ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದೂ ಮರೆಯದ ‘ಚಿತ್ರಾನ್ನ’

Last Updated 16 ಜೂನ್ 2018, 10:11 IST
ಅಕ್ಷರ ಗಾತ್ರ

ನಾನು ಪಾಕ ಪ್ರವೀಣೆ ಅಲ್ಲವೇ ಅಲ್ಲ. ಅಪರೂಪಕ್ಕೆ ಮಾತ್ರ ಅಡುಗೆ ಮನೆ ಪ್ರವೇಶ. ಮನೆಯಲ್ಲಿ ಯಾರು ಇಲ್ಲದಾಗ ಸರಳವಾದ ಕೆಲ ಅಡಗೆಗಳನ್ನಷ್ಟೇ ಮಾಡಿಕೊಳ್ಳುತ್ತೇನೆ. ನಾನು ಮಾಂಸಹಾರ ಪ್ರಿಯೆ. ಮನೆಯಲ್ಲಿ ಮಾತ್ರ ಮಾಂಸಹಾರಕ್ಕೆ ಆದ್ಯತೆ. ಹೊರಗಡೆ ಹೋದಾಗ ಗ್ರೀನ್‌ ಸಲಾಡ್‌ ನನ್ನ ನೆಚ್ಚಿನ ಆಹಾರ. ‘ಹಾಫ್‌ ಬಾಯಿಲ್ಡ್‌ ಎಗ್’ ಇಷ್ಟವಾಗುತ್ತದೆ. ಇವು ನನ್ನ ಸಾರ್ವಕಾಲಿಕ ನೆಚ್ಚಿನ ಆಹಾರಗಳು. ಮಾಂಸಾಹಾರದಲ್ಲಿ ‘ಚಿಕನ್‌’ ಹಾಗೂ ‘ಸೀ ಫುಡ್‌’ನ್ನು ಇಷ್ಟಪಟ್ಟು ಸೇವಿಸುತ್ತೇನೆ. ಹೋಟೆಲ್‌ ಅಡೆಗೆಗಳಿಗಿಂತ ಅಮ್ಮ ಮಾಡುವ ಅಡುಗೆಯೇ ನನ್ನ ಮೊದಲ ಆದ್ಯತೆ.

ಮೊದಲ ಬಾರಿ ಅಡುಗೆ ಮಾಡಿದ್ದು ಕೆಟ್ಟ ಅನುಭವ ನೀಡಿತ್ತು. 9ನೇ ತರಗತಿಯಲ್ಲಿದ್ದಾಗ ಮಾಡಿದ ಮೊದಲ ಅಡುಗೆ ‘ಚತ್ರಾನ್ನ’. ಚಿತ್ರಾನ್ನ ಎಂದರೆ ಅರಿಶಿಣವೇ ಪ್ರಧಾನ ಎಂದು ಭಾವಿಸಿದ್ದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಅರಿಶಿಣ ಪುಡಿ ಬೆರೆಸಿದ್ದೆ. ರುಚಿ ನೋಡಲು ಅಣ್ಣನಿಗೆ ನೀಡಿದ್ದೆ. ಅದನ್ನು ತಿಂದಿದ್ದ ಅಣ್ಣನಿಗೆ ಫುಡ್‌ ಫಾಯ್‌ಸನ್‌ ಆಗಿ ಎರಡು ದಿನ ಆಸ್ಪತ್ರೆಯಲ್ಲಿ ಕಳೆದಿದ್ದ. ಸದ್ಯ ನಾನು ಮೊದಲು ರುಚಿ ನೋಡಿರಲಿಲ್ಲ. ಶೇಂಗ ಬದಲು, ತೊಗರಿ ಬೇಳೆ ಹಾಕಿದ್ದೆ. ಹಾಗಾಗಿ ಅದನ್ನು ಚಿತ್ರಾನ್ನ ಎಂದೂ ನಾನು ಮಾತ್ರ ಕರೆಯಲು ಸಾಧ್ಯ.

ಮೊದಲ ಬಾರಿ ಇಂತಹ ಕೆಟ್ಟ ಚಿತ್ರಾನ್ನ ಮಾಡಿದ್ದರೂ ಪ್ರಯತ್ನ ಬಿಡಲಿಲ್ಲ. ಇಂದಿಗೂ ನಾನು ಮಾಡುವ ಅಡುಗೆಗಳಲ್ಲಿ ಚಿತ್ರಾನ್ನಕ್ಕೆ ಮೊದಲ ಆದ್ಯತೆ. ಚಿತ್ರಾನ್ನದಲ್ಲಿ ಕ್ಯಾರೇಟ್‌ ಚಿತ್ರಾನ್ನ, ಕ್ಯಾಪ್ಸಿಕಂ ಚಿತ್ರಾನ್ನ, ತರಕಾರಿ ಚಿತ್ರಾನ್ನಗಳನ್ನು ಮಾಡುತ್ತೇನೆ. ಆಂಧ್ರ ಶೈಲಿಯ ಕೆಲವು ಪಲ್ಯಗಳು, ಎಗ್‌ ಬುರ್ಜಿಯನ್ನು ಆಗಾಗ್ಗೆ ಮಾಡುತ್ತಿರುತ್ತೇನೆ.

ಮಾಂಸಹಾರ ತಿನ್ನೋಕೆ ಇಷ್ಟವಾದರೂ, ಮಾಡೋಕೆ ಬರಲ್ಲ. ಸದ್ಯ ‘ಪದ್ಮಾವತಿ’ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವುದರಿಂದ ಅಡುಗೆ ಕಲಿಯಲು ಸಮಯ ದೊರೆಯುತ್ತಿಲ್ಲ. ಬಿಡುವು ಇದ್ದಾಗ ಅಡುಗೆಗೆ ಸಹಾಯ ಮಾಡುತ್ತೇನೆ. ಸರಳವಾದ ಕೆಲವು ಅಡುಗೆ ಮಾಡಲು ಪ್ರಯತ್ನಿಸುತ್ತಿರುತ್ತೇನೆ. ಜೊತೆಗೆ ಡಯೇಟ್‌ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿರುವುದರಿಂದ ತಿನ್ನುವುದರಲ್ಲಿ ಹಿತ ಮಿತ. ದೇಹ ಸೌಂದರ್ಯ ಕಾಪಾಡಿಕೊಳ್ಳಲು ವರ್ಕೌಟ್‌ಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದ ಕಾರಣ ಫಥ್ಯಾಹಾರವನ್ನೇ ಹೆಚ್ಚು ಪಾಲಿಸುತ್ತೇನೆ.

ಚಿಕನ್‌ ಕೋಲ್ಡ್‌ ಸಲಾಡ್‌

ಬೇಕಾಗುವ ಸಾಮಾಗ್ರಿಗಳು: 3 ಕಪ್‌ ಬೋನ್‌ಲೆಸ್‌ ‌ಬೇಯಿಸಿದ ಚಿಕನ್‌, ಅರ್ಧ ಬೌಲ್‌ ರೆಡ್‌ ಕ್ಯಾಪ್ಸಿಕಂ, 6 ಗ್ರೀನ್‌ ಆಲಿವ್‌ ಎಲೆಗಳು, ಅರ್ಧ ಕಪ್‌ ಕತ್ತರಿಸಿದ ಈರುಳ್ಳಿ, ಅರ್ಧ ಕಪ್‌ ಸೇಬುಹಣ್ಣು, 2 ಟಿ ಚಮಚ ಲಿಂಬೆರಸ, ಉಪ್ಪು, ಕಾಳು ಮೆಣಸಿನ ಪುಡಿ, ಐಸ್‌ಬರ್ಗ್‌

ಮಾಡುವ ವಿಧಾನ: ಎಲ್ಲ ಪದಾರ್ಥಗಳನ್ನು ಸಣ್ಣದಾಗಿ ಕತ್ತರಿಸಿ ಒಂದು ಬೌಲ್‌ ಹಾಕಿಕೊಳ್ಳಬೇಕು. ಅದಕ್ಕೆ ಲಿಂಬೆರಸ, ಉಪ್ಪು ಹಾಗೂ ಕಾಳುಮೆಣಸಿನ ಪುಡಿಗಳನ್ನು ಬೆರಸಿ ಅದಕ್ಕೆ ಚಿಕನ್‌ ಹಾಗೂ ಐಸ್‌ಬರ್ಗ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿದರೆ ಚಿಕನ್ ಕೋಲ್ಡ್‌ ಸಲಾಡ್‌ ಸವಿಯಲು ತಯಾರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT