ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯದಿಂದ ವ್ಯರ್ಥವಾಗಿ ಹರಿದು ಹೋಯ್ತು 50 ಟಿಎಂಸಿ ನೀರು

ನದಿ ನೀರು ಸಂಗ್ರಹ ಯೋಜನೆ ರಾಜಕಾರಣಿಗಳ ಬಾಯಿಮಾತಿಗೆ ಸೀಮಿತ
Last Updated 13 ಆಗಸ್ಟ್ 2019, 2:28 IST
ಅಕ್ಷರ ಗಾತ್ರ

ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ತೆರೆದು ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುತ್ತಿದ್ದು, ಮೂರು ದಿನಗಳಲ್ಲೇ 50 ಟಿ.ಎಂ.ಸಿ. ಅಡಿಗೂ ಅಧಿಕ ನೀರು ವ್ಯರ್ಥ ಹರಿದು ಹೋಗಿದೆ.

ಆಗಸ್ಟ್‌ 10ರಂದು ಸಂಜೆ ಆರು ಗಂಟೆಗೆ ಹತ್ತು ಗೇಟ್‌ಗಳನ್ನು ತೆಗೆದು ನೀರು ಹರಿಸಲಾಯಿತು. ಆರಂಭದಲ್ಲಿ 25 ಸಾವಿರ ಕ್ಯುಸೆಕ್‌ ನೀರು ಬಿಡಲಾಯಿತು. ತಡರಾತ್ರಿಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಿ, ಭಾನುವಾರ ಮೂರು ಲಕ್ಷ ಕ್ಯುಸೆಕ್‌ ನೀರು ಹರಿಸಲಾಯಿತು. ಸೋಮವಾರ ಅದು 2.12 ಲಕ್ಷ ಕ್ಯುಸೆಕ್‌ಗೆ ತಗ್ಗಿದೆ. ನೀರು ಬಿಡುವ ಪ್ರಮಾಣ ಹೆಚ್ಚು, ಕಡಿಮೆಯಾದರೂ ಅದು ಸತತ ಹರಿದು ಹೋಗುತ್ತಿರುವುದು ನಿಂತಿಲ್ಲ.

ನದಿಗೆ ನೀರು ಹರಿಸಿದಾಗ ಆ ನೀರು ಸಂಗ್ರಹಿಸುವುದು, ಕೆರೆ ಕಟ್ಟೆ ತುಂಬಿಸುವುದಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ಇದರ ಪರಿಣಾಮ ಪ್ರತಿ ವರ್ಷ ವ್ಯರ್ಥವಾಗಿ ನೀರು ಹರಿದು ಹೋಗುತ್ತಿದೆ. ಹೋದ ವರ್ಷ 254 ಟಿ.ಎಂ.ಸಿ. ಅಡಿ ನೀರು ಹರಿದು ಹೋಗಿತ್ತು. ಈ ವರ್ಷ ಮೂರು ದಿನಗಳಲ್ಲೇ 50 ಟಿ.ಎಂ.ಸಿ. ಅಡಿ ಗಡಿ ದಾಟಿದೆ. ಸದ್ಯ ಈಗಿನ ಪ್ರಮಾಣದಷ್ಟೇ ಇನ್ನೂ ಕೆಲವು ದಿನಗಳ ವರಗೆ ನೀರು ಹರಿಸಿದರೆ 100ರಿಂದ 125 ಟಿ.ಎಂ.ಸಿ. ನೀರು ಹರಿದು ಹೋಗುವ ಸಾಧ್ಯತೆ ಇದೆ.

ಸಮರ್ಪಕವಾಗಿ ಮಳೆಯಾಗದೆ ಜಿಲ್ಲೆಯ ಕೆರೆ ಕಟ್ಟೆಗಳು ಬತ್ತಿ ಹೋದಾಗ, ಜಲಾಶಯದಲ್ಲಿ ನೀರಿನ ಸಂಗ್ರಹ ಇಲ್ಲದಿದ್ದಾಗ ಎಲ್ಲ ಪಕ್ಷದ ರಾಜಕಾರಣಿಗಳು ನೀರಿನ ಸದ್ಭಳಕೆ ಕುರಿತು ಕಾಳಜಿ ತೋರಿಸುತ್ತಾರೆ. ನದಿಯಲ್ಲಿ ಹರಿದು ಹೋಗುವ ನೀರಿನಿಂದ ಕೆರೆ ಕಟ್ಟೆ ತುಂಬಿಸುದು, ಸಮನಾಂತರ ಜಲಾಶಯ ನಿರ್ಮಾಣದ ಕುರಿತ ಚರ್ಚೆ ಜಿಲ್ಲೆಯಲ್ಲಿ ಒಂದು ದಶಕದಿಂದ ನಡೆದಿದೆ. ಆದರೆ, ಇದುವರೆಗೆ ಆ ನಿಟ್ಟಿನಲ್ಲಿ ಒಂದೇ ಒಂದು ಗಂಭೀರ ಸಭೆಯಾಗಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖ್ಯಮಂತ್ರಿಯವರನ್ನು ಭರವಸೆಗೆ ತೆಗೆದುಕೊಂಡು, ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯ ರೈತ ಮುಖಂಡರು.

‘ಜಿಲ್ಲೆಯ ಜನಪ್ರತಿನಿಧಿಗಳು ಬಾಗಿನ ಸಮರ್ಪಣೆಗೆ ಸೀಮಿತರಾಗಿದ್ದಾರೆ. ಕೆರೆ, ಕಟ್ಟೆಗಳನ್ನು ತುಂಬಿಸುವ ವಿಷಯದಲ್ಲಿ ಅವರಿಗೆ ರಾಜಕೀಯ ಇಚ್ಛಾಶಕ್ತಿಯಿಲ್ಲ. ಸಮಯ ಬಂದಾಗ ತುಂಗಭದ್ರಾ ಹೆಸರಿನಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಾರೆ. ಅನೇಕ ಸಲ ಹೇಳಿದರೂ ಯಾವ ಪಕ್ಷದವರೂ ತಲೆಗೆ ಹಾಕಿಕೊಂಡಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ಅಸಮಾಧಾನ ಹೊರಹಾಕಿದರು.

‘ಇದೇ ತುಂಗಭದ್ರಾ ಕಾಲುವೆಗಳಿರುವ ಆಂಧ್ರ ಪ್ರದೇಶದಲ್ಲಿನ ಎಲ್ಲ ಕೆರೆಗಳನ್ನು ತುಂಬುತ್ತಾರೆ. ಕಾರಣ ಅಲ್ಲಿನವರು ಒಳ್ಳೆಯ ಯೋಜನೆ ರೂಪಿಸಿದ್ದಾರೆ. ಬೇಸಿಗೆಯಲ್ಲಿ ಅಲ್ಲಿನ ಜನಕ್ಕೆ ಸಮಸ್ಯೆ ಎದುರಾಗುವುದಿಲ್ಲ. ದೂರದ ಮಾತೇಕೇ ಜಿಲ್ಲೆಯ ಹೂವಿನಹಡಗಲಿಯಲ್ಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರು ಅಲ್ಲಿನ ಎಲ್ಲ ಕೆರೆಗಳನ್ನು ತುಂಬಿಸಿದ್ದಾರೆ. ಅವರು ಮಾಡುವುದಾದರೆ ಜಿಲ್ಲೆಯಾದ್ಯಂತ ಮಾಡಲು ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT