3
ಬಜೆಟ್‌ ಮಂಡನೆ ಬಳಿಕ ಆಯ್ಕೆ ಸಾಧ್ಯತೆ

ಸಭಾಪತಿ ಸ್ಥಾನಕ್ಕೆ ಮುಂದುವರಿದ ಕಗ್ಗಂಟು

Published:
Updated:

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‌ ‘ದೋಸ್ತಿ’ಗಳ ಮಧ್ಯೆ ಹಗ್ಗ– ಜಗ್ಗಾಟ ಆರಂಭವಾಗಿದೆ. ಪರಿಷತ್ತಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ತನಗೇ ಸಭಾಪತಿ ಸ್ಥಾನ ಬಿಟ್ಟಕೊಡಬೇಕು ಎಂದು ಪಟ್ಟು ಹಿಡಿದಿದೆ. ಈ ಮಧ್ಯೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಸ್‌.ಆರ್‌.ಪಾಟೀಲ ಅವರಿಗೆ ಈ ಸ್ಥಾನ ನೀಡಬೇಕು ಎಂದು ವರಿಷ್ಠರಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ, ಇದಕ್ಕೆ ಜೆಡಿಎಸ್‌ ವರಿಷ್ಠರು ಇದಕ್ಕೆ ಒಪ್ಪುತ್ತಿಲ್ಲ. ಪರಿಷತ್ತಿನಲ್ಲಿ ಪಕ್ಷದ ಅತ್ಯಂತ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಸಾಧ್ಯವಾಗದ ಕಾರಣ ಅವರನ್ನು ಸಭಾಪತಿ ಮಾಡಲು ಪಕ್ಷ ಬಯಸಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಭಾಧ್ಯಕ್ಷ ಸ್ಥಾನ ಸಿಕ್ಕಿದೆ. ಪರಿಷತ್‌ನಲ್ಲಿ ತಮಗೇ ನೀಡಬೇಕು ಎಂಬ ಒತ್ತಾಯ ಮುಂದಿಟ್ಟಿರುವುದಾಗಿ ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

ದೋಸ್ತಿಗಳಲ್ಲಿ ಒಂದು ಪಕ್ಷಕ್ಕೆ ಸಭಾಪತಿ ಸ್ಥಾನ ಸಿಕ್ಕಿದರೆ, ಮತ್ತೊಂದು ಪಕ್ಷಕ್ಕೆ ಉಪಸಭಾಪತಿ ಮತ್ತು ಆಡಳಿತ ಪಕ್ಷದ ಮುಖ್ಯ ಸಚೇತಕ ಹುದ್ದೆಯನ್ನು ಹಂಚಿಕೆ ಮಾಡಲಾಗುವುದು. ಭಾನುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿಲ್ಲ. ಸಭಾಪತಿ ಹುದ್ದೆಯ ಕುರಿತು ಉಂಟಾಗಿರುವ ಕಗ್ಗಂಟು ಬಗೆಹರಿಸಲು ಎರಡೂ ಪಕ್ಷಗಳ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ರಾಜಭವನ ಅಥವಾ ಸರ್ಕಾರದಿಂದ ಯಾವುದೇ ಪತ್ರ ಬಂದಿಲ್ಲ. ಅಲ್ಲಿಂದ ಸಂದೇಶ ಬಂದ ಬಳಿಕವೇ ಸಭಾಪತಿ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಚುನಾವಣೆ ನಡೆಸಬೇಕಾಗುತ್ತದೆ. ಅಧಿಸೂಚನೆಯನ್ನೂ ಹೊರಡಿಸಲಾಗುತ್ತದೆ. ಅವಿರೋಧ ಆಯ್ಕೆ ಮಾಡುವುದಾದರೂ ಚುನಾವಣೆ   ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ ಎಂದು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಹೊಸ ಸಭಾಪತಿ ಆಯ್ಕೆ ಆಗುವವರೆಗೆ ಹಂಗಾಮಿ ಸಭಾಪತಿ ಮುಂದುವರಿಯಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಜೆಟ್‌ ಮಂಡನೆ ಬಳಿಕ ಸಭಾಪತಿ ನೇಮಕ ಆಗುವ ಸಾಧ್ಯತೆ ಇದೆ. ಅಂತಿಮವಾಗಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್‌ ಮನವೊಲಿಸಲಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !