ಶನಿವಾರ, ಡಿಸೆಂಬರ್ 7, 2019
21 °C

ಆರ್ಥಿಕವಾಗಿ ಹಿಂದುಳಿದವರಿಗೆ 4 ಲಕ್ಷ ಮನೆಗಳ ನಿರ್ಮಾಣ: ಖಾದರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಆರ್ಥಿಕವಾಗಿ ಹಿಂದುಳಿದವರಿಗೆ ರಾಜ್ಯದ ವಿವಿಧೆಡೆ ನಾಲ್ಕು ಲಕ್ಷ ಮನೆಗಳ ನಿರ್ಮಾಣಕ್ಕೆ ಜ.26ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್‌ ಇಲ್ಲಿ ಗುರುವಾರ ತಿಳಿಸಿದರು.

ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟ (ಕ್ರೆಡಾಯ್) ಆಯೋಜಿಸಿದ್ದ ‘ಬೆಳೆಯುತ್ತಿರುವ ನಗರಗಳು– ಭಾರತದ ಭವಿಷ್ಯ’ ಸಮ್ಮೇಳನದಲ್ಲಿ ಮಾತನಾಡಿದರು.

ಈಗಾಗಲೇ ಬೆಂಗಳೂರಿನಲ್ಲಿ ಸಾವಿರ ಎಕರೆ ಜಾಗ ಗುರುತಿಸಲಾಗಿದೆ. ಮಹಾನಗರ ವ್ಯಾಪ್ತಿಯಲ್ಲಿ 1 ಲಕ್ಷ ಮನೆ ನಿರ್ಮಿಸಲಾಗುವುದು. ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಕೂಡ ಟೆಂಡರ್‌ನಲ್ಲಿ ಭಾಗವಹಿಸಬಹುದು. ಒಂದು ಸಂಸ್ಥೆಗೆ 10 ಸಾವಿರದವರೆಗೆ ಮನೆ ನಿರ್ಮಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಕಟ್ಟಡ ನಕ್ಷೆ, ಬಡಾವಣೆ ನಕ್ಷೆಗೆ ಒಪ್ಪಿಗೆ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಈ ವ್ಯವಸ್ಥೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟಕ್ಕೆ ಮನವಿ ಮಾಡಿದರು.

‘ರಿಯಲ್‌ ಎಸ್ಟೇಟ್‌ ಸುಂಕ ಇಳಿಸಿ’

ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ‘ರೇರಾ’ ಕಾಯ್ದೆಯಿಂದ ರಿಯಲ್‌ ಎಸ್ಟೇಟ್‌ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಹಣದ ಹರಿವು ತಗ್ಗಿದೆ ಎಂದು ‘ಕ್ರೆಡಾಯ್‌’ ರಾಷ್ಟ್ರೀಯ ಮುಖ್ಯಸ್ಥ ಗೀತಾಂಬರ್‌ ಆನಂದ್‌ ಕಳವಳ ವ್ಯಕ್ತಪಡಿಸಿದರು.

‘ರಿಯಲ್‌ ಎಸ್ಟೇಟ್‌ ಮೇಲಿರುವ ಶೇ 12ರಷ್ಟು ಜಿಎಸ್‌ಟಿಯನ್ನು ಶೇ 8ಕ್ಕೆ ಇಳಿಸಬೇಕು. ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ವಿಧಾನಗಳನ್ನು ಸರಳೀಕೃತಗೊಳಿಸಬೇಕು. ಪರವಾನಗಿ ಹಾಗೂ ಇತರ ಒಪ್ಪಿಗೆ ಪಡೆಯಲು ಎಲ್ಲಾ ರಾಜ್ಯಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು. ಅನಧಿಕೃತ ಕಟ್ಟಡ ನಿರ್ಮಾಣದಾರರಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ಮೈಸೂರು ಸೇರಿದಂತೆ 2 ಹಾಗೂ 3ನೇ ಹಂತದ ನಗರಗಳಲ್ಲಿ ಹೆಚ್ಚು ಹೂಡಿಕೆ ಮಾಡುವ ಗುರಿಯನ್ನು ಕ್ರೆಡಾಯ್‌ ಹೊಂದಿದೆ. ಇದರಿಂದ ಈ ನಗರಗಳಲ್ಲಿ ಮೂಲ ಸೌಕರ್ಯ, ಸಂಪರ್ಕ ವ್ಯವಸ್ಥೆಗೆ ಆದ್ಯತೆ ಸಿಗಲಿದೆ. ಉದ್ಯೋಗವೂ ಹೆಚ್ಚಲಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು