ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಕ್ಯಾರೆಟ್‍ಗೆ ಕಿರೀಟ!

Last Updated 23 ಏಪ್ರಿಲ್ 2018, 20:29 IST
ಅಕ್ಷರ ಗಾತ್ರ

‘ಆಗಲ್ಲ ಸ್ವಾಮೇ! ಬರೋ ದುಡ್ಡೆಲ್ಲಾ ಬೀಜ, ಗೊಬ್ಬರಕ್ಕೆ ಸರಿ ಹೋಯ್ತದೆ. ಏನೂ ಉಳಿಯಲ್ಲ’ ಕೊಡಲಿಪುರದ ವೆಂಕಟೇಶ್ ಸೋತ ದನಿಯಲ್ಲಿ ಹೇಳಿದರು. ‘ಹೈಬ್ರಿಡ್‍ಗೆ ರೋಗಾನೂ ಜಾಸ್ತಿ, ಬಿಸಿಲಿಗೂ ತಡೆಯಲ್ಲ. ಒಂದು ಎಕರೆಗೆ ಇಪ್ಪತೈದು ಸಾವಿರ ರೂಪಾಯಿ ಬೀಜ ಬೇಕು‘ ಶಾರದಮ್ಮ ದನಿಗೂಡಿಸಿದರು.

ಬೆಂಗಳೂರು ಮಹಾನಗರಕ್ಕೆ ಪ್ರತಿದಿನ ಒಂದು ಟೆಂಪೊ ಸಾವಯವ ತರಕಾರಿ ಕಳುಹಿಸುವ ಸಹಜ ಸಾವಯವ ತರಕಾರಿ ಬೆಳೆಗಾರರ ಸಂಘದ ಸದಸ್ಯರು ಕ್ಯಾರೆಟ್ ಕೃಷಿಯನ್ನು ಲಾಭದಾಯಕವಾಗಿಸುವ ಕುರಿತು ಚರ್ಚಿಸಲು ಸಭೆ ಸೇರಿದ್ದರು. ಕೃಷಿ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಕ್ಯಾರೆಟ್ ಕೃಷಿಗೆ ಹೊಸ ರೂಪ ಕೊಡದೆ, ಲಾಭ ಗಳಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಕ್ಯಾರೆಟ್ ಕೃಷಿಯನ್ನು ಖುಷಿಯಾಗಿಸುವ ಮಾರ್ಗೋಪಾಯಗಳ ಚರ್ಚೆಯ ನಡುವೆ ‘ಯಾಕೆ ನಾಟಿ ಕ್ಯಾರೆಟ್ ಬೆಳೀಬಾರ್ದು? ನಾವು ಚಿಕ್ಕವರಿದ್ದಾಗ ಅದೇ ಬೆಳೀತಿದ್ವಿ, ಜಾಸ್ತಿ ನೀರೂ ಕೇಳಲ್ಲ, ಖರ್ಚು ಇಲ್ಲ. ನಾವೇ ಬೀಜ ಹಿಡೀಬಹುದು’ ಎಂಬ ಸರಸ್ವತಮ್ಮನವರ ಮಾತಿಗೆ ಉಳಿದವರು ತಲೆದೂಗಿದರು.

ದೇಸಿ ಕ್ಯಾರೆಟ್ ಬೆಳೆಯುವುದು ಎಂದೇನೋ ನಿರ್ಧಾರವಾಯಿತು. ಆದರೆ ದೇಸಿ ಬೀಜ ಎಲ್ಲಿ ಸಿಕ್ಕೀತು? ಸಾವಯವ ತರಕಾರಿ ಬೆಳೆಗಾರರನ್ನು ಸಂಘಟಿಸಿದ ಸಹಜ ಸಮೃದ್ಧ ಸಂಸ್ಥೆಗೆ ಬೀಜ ಹುಡುಕಾಟದ ಜವಾಬ್ದಾರಿಯನ್ನು ಮತ್ತು ಮಾಯಸಂದ್ರದ ಬೀಜ ಬ್ಯಾಂಕ್ ನಡೆಸುವ ಅಂಕುರ ಮಹಿಳಾ ಸಂಘಕ್ಕೆ ಕಾರ್ಯಕ್ರಮದ ಉಸ್ತುವಾರಿಯನ್ನೂ ವಹಿಸಲಾಯಿತು. ಸಹಜ ಸಮೃದ್ಧ, ನಿಮ್ಮೈ ಗಾರ್ಡನ್‍ನ ವಿಶ್ವನಾಥರ ಸಹಕಾರದಿಂದ ಕಪ್ಪು, ಹಳದಿ, ಕೇಸರಿ ಮತ್ತು ಕೆಂಪು ಕ್ಯಾರೆಟ್‍ಗಳ ಬೀಜಗಳನ್ನು ಸಂಗ್ರಹಿಸಿತು. ದೇಸಿ ಕ್ಯಾರೆಟ್‍ನ ತಳಿಗಳನ್ನು ಬೆಳೆದು ನೋಡಲು ಮಾಯಸಂದ್ರದ ಆಂಜಿನಪ್ಪ ಮತ್ತು ಸುಶೀಲಮ್ಮ ದಂಪತಿ‌ ಮುಂದೆ ಬಂದರು. ತಮ್ಮ ಮನೆ ಪಕ್ಕದ 15 ಗುಂಟೆ ಜಮೀನನ್ನು ಸಮನಾಗಿ ವಿಂಗಡಿಸಿ, ಜನವರಿ ಮೊದಲ ವಾರ ನಾಲ್ಕು ಬಗೆಯ ಕ್ಯಾರೆಟ್ ಬೀಜಗಳನ್ನು ಬಿತ್ತಿದರು. ಸ್ಥಳೀಯವಾಗಿ ಬೆಳೆಸುವ ಹೈಬ್ರಿಡ್ ಕ್ಯಾರೆಟ್ ತಳಿಯನ್ನು ಹೋಲಿಕೆಗಾಗಿ ದೇಸಿ ತಳಿಗಳ ಪಕ್ಕದಲ್ಲೇ ಬೆಳೆಸಿದರು. ಪ್ರಾತ್ಯಕ್ಷಿಕೆ ತಾಕು ಸಿದ್ಧವಾಯಿತು.

ಬಹುವರ್ಣದ ಎಲೆ ಮತ್ತು ಕಾಂಡದ ರಚನೆ ಯಿಂದ ಕ್ಯಾರೆಟ್ ತಳಿಗಳು ಆರಂಭದಲ್ಲೇ ಎಲ್ಲರ ಗಮನ ಸೆಳೆಯಲಾರಂಭಿಸಿದವು. ಹೋಗಿ ಬರುವವರೆಲ್ಲಾ ಒಂದು ಕ್ಷಣ ನಿಂತು, ‘ಇದು ಎಂತ ಕ್ಯಾರೆಟ್’ ಎಂದು ಕೇಳುವಂತಾಯಿತು. ಕಪ್ಪು ಕ್ಯಾರೇಟಂತೂ ವಿಶೇಷ ಆಕರ್ಷಣೆ. ಬಂದವರೆಲ್ಲಾ ಅದನ್ನು ಕಿತ್ತು ನೋಡುವ, ಬಲಿಯದ ಗೆಡ್ಡೆಯನ್ನು ಚಪ್ಪರಿಸುವ ತಮಾಷೆ ಸಾಮಾನ್ಯವಾಯಿತು. ಕೆಂಪು ಕ್ಯಾರೆಟ್ ಅವಧಿಗೆ ಮುನ್ನವೇ ಹೂ ಬಿಟ್ಟು, ರುಚಿ ನೋಡಲೆಂದು ಕಿತ್ತವರ ಕೈಗೆ ಬರಿಯ ಬೇರು ಕೊಟ್ಟಿತು!

ಅಂತೂ ಏಪ್ರಿಲ್ ಎರಡನೆಯ ವಾರದ ಹೊತ್ತಿಗೆ ಕ್ಯಾರೆಟ್ ತಳಿಗಳು ಕಟಾವಿಗೆ ಸಿದ್ಧವಾದವು. ರೈತರಿಗೆ ಇಷ್ಟವಾಗುವ ತಳಿಯನ್ನು ಸಹಭಾಗಿತ್ವ ತಳಿ ಆಯ್ಕೆ ಮೂಲಕ ಗುರುತಿಸಲು ತೀರ್ಮಾನಿಸಲಾಯಿತು.

ಸಹಭಾಗಿತ್ವ ತಳಿ ಆಯ್ಕೆ

ಸಹಭಾಗಿತ್ವ ತಳಿ ಅಯ್ಕೆ (PVS- Participatory Varietal Selection), ರೈತರ ಸಹಯೋಗದಲ್ಲಿ ಉತ್ತಮ ತಳಿಯನ್ನು ಅಯ್ಕೆ ಮಾಡುವ ವಿಧಾನ. ಪ್ರಾತ್ಯಕ್ಷಿಕೆ ತಾಕಿನಲ್ಲಿರುವ ತಳಿಗಳ ಗುಣಲಕ್ಷಣಗಳನ್ನು ದಾಖಲು ಮಾಡುವ ಜೊತೆಗೆ, ಆಯಾ ತಳಿಯ ವಿಶೇಷತೆಗಳನ್ನು ಗಮನಿಸಲಾಗುತ್ತದೆ. ಇಳುವರಿಯನ್ನಷ್ಟೇ ಮುಖ್ಯವಾಗಿ ಪರಿಗಣಿಸದೆ, ತಳಿಯ ರೋಗ ನಿರೋಧಕ ಗುಣ, ಬರ ನಿರೋಧಕತೆ, ರುಚಿ, ಅಡುಗೆ ಗುಣಮಟ್ಟ, ಮಾರುಕಟ್ಟೆ ಬೇಡಿಕೆಯನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ರೈತರಿಗೂ ತಮ್ಮ ಹೊಲಕ್ಕೆ, ತಮ್ಮ ಊರಿಗೆ ಸೂಕ್ತ ಎನಿಸುವ ತಳಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅಡುಗೆಗೆ ಸೂಕ್ತವಾದ ತಳಿ ಆಯ್ಕೆಯ ಅವಕಾಶ ರೈತ ಮಹಿಳೆಯರಿಗೆ ಲಭಿಸುತ್ತದೆ.

‘ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸುವ ತಳಿಗಳು ಲ್ಯಾಬ್‍ನಲ್ಲಿ ರೂಪಗೊಂಡಂಥವು. ರೈತರ ಅಗತ್ಯ, ಸ್ಥಳೀಯ ವಾತಾವರಣ ಮತ್ತು ಮಣ್ಣಿನ ಗುಣಕ್ಕೆ ಅವು ಹೊಂದಿಕೊಳ್ಳುವ ಖಾತ್ರಿ ಇಲ್ಲ. ಇಳುವರಿಯನ್ನಷ್ಟೇ ಮುಖ್ಯವಾಗಿರಿಸಿಕೊಂಡು ತಳಿಗಳನ್ನು ಬಿಡುಗಡೆ ಮಾಡುತ್ತಾರೆ. ದೇಸಿ ಕ್ಯಾರೆಟ್‍ನ ತಳಿ ಆಯ್ಕೆಯನ್ನು ರೈತರೇ ಮಾಡಬೇಕೆಂಬ ಉದ್ದೇಶದಿಂದ ಸಹಭಾಗಿತ್ವ ತಳಿ ಆಯ್ಕೆ ವಿಧಾನ ಅಳವಡಿಸಿಕೊಂಡೆವು’

ಎಂದು ಸಹಜ ಸಮೃದ್ಧದ ಅನಿತಾರೆಡ್ಡಿ ವಿವರಿಸುತ್ತಾರೆ. ಕ್ಯಾರೆಟ್ ಕೃಷಿಯಲ್ಲಿ ಹೆಚ್ಚು ಅನುಭವವಿರುವ ಇಪ್ಪತೈದು ಜನ ರೈತರನ್ನು ಆಯ್ಕೆ ಮಾಡಲಾಯಿತು. ಕ್ಯಾರೆಟ್ ಪ್ರೀತಿಯ ಗ್ರಾಹಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಕ್ಷೇತ್ರೋತ್ಸವದ ದಿನ ಕ್ಯಾರೆಟ್ ಗೆಡ್ಡೆಗಳನ್ನು ಕಿತ್ತು, ಆಯಾ ತಾಕಿನಲ್ಲಿ ರಾಶಿ ಹಾಕಲಾಯಿತು. ಕ್ಯಾರೆಟ್ ಹೊಲಕ್ಕೆ ಬಂದ ಜ್ಞಾನವಂತ ರೈತರು, ಕ್ಯಾರೆಟ್‍ನ ತಾಕುಗಳಲ್ಲಿ ಸುತ್ತಾಡಿ, ಗಿಡದ ಬೆಳವಣಿಗೆ, ಗೆಡ್ಡೆ ರೂಪುಗೊಂಡಿರುವ ಬಗೆ, ಇಳುವರಿ, ಕೀಟ ಮತ್ತು ರೋಗ ನಿರೋಧಕತೆ, ಕ್ಯಾರೆಟ್ ಬಣ್ಣ ಮೊದಲಾದ ಅಂಶಗಳನ್ನು ಗಮನಿಸಿದರು. ಕ್ಯಾರೆಟ್ ಗುಣಲಕ್ಷಣಗಳನ್ನು ಅಧ್ಯಯನ ಮಾಡಿದ ರೈತರು ತಮ್ಮಿಷ್ಟದ ತಳಿಯ ತಾಕಿನಲ್ಲಿ ನೆಟ್ಟಿದ್ದ ಕಡ್ಡಿಗೆ ಬಣ್ಣದ ಟೇಪು ಕಟ್ಟಿದರು. ಸಂಘದ ಮಹಿಳೆಯರು ವಿವಿಧ ಬಣ್ಣದ ಕ್ಯಾರೆಟ್‍ಗಳಿಂದ ಹಲ್ವಾ, ಕೋಸಂಬರಿ, ಜ್ಯೂಸ್, ಸಲಾಡ್ ಸಿದ್ಧಮಾಡಿಟ್ಟಿದ್ದರು. ಇವುಗಳ ರುಚಿ ನೋಡಿದ ಗ್ರಾಹಕರು, ಕ್ಯಾರೆಟ್‍ನ ಬಣ್ಣ, ಮೃದುತ್ವ, ಬೇಯಲು ತೆಗೆದು ಕೊಳ್ಳುವ ಸಮಯ, ರುಚಿ, ಸಂಗ್ರಹಿಸಿಡಬಹುದಾದ ಕಾಲಾವಧಿ ಮೊದಲಾದ ಅಂಶಗಳನ್ನು ತಾಳೆ ಮಾಡಿ, ತಮ್ಮಿಷ್ಟದ ಕ್ಯಾರೆಟ್‍ಗೆ ಓಟ್ ಮಾಡಿದರು.

ನಂತರ ರೈತ ಮತ್ತು ಗ್ರಾಹಕರು ಪರಸ್ಪರ ಚರ್ಚಿಸಿ, ರೈತರ ಹೊಲ ಮತ್ತು ಗ್ರಾಹಕರ ಅಡುಗೆ ಮನೆ ಎರಡಕ್ಕೂ ಹೊಂದುವ ಕ್ಯಾರೆಟ್ ತಳಿಯನ್ನು ಆಯ್ಕೆ ಮಾಡಿದರು. ತಾಳಿಕೆ ಗುಣ, ಇಳುವರಿ, ಆಕರ್ಷಕ ಕಪ್ಪು ಬಣ್ಣ, ಗಡ್ಡೆಯ ಉದ್ದ, ಔಷಧೀಯ ಗುಣ ಹೊಂದಿದ ಕಪ್ಪು ಕ್ಯಾರೆಟ್‌ಗೆ ಹೆಚ್ಚು ಅಂಕ ಲಭಿಸಿತು. ಮಾರುಕಟ್ಟೆಗೆ ಸೂಕ್ತವಾಗಬಲ್ಲ, ಹೈಬ್ರಿಡ್ ತಳಿಗೆ ಸಡ್ಡು ಹೊಡೆಯಬಲ್ಲ ಕೇಸರಿ ಕ್ಯಾರೆಟ್‍ಗೆ ಎರಡನೇ ಸ್ಥಾನ ಸಿಕ್ಕಿತು. ತನ್ನ ವಿಶಿಷ್ಟ ರುಚಿಯಿಂದ ಎಲ್ಲರ ಗಮನ ಸೆಳೆದ ಹಳದಿ ಕ್ಯಾರೆಟ್‍ಗೆ ಮೂರನೇ ಸ್ಥಾನ. ಕಳೆಯ ರೀತಿ ಬೆಳೆಯುವ, ತಿನ್ನಲು ಸಪ್ಪೆಯಾದ, ಬೇರು ರೂಪದ ಕೆಂಪು ಕ್ಯಾರೆಟ್ ಬೆಳೆಸಲು ಸೂಕ್ತವಲ್ಲ ಎಂದು ರೈತರು ತೀರ್ಮಾನಿಸಿದರು.

‘ಅರಿಸಿನದ ಕ್ಯಾರೆಟ್ ಬಲೇ ಟೇಸ್ಟು, ಒಳ್ಳೆ ಜೀರಿಗೆ ಮಾವಿನಕಾಯಿ ತಿಂದಂಗೆ ಆಗ್ತದೆ, ನನ್ನ ಓಟು ಅದಕ್ಕೇನೆ. ಕರಿ ಕ್ಯಾರೆಟ್‍ಗೆ ಕಿರೀಟ ಸಿಕ್ಕಿರಬಹುದು. ನಾನು ಅರಿಸಿನದ ಕ್ಯಾರೆಟ್‍ಗೆ ಗಾಂಧಿ ಟೋಪಿ ಹಾಕ್ತೀನಿ. ಗೆಡ್ಡೆ ಸಣ್ಣ ಇದ್ರೂ, ರುಚಿ ತುಂಬಾನೇ ಚೆನ್ನಾಗೈತೆ’ ದೇಸಿ ಕ್ಯಾರೆಟ್‍ಗಳ ಬೆಳೆಸಿದ ಆಂಜಿನಪ್ಪ ಹಳದಿ ಕ್ಯಾರೆಟ್‍ಗೆ ಶಹಬ್ಬಾಸ್‍ಗಿರಿ ಕೊಟ್ಟರು.

ಬೆಂಗಳೂರಿನಿಂದ ಬಂದಿದ್ದ ಸೌಮ್ಯ, ‘ಕಪ್ಪು ಕ್ಯಾರೆಟ್‍ನ ಬಗ್ಗೆ ಕೇಳಿದ್ದೆವು. ಆದರೆ ನೋಡಿರಲಿಲ್ಲ. ಇಂದು ಅದರ ರುಚಿ ನೋಡುವ ಅವಕಾಶ ಸಿಕ್ಕಿತು. ಕ್ಯಾರೆಟ್ ಕೃಷಿಯ ಪರಿಚಯವೂ ಆಯಿತು. ಗ್ರಾಹಕರ ಆಯ್ಕೆಗೂ ಮನ್ನಣೆ ನೀಡುವ ಸಹಭಾಗಿತ್ವ ತಳಿ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ’ ಎನ್ನುತ್ತಾ, ಬಣ್ಣದ ಕ್ಯಾರೆಟ್‍ಗಳ ಕೊಳ್ಳಲು ತಾಕಿನತ್ತ ನಡೆದರು.

ವಿವಿಧ ಬಣ್ಣಗಳ ದೇಸಿ ಕ್ಯಾರೆಟ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆಗಳ ಬಗ್ಗೆ, ದೇಸಿ ಕ್ಯಾರೆಟ್ ಕೃಷಿ ಜನಪ್ರಿಯಗೊಳಿಸುವ ಬಗ್ಗೆ ಚರ್ಚೆಗಳಾದವು. ‘ಅನ್ನವೇ ಔಷಧ ಎಂದು ನಂಬಿರುವ ಗ್ರಾಹಕರ ಸಮೂಹ ಇಂದು ನಗರದಲ್ಲಿ ದೊಡ್ಡದಾಗಿ ಬೆಳೆದಿದೆ. ವಿಷಮುಕ್ತವಾಗಿ ಬೆಳೆದ ದೇಸಿ ಹಣ್ಣು ಮತ್ತು ತರಕಾರಿಗಳನ್ನು ಕೊಳ್ಳಲು ಇವರು ಸಿದ್ಧರಿದ್ದಾರೆ. ಇಳುವರಿಗೆ ಮಾತ್ರ ಗಮನ ಕೊಡದೆ, ರುಚಿ ಮತ್ತು ಪೌಷ್ಟಿಕತೆಗೂ ಪ್ರಾಮುಖ್ಯ ನೀಡಿ’ ಎಂದು ‘ಅನ್ನ ಆರೋಗ್ಯ’ ಗ್ರಾಹಕ ವೇದಿಕೆಯ ಆನಂದ್ ಧಾರವಾರಕರ್ ಸಲಹೆ ನೀಡಿದರು.

ಬರಿಯ ಕೇಸರಿ ಕ್ಯಾರೆಟ್‍ಗಳನ್ನು ನೋಡಿದ್ದ ರೈತರು, ಬಹುವರ್ಣದ ಕ್ಯಾರೆಟ್ ತಳಿಗಳ ನೋಡಿ ಖುಷಿಪಟ್ಟರು; ದೇಸಿ ಕ್ಯಾರೆಟ್ ಬೆಳೆಸಲು ತಮ್ಮ ಹೆಸರು ನೋಂದಾಯಿಸಿದರು. ಮುಂದಿನ ದಿನಗಳಲ್ಲಿ ಮಾಯಸಂದ್ರ ಗ್ರಾಮವನ್ನು ಬಣ್ಣದ ಕ್ಯಾರೆಟ್‍ಗಳ ತಾಣವಾಗಿಸುವ ಉಮೇದು ಸಹಜ ಸಾವಯವ ತರಕಾರಿ ಬೆಳೆಗಾರರ ಸಂಘದ್ದು. ಬೆಂಗಳೂರಿನ ಗ್ರಾಹಕರಿಗೆ ಕಪ್ಪು ಕ್ಯಾರೆಟ್ ಮತ್ತು ಇತರೆ ಬಣ್ಣದ ಕ್ಯಾರೆಟ್ ಕೊಡಲು ‘ಸಹಜ ಆರ್ಗ್ಯಾನಿಕ್ಸ್‌’ ಜೊತೆ ಸಂಘ ಒಪ್ಪಂದ ಮಾಡಿಕೊಂಡಿದೆ. ಆರೋಗ್ಯದ ಬಗ್ಗೆ ನಗರವಾಸಿಗಳಲ್ಲಿ ಹೆಚ್ಚುತ್ತಿರುವ ಕಾಳಜಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬಹುದಾದ, ಹೊಸ ಮಾರುಕಟ್ಟೆ ಸಾಧ್ಯತೆಗಳನ್ನು ಬಣ್ಣದ ಕ್ಯಾರೆಟ್ ತೆರೆದಿಟ್ಟಿವೆ. ಬಣ್ಣದ ಕ್ಯಾರೆಟ್‍ಗಳ ಚೆಲುವಿಗೆ ಮನ ಸೋಲದವರಾರು?

ದೇಸಿ ಕ್ಯಾರೆಟ್ ಕೃಷಿಯ ಮಾಹಿತಿಗೆ ಸಿದ್ದು ಬಣಕಾರ್ – 9591760372 ಮತ್ತು ಬೀಜಗಳಿಗಾಗಿ ಸಹಜ ಸೀಡ್ಸ್ -9108128123 ಸಂಪರ್ಕಿಸಬಹುದು.

**

ದೇಸಿ ಕ್ಯಾರೆಟ್‍ಗಳ ಲೋಕ

ಆಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದಲ್ಲಿ ವಿಕಾಸಗೊಂಡ ಕ್ಯಾರೆಟ್ ಮೂಲತಃ ಔಷಧೀಯ ಸಸ್ಯ. ಐದು ಸಾವಿರ ವರ್ಷಗಳಿಂದ ಇದರ ಕೃಷಿ ನಡೆಯುತ್ತಿದೆ. ಯುರೋಪ್ ಮತ್ತು ಜಪಾನಿನ ತೋಟಗಾರರು ಶತಮಾನಗಳ ಕಾಲ ಶ್ರಮಿಸಿ ಬಳಕೆಗೆ ಸೂಕ್ತವಾದ ಕೇಸರಿ ಕ್ಯಾರೆಟ್‌ ಅನ್ನು ಅಭಿವೃದ್ಧಿಪಡಿಸಿದರು. ದೇಸಿ ಕ್ಯಾರೆಟ್‍ನಲ್ಲಿ ಕೆಂಪು, ಹಳದಿ, ಬಿಳಿ, ಕಪ್ಪು, ಕೇಸರಿ ಮತ್ತು ಕೆನ್ನೀಲಿ ಬಣ್ಣಗಳ ವರ್ಣ ವೈವಿಧ್ಯ ತಳಿಗಳಿವೆ.

ಕಪ್ಪು ಕ್ಯಾರೆಟ್

ಗಾಢ ಕಪ್ಪು ಬಣ್ಣದ ತಳಿ, ಮಧ್ಯ ಪ್ರಾಚ್ಯ ಇದರ ಮೂಲ. ಗೆಡ್ಡೆ ಮತ್ತು ಕಾಂಡ ಕಪ್ಪು ಬಣ್ಣಕ್ಕಿರುವುದು ವಿಶೇಷ. ಎಲೆಗಳೂ ಕಪ್ಪು ಮಿಶ್ರಿತ ಹಸಿರಾಗಿರುತ್ತವೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಇದರ ಕೃಷಿ ಇಂದಿಗೂ ಇದೆ. ಸಾಮಾನ್ಯ ಕ್ಯಾರೆಟ್‍ಗಿಂತ ಉದ್ದವಾದ ತಳಿ.

ಕಪ್ಪು ಕ್ಯಾರೆಟ್‍ನ ಒಳಭಾಗ ಹಳದಿ. ಹೆಚ್ಚು ಗಟ್ಟಿ; ಕೊಂಚ ಒಗರು. ಔಷಧೀಯ ಗುಣವಿದೆ. ವೈನ್, ಸಲಾಡ್, ಉಪ್ಪಿನಕಾಯಿ ಮಾಡಲು ಸೂಕ್ತ.

ಹಳದಿ ಕ್ಯಾರೆಟ್

ತುಂಬಾ ಮೃದುವಾದ ತಳಿ. ಜೀರಿಗೆ ಮಾವಿನ ರುಚಿ. ಸಾಧಾರಣ ಗಾತ್ರದ, ನೀಳನಾದ ಗೆಡ್ಡೆಗಳ ತಳಿ. ಹಸಿಯಾಗಿ ತಿನ್ನಲು ಕೂಡ ಸೂಕ್ತ. ಸಲಾಡ್, ಸೂಪ್ ಮತ್ತು ಉಪ್ಪಿನ ಕಾಯಿ ಮಾಡಲು ಬಳಸಬಹುದು.

ಕೇಸರಿ ಕ್ಯಾರೆಟ್

ಮಾರುಕಟ್ಟೆಗೆ ಹೆಚ್ಚು ಸೂಕ್ತವಾದ ತಳಿ. ನೀರಿನಾಂಶ ಜಾಸ್ತಿ, ತುರಿಯಲು ಮತ್ತು ಬೇಯಿಸಲು ಸುಲಭ. ಜ್ಯೂಸ್‍ಗೂ ಉತ್ತಮ. ಹೆಚ್ಚು ದಿನ ಸಂಗ್ರಹಿಸಿಡಬಹುದು. ಒಳ್ಳೆಯ ಇಳುವರಿ ಕೊಡುತ್ತದೆ.

ಕೆಂಪು ಕ್ಯಾರೆಟ್

ಉತ್ತರ ಭಾರತದಲ್ಲಿ ಜನಪ್ರಿಯವಾದ ತಳಿ. ಸಿಹಿ ಗುಣಕ್ಕೆ ಹೆಸರುವಾಸಿ. ಗಾಢ ಕೆಂಪು ಬಣ್ಣದ ತಿರುಳು. ಗೆಡ್ಡೆಗಳ ಮೇಲೆ ಬೇರಿನಂತಹ ರಚನೆ ಇದ್ದು, ಕವಲೊಡೆಯುತ್ತದೆ. ಶೀಘ್ರ ಬಲಿತು ಹೂ ಬಿಡುವುದರಿಂದ, ಮಾರುಕಟ್ಟೆಗೆ ಸೂಕ್ತವಾಗಲಾರದು.

ಹೆಚ್ಚು ಆರೈಕೆ ಕೇಳದ ತಳಿ. ಸಹಜ ಕೃಷಿ ಆಸಕ್ತರಿಗೆ ಮತ್ತು ತೋಟಗಳಲ್ಲಿ ನೆಲ ಸಡಿಲ ಮಾಡಲು ಬೆಳೆಸಬಹುದಾದ ತಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT