‌ ಅಥವಾ ಅದಕ್ಕಿಂತ ಹೆಚ್ಚಿನ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ಮಾಡಿ, ಅವರಿಗೆ ಬಿಜೆಪಿ ಟಿಕೆಟ್ ನೀಡಿ, ಅವರನ್ನು ಗೆಲ್ಲಿಸಿಕೊಳ್ಳಬೇಕಿತ್ತು. ಇದು ಬಿಜೆಪಿಯನ್ನು ರಾಜಕೀಯವಾಗಿ ಇಕ್ಕಟ್ಟಿನ ಸ್ಥಿತಿಗೆ ತಳ್ಳುತ್ತಿತ್ತು. ಪಕ್ಷ ತನ್ನನ್ನು ನೈತಿಕವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲಗೊಳಿಸುತ್ತಿತ್ತು. ಮೋದಿ ಅವರ ವಿರೋಧಿಗಳಿಗೆ ಅವರ ಮೇಲೆ ವಾಗ್ದಾಳಿ ನಡೆಸಲು ಹೊಸ ಅಸ್ತ್ರ ಸಿಕ್ಕಂತೆ ಆಗುತ್ತಿತ್ತು. ಇವೆಲ್ಲ ಏನೇ ಇರಲಿ. ನಂತರ ನಡೆದಿದ್ದು ಜನಾದೇಶಕ್ಕೆ ಪೂರಕವಾಗಿದೆ ಎಂದೇನೂ ಹೇಳಲಾಗದು. ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವೆ ಮೂಡಿದ ಅಪವಿತ್ರ, ತತ್ವರಹಿತ ಮೈತ್ರಿಯು ಮತದಾರರು ಬಯಸಿದ್ದಂತೂ ಖಂಡಿತಾ ಆಗಿರಲಿಲ್ಲ.

ಮತದಾರರ ಅಭಿಲಾಷೆ ಹಾಗೂ ಚುನಾವಣೆಯ ನಂತರ ರಚನೆಯಾಗುವ ಸರ್ಕಾರದ ನಡುವೆ ವ್ಯತ್ಯಾಸ ಇರಬಾರದು ಎನ್ನುವ ವಿಷಯದ ಎದುರು ಇದು ನಮ್ಮನ್ನು ತಂದು ನಿಲ್ಲಿಸುತ್ತದೆ.

ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ರಚನೆಯಾದ ‘ಸಂವಿಧಾನ ಪುನರ್‌ ಪರಿಶೀಲನೆಗಾಗಿನ ರಾಷ್ಟ್ರೀಯ ಆಯೋಗ’ವು ಈ ವಿಚಾರವನ್ನು ವಿಸ್ತೃತವಾಗಿ ಪರಿಶೀಲಿಸಿತು. ‘ಒಂದು ಪಕ್ಷ ಅಥವಾ ಪಕ್ಷಗಳ ಒಂದು ಗುಂಪಿನಿಂದ ವೈಯಕ್ತಿಕ ನೆಲೆಯಲ್ಲಾಗಲಿ, ಗುಂಪಾಗಿಯಾಗಲಿ ಪಕ್ಷಾಂತರ ಮಾಡುವವರು ತಮ್ಮ ಸಂಸತ್ ಅಥವಾ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಹೊಸದಾಗಿ ಚುನಾವಣೆ ಎದುರಿಸಬೇಕು ಎಂದು ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎನ್ನುವ ಶಿಫಾರಸು ನೀಡಿತು. ಆಯೋಗದ ಶಿಫಾರಸನ್ನು ಒಪ್ಪಿಕೊಂಡ ಕೇಂದ್ರ ಸರ್ಕಾರ, ಸಂವಿಧಾನಕ್ಕೆ 91ನೇ ತಿದ್ದುಪಡಿ ತಂದಿತು. ಇದು ಪಕ್ಷ ಒಡೆಯುವುದನ್ನು ತಪ್ಪಿಸಿತು. ಆದರೆ, ಚುನಾವಣಾಪೂರ್ವ ಮೈತ್ರಿಕೂಟಗಳ ಪಾವಿತ್ರ್ಯದ ಕುರಿತು ಆಯೋಗ ನೀಡಿರುವ ಶಿಫಾರಸನ್ನು ಈವರೆಗೆ ಅನುಷ್ಠಾನಕ್ಕೆ ತಂದಿಲ್ಲ.

ಶಾಸನಸಭೆಯಲ್ಲಿ ಸ್ಪಷ್ಟ ಬಹುಮತ ಪಡೆಯಲು ಒಂದೇ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲವಾದ ಕಾರಣ ಮೈತ್ರಿಕೂಟಗಳು ಅನಿವಾರ್ಯ ಆಗುತ್ತಿವೆ ಎಂದು ವೀರಪ್ಪ ಮೊಯಿಲಿ ನೇತೃತ್ವದ ‘ಎರಡನೆಯ ಆಡಳಿತ ಸುಧಾರಣಾ ಆಯೋಗ’ ಹೇಳಿತು. ‘ಮೈತ್ರಿಕೂಟಗಳಿಗೆ ಮಾನ್ಯತೆ ಪಡೆದುಕೊಳ್ಳಲು, ಮೈತ್ರಿಯ ಪಾಲುದಾರ ಪಕ್ಷಗಳು ವಿಸ್ತೃತ ನೆಲೆಗಟ್ಟಿನ ಆಧಾರದ ಕಾರ್ಯಕ್ರಮಗಳ ವಿಚಾರವಾಗಿ ಒಮ್ಮತಕ್ಕೆ ಬರುವುದು ಅಗತ್ಯ. ಇಂತಹ ಒಮ್ಮತವನ್ನು ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಅಡಿ ಪಟ್ಟಿಮಾಡಿಕೊಳ್ಳಬೇಕು. ಇದನ್ನು ಚುನಾವಣೆಗೂ ಮೊದಲು ಅಥವಾ ಮೈತ್ರಿ ಸರ್ಕಾರದ ರಚನೆಗೂ ಮುನ್ನ ಬಹಿರಂಗಪಡಿಸಬೇಕು’ ಎಂದು ಆಯೋಗ ಹೇಳಿತು.

ಮೈತ್ರಿ ಸರ್ಕಾರದ ಪಾಲುದಾರರು ಅವಕಾಶವಾದಿತನ ಹಾಗೂ ಅಧಿಕಾರ ಲಾಲಸೆಯ ಕಾರಣದಿಂದಾಗಿ ನಡುವಿನಲ್ಲಿಯೇ ಬೇರೊಬ್ಬರ ಜೊತೆ ಮೈತ್ರಿ ಮಾಡಿಕೊಂಡರೆ, ಹೊಸ ಮೈತ್ರಿಕೂಟ ರಚನೆಯಾದರೆ ಮೈತ್ರಿ ಸರ್ಕಾರದ ನೈತಿಕತೆಯ ಮೇಲೆ ಬಲವಾದ ಏಟು ಬೀಳುತ್ತದೆ ಎಂದು ಮೊಯಿಲಿ ಆಯೋಗ ಹೇಳಿತು. ‘ಜನರ ಆದೇಶ ಅನುಷ್ಠಾನಕ್ಕೆ ಬರುವಂತೆ ಆಗಲು, ಅವಕಾಶವಾದಿತನ ಹಾಗೂ ಮೈತ್ರಿಯ ಪಾಲುದಾರರ ಬದಲಾಯಿಸುವಿಕೆ ನಡೆಯದಂತೆ ನೈತಿಕ ಚೌಕಟ್ಟೊಂದನ್ನು ರೂಪಿಸಿಕೊಳ್ಳುವುದು ಅಗತ್ಯ’ ಎಂದೂ ಅದು ಹೇಳಿತು.

ಪಕ್ಷವೊಂದರ ಶಾಸಕರು, ಚುನಾವಣಾಪೂರ್ವ ಅಥವಾ ಚುನಾವಣೋತ್ತರ ಸಂದರ್ಭದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪಾಲುದಾರರು ತಮ್ಮ ಮೈತ್ರಿಕೂಟಕ್ಕೆ ಹೊರತಾದ ಪಕ್ಷದ ಜೊತೆ ಹೊಂದಾಣಿಕೆಗೆ ಮುಂದಾದ ಸಂದರ್ಭದಲ್ಲಿ ಹೊಸದಾಗಿ ಚುನಾವಣೆ ಎದುರಿಸಬೇಕು ಎನ್ನುವ ತಿದ್ದುಪಡಿಯನ್ನು ಸಂವಿಧಾನಕ್ಕೆ ತರಬೇಕು ಎಂದೂ ಆಯೋಗ ಶಿಫಾರಸು ಮಾಡಿತು.

ಈ ವಾದವನ್ನು ವಿಸ್ತರಿಸಿ ಹೇಳುವುದಾದರೆ, ‘ಚುನಾವಣಾ ಪ್ರಚಾರದ ವೇಳೆ ಒಬ್ಬರ ವಿರುದ್ಧ ಇನ್ನೊಬ್ಬರು ತೊಡೆ ತಟ್ಟಿದ್ದವರು, ಚುನಾವಣೆಯ ನಂತರ ಮೈತ್ರಿ ಮಾಡಿಕೊಳ್ಳುವುದು ಕೂಡ ಅನೈತಿಕವಾಗುತ್ತದೆ.’ ಈ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಾರದಿದ್ದರೆ, ಜನರ ಆದೇಶ ಹಾಗೂ ಸರ್ಕಾರ ರಚನೆಯ ನಡುವೆ ಸಂಬಂಧವೇ ಇಲ್ಲದಿರುವುದನ್ನು ಜನ ಕಾಣಬೇಕಾಗುತ್ತದೆ.

(ಲೇಖಕ ‘ಪ್ರಸಾರ ಭಾರತಿ’ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT