562 ಅನ್ನದಾತರ ಆತ್ಮಹತ್ಯೆ!

7

562 ಅನ್ನದಾತರ ಆತ್ಮಹತ್ಯೆ!

Published:
Updated:

ಸಮ್ಮಿಶ್ರ ಸರ್ಕಾರ ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರ ಸಂಘಗಳಲ್ಲಿನ ಬೆಳೆ ಸಾಲ ಮನ್ನಾ ಘೋಷಿಸಿದರೂ ಅನ್ನದಾತರ ಸರಣಿ ಆತ್ಮಹತ್ಯೆ ಮಾತ್ರ ನಿಂತಿಲ್ಲ!

2018ರ ಏಪ್ರಿಲ್‌ನಿಂದ ಈವರೆಗೆ 562 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಆಡಳಿತ ಚುಕ್ಕಾಣಿ ಹಿಡಿದ ಜೂನ್‌ ತಿಂಗಳಿನಿಂದ ಈವರೆಗೆ 377 ರೈತ ಆತ್ಮಹತ್ಯೆ ಪ್ರಕರಣಗಳು ವರದಿ ಆಗಿವೆ. ಈ ಪೈಕಿ 357 ಪ್ರಕರಣಗಳು ಅರ್ಹವಾಗಿವೆ ಎಂದು ಉಪ ವಿಭಾಗಾಧಿಕಾರಿ ಅಧ್ಯಕ್ಷತೆ ಸಮಿತಿ ಪರಿಗಣಿಸಿದೆ.

ಮೃತನ ಹೆಸರಿನಲ್ಲಿ ಸಾಲ ಇಲ್ಲ, ಮದ್ಯ ವ್ಯಸನಿ, ವೈಯಕ್ತಿಕ ಕಾರಣ, ಕೃಷಿ ಸಂಬಂಧಿಸಿದ ಸಾಲ ಇರಲಿಲ್ಲ, ಮಾನಸಿಕ ಖಿನ್ನತೆ, ಹೃದಯಾಘಾತ ಮತ್ತಿತರ ಕಾರಣಗಳಿಂದ ಸಾವು ಸಂಭವಿಸಿದೆ ಎಂದು ದೃಢಪಟ್ಟ ಕಾರಣಕ್ಕೆ 72 ಪ್ರಕರಣಗಳನ್ನು ಸಮಿತಿ ತಿರಸ್ಕರಿಸಿದೆ. ದಾಖಲಾತಿ ಸಿಗದ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಾರದೇ ಇರುವುದರಿಂದ 78 ಪ್ರಕರಣಗಳು ಅರ್ಹವೇ ಎಂದು ತೀರ್ಮಾನಿಸಲು ಬಾಕಿ ಇವೆ. ಅರ್ಹ ಎಂದು ಗುರುತಿಸಿದವುಗಳಲ್ಲಿ 192 ಪ್ರಕರಣಗಳಲ್ಲಿ ಮೃತನ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ವಿತರಿಸಲಾಗಿದೆ. 35 ಪ್ರಕರಣಗಳಿಗೆ ಪರಿಹಾರಧನ ವಿತರಿಸಲು ಬಾಕಿ ಇದೆ.

ರೈತರ ಆತ್ಮಹತ್ಯೆ ಕುರಿತು ಅಧ್ಯಯನ ನಡೆಸಲು ಸರ್ಕಾರ 2001ರಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿದ್ದ ಡಾ. ಜಿ.ಕೆ. ವೀರೇಶ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ರೈತರ ಆರ್ಥಿಕ ಪರಿಸ್ಥಿತಿ, ಸಾಮಜಿಕ ಮತ್ತು ಸಾಂಸಾರಿಕ ಸಮಸ್ಯೆಗಳು, ಸಾಮರ್ಥ್ಯಕ್ಕೆ ಮೀರಿ ಸಾಲ, ಬೆಳೆ ನಷ್ಟ ಇವೇ ಮುಂತಾದವು ರೈತರ ಆತ್ಮಹತ್ಯೆಗೆ ಕಾರಣಗಳು ಎಂದು ವರದಿ ನೀಡಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ, ರೈತ ವರ್ಗದ ಶ್ರೇಯೋಭಿವೃದ್ಧಿ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಆತ್ಮಹತ್ಯೆ ನಿಂತಿಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !