ಭಾನುವಾರ, ಡಿಸೆಂಬರ್ 15, 2019
26 °C
ತನಿಖಾ ಕ್ರಮ ಪ್ರಶ್ನಿಸಿದ ನ್ಯಾಯಾಧೀಶರು

ರೆಡ್ಡಿ ಜಾಮೀನು ಅರ್ಜಿ ವಿಚಾರಣೆ: ‘ಏನ್ರೀ ಇದು, ದೂರಿಗೂ ತನಿಖೆಗೂ ಸಂಬಂಧವೇ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಏನ್ರೀ ಇದು, ದೂರಿನಲ್ಲಿ ಇರುವುದೇ ಬೇರೆ. ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯೇ ಬೇರೆ. ಒಂದಕ್ಕೊಂದು ಸಂಬಂಧವೇ ಇಲ್ಲವಲ್ಲ...’

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿದ್ದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿ. ಜಗದೀಶ್, ಪೊಲೀಸರ ತನಿಖಾ ಕ್ರಮವನ್ನು ಈ ರೀತಿ ಪ್ರಶ್ನೆ ಮಾಡಿದರು.

‘ಆ್ಯಂಬಿಡೆಂಟ್’ ಕಂಪನಿಗೂ 6ನೇ ಆರೋಪಿಗೂ (ಜನಾರ್ದನ ರೆಡ್ಡಿ) ನೇರ ಸಂಬಂಧವೇನಾದರೂ ಇದೆಯಾ? ಅವರಿಗೆ ಯಾರಾದರೂ ನೇರವಾಗಿ ಹಣ ಕೊಟ್ಟವರು ಇದ್ದಾರಾ? ಕೊಟ್ಟಿದ್ದರೆ ಅಂಥವರ ಹೇಳಿಕೆಗಳೇನಾದರೂ ಇವೆಯೇ? ರೆಡ್ಡಿಗೆ ನೇರವಾಗಿ ಹಣ ಕೊಟ್ಟೆ ಎನ್ನುವ ವ್ಯಕ್ತಿಗಳು ಯಾರಾದರೂ ನಿಮಗೆ ದೂರು ಅಥವಾ ಹೇಳಿಕೆ ಕೊಟ್ಟಿದ್ದಾರಾ? ಇಷ್ಟೆಲ್ಲ ಪ್ರಶ್ನೆಗಳಿದ್ದರೂ ನೀವು ಬಂಧನ ಮಾಡಿದ್ದೀರಿ’ ಎಂದು ನ್ಯಾಯಾಧೀಶರು, ಪಬ್ಲಿಕ್‌ ಪ್ರಾಸಿಕ್ಯೂಟರ್‌ ವೆಂಕಟಗಿರಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಅದಕ್ಕೆ ಉತ್ತರಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ‘ಪ್ರಕರಣದ ಹಿಂದೆ ರೆಡ್ಡಿ ಇದ್ದಾರೆ. ಅದನ್ನೆಲ್ಲ ಈ ತೆರೆದ ನ್ಯಾಯಾಲಯದಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿ ನ್ಯಾಯಾಧೀಶರನ್ನು ಸಮಾಧಾನಪಡಿಸಿದರು. 

ಚಿನ್ನಕ್ಕೂ ರೆಡ್ಡಿಗೂ ಸಂಬಂಧವಿಲ್ಲ: ರೆಡ್ಡಿ ಪರ ವಕೀಲ ಸಿ.ಎಚ್. ಹನುಮಂತರಾಯ, ‘ಪ್ರಕರಣದಲ್ಲಿ ಈಗಾಗಲೇ ನಾಲ್ವರಿಗೆ ಜಾಮೀನು ಸಿಕ್ಕಿದೆ. ಇನ್ನೊಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಹೀಗಾಗಿ, ನನ್ನ ಕಕ್ಷಿದಾರರಿಗೆ (ಜನಾರ್ದನ ರೆಡ್ಡಿ) ಜಾಮೀನು ನೀಡಬೇಕು’ ಎಂದು ಕೋರಿದರು.

‘ರೆಡ್ಡಿಯವರನ್ನು 6ನೇ ಆರೋಪಿಯನ್ನಾಗಿ ಬಂಧಿಸಿದ ಸಿಸಿಬಿ ಪೊಲೀಸರ ಕ್ರಮವೇ ಸರಿಯಲ್ಲ. ಪ್ರಕರಣದ 4ನೇ ಆರೋಪಿ ರಮೇಶ್‌, 5ನೇ ಆರೋಪಿ ಆಲಿಖಾನ್‌ಗೆ ಚಿನ್ನ ಕೊಟ್ಟಿದ್ದಾನೆ. ಹೀಗಾಗಿ, ಆಲಿಖಾನ್‌ನೇ ರಮೇಶ್‌ನಿಗೆ ಚಿನ್ನವನ್ನು ವಾಪಸ್‌ ಕೊಡಬೇಕೇ ಹೊರತು ನನ್ನ ಕಕ್ಷಿದಾರರಲ್ಲ (ರೆಡ್ಡಿ). ಚಿನ್ನಕ್ಕೂ ನನ್ನ ಕಕ್ಷಿದಾರರಿಗೂ ಯಾವುದೇ ಸಂಬಂಧವೇ ಇಲ್ಲ’ ಎಂದರು.

‘ಆರೋಪಿ ಆಲಿಖಾನ್‌ನನ್ನು ಪೊಲೀಸ್‌ ಕಸ್ಟಡಿಗೆ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಜನಾರ್ದನ ರೆಡ್ಡಿ ಹೆಸರೇ ಇರಲಿಲ್ಲ. ಚಿನ್ನಕ್ಕೂ ರೆಡ್ಡಿ ಅವರಿಗೂ ಸಂಬಂಧವಿಲ್ಲವೆಂಬುದು ಆ ಅರ್ಜಿಯಿಂದಲೇ ಗೊತ್ತಾಗುತ್ತದೆ. ಅಷ್ಟಾದರೂ ಪೊಲೀಸರು, ಈ ಪ್ರಕರಣದಲ್ಲಿ ರೆಡ್ಡಿಯವರನ್ನು ಸಿಲುಕಿಸಲು ವಿಚಾರಣೆಗೆ ಕರೆಸಿದ್ದರು. ನಿರಂತರ 12 ಗಂಟೆ ವಿಚಾರಣೆ ನಡೆಸಿ, ಬಳಿಕವೂ ಕಚೇರಿಯಲ್ಲೇ ಉಳಿಸಿಕೊಂಡಿದ್ದರು. ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇವೆ’ ಎಂದು ವಾದಿಸಿದರು.

ರೆಡ್ಡಿ ಅವರಿಗೂ ಪಾಲು: ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟಗಿರಿ, ‘ಆ್ಯಂಬಿಡೆಂಟ್‌ ಕಂಪನಿಯಿಂದ ₹600 ಕೋಟಿ ವಂಚನೆಯಾಗಿದೆ. ಆ ಕಂಪನಿಯ ಮಾಲೀಕನಿಂದ 6ನೇ ಆರೋಪಿ (ರೆಡ್ಡಿ) ಅವರಿಗೂ ಪಾಲು ಹೋಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರಿಗೆ ಜಾಮೀನು ನೀಡಿದರೆ, ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ’ ಎಂದು ಪ್ರತಿವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಅರ್ಜಿಯ ಆದೇಶವನ್ನು ಬುಧವಾರಕ್ಕೆ (ನ. 14) ಕಾಯ್ದಿರಿಸಿದರು.

‘ಹರಕೆ ತೀರಿಸಲು ಚಿನ್ನ ದಾನ’

ಪ್ರಕರಣದ 5ನೇ ಆರೋಪಿ ಆಲಿಖಾನ್‌ನನ್ನು ಈ ಹಿಂದೆ ಕಸ್ಟಡಿಗೆ ಪಡೆಯುವಾಗ ಸಲ್ಲಿಸಿದ್ದ ಅರ್ಜಿಯ ವಿವರಗಳನ್ನು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದರು. ‘2011ರಿಂದ ಆಲಿಖಾನ್‌ಗೆ ವ್ಯವಹಾರದಲ್ಲಿ ಕಷ್ಟಗಳು ಎದುರಾಗಿದ್ದವು. ಆಗ ದೇವರನ್ನು ಆರಾಧಿಸಲಾರಂಭಿಸಿದ್ದ. ಕಷ್ಟಗಳು ದೂರವಾದರೆ ಮಸೀದಿ, ದರ್ಗಾ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಚಿನ್ನವನ್ನು ದಾನವಾಗಿ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದ’ ಎಂಬ ಅಂಶವನ್ನು ಪೊಲೀಸರು ಆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

‘ಹರಕೆ ಹೊತ್ತುಕೊಂಡ ಬಳಿಕ, ಕಷ್ಟಗಳು ಒಂದೊಂದಾಗಿ ದೂರವಾಗಿದ್ದವು. ಅವಾಗಲೇ ಆತ, ಹರಕೆ ತೀರಿಸಲು ನಿರ್ಧರಿಸಿದ್ದ. ಅದಕ್ಕಾಗಿ ‘ಆ್ಯಂಬಿಡೆಂಟ್‌’ ಕಂಪನಿ ಮಾಲೀಕ ಫರೀದ್‌ ಅವರಿಂದ ₹18 ಕೋಟಿ ಸಾಲ ಪಡೆದು 57 ಕೆ.ಜಿ ಚಿನ್ನದ ಗಟ್ಟಿಗಳನ್ನು ಖರೀದಿಸಿದ್ದ. ಆ ಚಿನ್ನದ ಗಟ್ಟಿಗಳನ್ನೇ ಮಸೀದಿ, ದರ್ಗಾ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡಿ ಹರಕೆ ತೀರಿಸಿದ್ದ’ ಎಂದೂ ಪೊಲೀಸರು ಹೇಳಿದ್ದಾರೆ.

‘ಆತ, ₹18 ಕೋಟಿ ಸಾಲ ಪಡೆದಿದ್ದನಷ್ಟೇ. ಆ ಹಣ ಜನರನ್ನು ವಂಚಿಸಿ ಸಂಗ್ರಹಿಸಿದ್ದು ಎಂಬುದು ಆತನಿಗೆ ಗೊತ್ತಿರಲಿಲ್ಲ. ಈಗ ಅದರ ಅರಿವು ಆಲಿಖಾನ್‌ಗೆ ಆಗಿದೆ. ಆ ಹಣ ವಾಪಸ್‌ ಕೊಡಲು ಸಿದ್ಧನಿರುವುದಾಗಿ ಹೇಳಿ ದ್ದಾನೆ’‍ ಎಂದು ಪೊಲೀಸರು ಅರ್ಜಿಯ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು