ಗುರುವಾರ , ಡಿಸೆಂಬರ್ 12, 2019
16 °C
ಆಕಳಿಗೆ ಮೇವು ಕೊಡಲು ಹೋಗಿದ್ದ ರೈತ, ಒಂದು ಎತ್ತು ಸಾವು, ಅಪಾರ ಬೆಳೆ ಹಾನಿ

ಗಾಳಿ, ಮಳೆ: ಫಾರಂ ಚಾವಣಿ ಬಿದ್ದು 5 ಸಾವಿರ ಕೋಳಿ ಸಾವು, ಸಿಡಿಲಿಗೆ ರೈತ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಹಳಿಯಾಳ ತಾಲ್ಲೂಕಿನ ನೇರಲಗ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ರೈತ ನರಸಪ್ಪ ಜಯವಂತ ಕದಂ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ತಮ್ಮ ಹೊಲದಲ್ಲಿದ್ದ ಜಾನುವಾರಿಗೆ ಮೇವು ನೀಡಲು ತೆರಳಿದ್ದಾಗ ಸಿಡಿಲು ಅಪ್ಪಳಿಸಿತು.

ಮುಂಡಗೋಡ ತಾಲ್ಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಭಾರಿ ಗಾಳಿ, ಮಳೆಗೆ ಕೋಳಿ ಫಾರಂನ ಚಾವಣಿ ಬಿದ್ದು ಸುಮಾರು 5,000 ಕೋಳಿಗಳು ಸತ್ತಿವೆ. ಸ್ಥಳೀಯ ನಿವಾಸಿ ಹಜರತ್ ಅಲಿ ತಮ್ಮ ಹೊಲದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಈ ಅವಘಡದಲ್ಲಿ ಸುಮಾರು ₹ 15 ಲಕ್ಷದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಭಾರಿ ಗಾಳಿಯಿಂದಾಗಿ ಇದೇ ಗ್ರಾಮದಲ್ಲಿ 15ರಿಂದ 20 ಎಕರೆಗಳಷ್ಟು ಬಾಳೆ ಮತ್ತು ಮಾವಿನ ತೋಟಕ್ಕೆ ಅಪಾರ ಹಾನಿಯಾಗಿದೆ. ಬಾಳೆ ಗಿಡಗಳು ಮುರಿದು ಬಿದ್ದಿವೆ. ಫಸಲಿಗೆ ಬಂದಿದ್ದ ಮಾವು ಬೆಳೆಯೂ ನೆಲಕಚ್ಚಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ಹುನಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಸತ್ತಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳ ಮೇಲೆ ಹೊದಿಸಲಾಗಿದ್ದ ಸಿಮೆಂಟ್, ಕಬ್ಬಿಣದ ಶೀಟ್‌ಗಳು ಹಾರಿಹೋಗಿವೆ. ಇಂದೂರು ಗ್ರಾಮದಲ್ಲಿ ಏಳೆಂಟು ಮನೆಗಳ ಚಾವಣಿಯ ಶೀಟ್‌ಗಳು ಹಾರಿ ಹೋಗಿವೆ. 

ಹಳಿಯಾಳ ಪಟ್ಟಣದಲ್ಲೂ ಅರ್ಧ ಗಂಟೆ ರಭಸದ ಗಾಳಿ ಮಳೆಯಾಗಿದ್ದು, ಹತ್ತಾರು ವಿದ್ಯುತ್ ಕಂಬಗಳು, ತೆಂಗಿನ ಮರಗಳು ಮುರಿದುಬಿದ್ದಿವೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಸುತ್ತಮುತ್ತ ದಟ್ಟವಾದ ಮೋಡ ಕವಿದು, ನಾಲ್ಕಾರು ಹನಿ ತುಂತುರು ಮಳೆಯಾಯಿತು.


ಹಳಿಯಾಳದಲ್ಲಿ ಶನಿವಾರ ಸಂಜೆ ಸುರಿದ ಗಾಳಿ, ಮಳೆಗೆ ತೆಂಗಿನಮರವೊಂದು ಮುರಿದು ಬಿದ್ದಿರುವುದು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು