ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 419 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ₹2,450 ಕೋಟಿ

ಎಡಿಬಿ ಜತೆಗೆ ಸಾಲ ಒಪ್ಪಂದ: 12 ಜಿಲ್ಲೆಗಳ ರಸ್ತೆ ಅಭಿವೃದ್ಧಿ ಯೋಜನೆ
Last Updated 31 ಆಗಸ್ಟ್ 2018, 3:26 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ 419 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಸುಮಾರು ₹2,450 ಕೋಟಿ (34.6 ಕೋಟಿ ಡಾಲರ್‌) ಸಾಲಕ್ಕಾಗಿ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಜತೆಗಿನ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದೆ.

ಸಂಪರ್ಕ ಸೌಲಭ್ಯ ಸುಧಾರಣೆ ಮತ್ತು 12 ಜಿಲ್ಲೆಗಳ ಆರ್ಥಿಕ ಕೇಂದ್ರ ಸ್ಥಾನಗಳ ರಸ್ತೆ ಸಂಪರ್ಕವನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಗುರಿ.

ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ–3 (ಕೆ–ಶಿಪ್‌) ಅನ್ನು ಈ ಸಾಲದ ನೆರವಿನಿಂದ ಅನುಷ್ಠಾನ ಮಾಡಲಾಗುವುದು.

‘ಈ ಒಪ್ಪಂದದ ಮೂಲಕ ಕರ್ನಾಟಕ ಸರ್ಕಾರಕ್ಕೆ ರಸ್ತೆ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ ನೀಡುತ್ತಿರುವ ಎಡಿಬಿ ನೆರವು ಮುಂದುವರಿಯಲಿದೆ. ಇದು ಸಾಂಸ್ಥಿಕ ಸಾಮರ್ಥ್ಯವನ್ನು ಸುಸ್ಥಿರಗೊಳಿಸಲಿದೆ ಮತ್ತು ರಸ್ತೆ ಸುರಕ್ಷತೆಯನ್ನು ಉತ್ತಮಪಡಿಸಲಿದೆ’ ಎಂದು ಎಡಿಬಿ ಭಾರತ ವಿಭಾಗದ ನಿರ್ದೇಶಕ ಕೆನಿಚಿ ಯೊಕೊಯಮ ಹೇಳಿದ್ದಾರೆ.

ಪರಿಷ್ಕೃತ ಆನ್ಯುಟಿ ಗುತ್ತಿಗೆ ಮಾದರಿಯನ್ನು ಅನುಸರಿಸುವುದು ಈ ಯೋಜನೆಯ ಮುಖ್ಯ ಅಂಶ ಎಂದು ಅವರು ತಿಳಿಸಿದ್ದಾರೆ.

ರಸ್ತೆ ಸುರಕ್ಷತೆಯ ಪರಿಶೀಲನೆ, ಅಪಘಾತ ವಲಯಗಳನ್ನು ಗುರುತಿಸುವುದು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಮತ್ತು ಸಾರಿಗೆ ಇಲಾಖೆಗಳ ಸಾಮರ್ಥ್ಯ ವೃದ್ಧಿ ಕೂಡ ಈ ಯೋಜನೆಯಲ್ಲಿ ಸೇರಿದೆ.

ಭಾರತ ಸರ್ಕಾರದ ಪರವಾಗಿ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಸಮೀರ್‌ ಕುಮಾರ್‌ ಖಾರೆ ಮತ್ತುಎಡಿಬಿ ಪರವಾಗಿ ಕೆನಿಚಿ ಯೊಕೊಯಮ ಅವರುಒಪ್ಪಂದಕ್ಕೆ ಸಹಿ ಮಾಡಿದರು. ಪ್ರತ್ಯೇಕ ಯೋಜನಾ ಒಪ್ಪಂದಕ್ಕೆ ಕರ್ನಾಟಕ ಸರ್ಕಾರದ ಪರವಾಗಿ ಕೆಶಿಪ್‌ನ ಮುಖ್ಯ ಯೋಜನಾ ಅಧಿಕಾರಿ ನವೀನ್‌ ರಾಜ್‌ ಸಿಂಗ್‌ ಅವರು ಸಹಿ ಮಾಡಿದ್ದಾರೆ.

ಪರಿಷ್ಕೃತ ಆನ್ಯುಟಿ

‘ಪರಿಷ್ಕೃತ ಆನ್ಯುಟಿ’- ಇದೊಂದು ವಿನೂತನ ಪದ್ಧತಿ. ನಿರ್ಮಾಣ ಸಂಸ್ಥೆಯೇ ಯೋಜನೆಯ ವಿನ್ಯಾಸ, ನಿರ್ಮಾಣ, ಹೂಡಿಕೆ, ಕಾರ್ಯಾಚರಣೆ, ನಿರ್ವಹಣೆ ಎಲ್ಲವನ್ನೂ ಮಾಡುತ್ತದೆ. ನಿಗದಿತ ಅವಧಿ ನಂತರ ಸರ್ಕಾರಕ್ಕೆ ಅದನ್ನು ಹಸ್ತಾಂತರ ಮಾಡುತ್ತದೆ. ಗುತ್ತಿಗೆ ಪಡೆದ ಸಂಸ್ಥೆಯೇ ತನ್ನ ಹಣದಿಂದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಒಪ್ಪಂದದ ಪ್ರಕಾರ ಏಳು ವರ್ಷಗಳ ಕಾಲ ರಸ್ತೆ ನಿರ್ವಹಣೆ ಮಾಡಿ, ಬಳಿಕ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕು.

ಕೆ–ಶಿಪ್‌–1 ಯೋಜನೆಯಡಿ 2001–08ರ ಅವಧಿಯಲ್ಲಿ 2,385 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ಇದಕ್ಕೆ ₹2,390 ಕೋಟಿ ವೆಚ್ಚ ಮಾಡಲಾಗಿತ್ತು. 2011ರಲ್ಲಿ ಕೆ–ಶಿಪ್‌ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿತ್ತು. ಮಳವಳ್ಳಿ- ಪಾವಗಡ, ಮುಧೋಳ- ಮಹಾರಾಷ್ಟ್ರ ಗಡಿ, ಶಿಕಾರಿಪುರ- ಆನಂದಪುರ, ಶಿವಮೊಗ್ಗ- ಹಾನಗಲ್ ಮತ್ತು ಮನಗೂಳಿ- ದೇವಪುರ ನಡುವಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳಿಸುತ್ತೇವೆ ಎಂದು ನವೀನ್‌ರಾಜ್‌ ಸಿಂಗ್‌ ತಿಳಿಸಿದರು. ಇದಕ್ಕೆ ವಿಶ್ವಬ್ಯಾಂಕ್‌ ಹಾಗೂ ಎಡಿಬಿಯಿಂದ ಸಾಲ ಪಡೆಯಲಾಗಿತ್ತು.


ಮುಖ್ಯ ಕಾಮಗಾರಿಗಳು

* ದ್ವಿಪಥ ಮತ್ತು ಚತುಷ್ಪಥ ರಸ್ತೆಗಳ ಸುಧಾರಣೆ

* ಮಳೆ ನೀರು ಚರಂಡಿಗಳ ಮರು ನಿರ್ಮಾಣ, ವಿಸ್ತರಣೆ

* ಸೇತುವೆಗಳ ನಿರ್ಮಾಣ ಮತ್ತು ಅಭಿವೃದ್ಧಿ

ಮೊದಲ ಹಂತ:ಕೊಳ್ಳೆಗಾಲ–ಹನೂರು ಹೆದ್ದಾರಿ (23.8 ಕಿ.ಮೀ)

ಚಿಂತಾಮಣಿ–ಆಂಧ್ರ ಪ್ರದೇಶ ಗಡಿ (39.8 ಕಿ.ಮೀ)

ಬೆಂಗಳೂರು ನೈಸ್‌ ರಸ್ತೆ–ಮಾಗಡಿ (51 ಕಿ.ಮೀ)

ಎರಡನೇ ಹಂತ

ಮಾಗಡಿ–ಕೊಡಗಿನ ಸೋಮವಾರಪೇಟೆ (166 ಕಿ.ಮೀ)

ಮೂರನೇ ಹಂತ

ಗದಗ–ಹೊನ್ನಾಳಿ (139 ಕಿ.ಮೀ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT