ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಟುಗಳ ಸಾಮ್ರಾಜ್ಯ

Last Updated 25 ಡಿಸೆಂಬರ್ 2018, 19:09 IST
ಅಕ್ಷರ ಗಾತ್ರ

ಈ ವಿಶ್ವದಲಿ ನೊಡಲೆಲ್ಲರೆಲ್ಲರ ನಂಟು |

ಆವನಾ ಬಂಧುತೆಯ ಜಡೆಯ ಬಿಡಿಸುವವನು ? ||

ಜೀವ ಜೀವಕೆ ನಂಟು ಜಡ ಚೇತನಕೆ ನಂಟು |

ಆವುದದಕಂಟಿರದು ? – ಮಂಕುತಿಮ್ಮ || 72 ||

ಪದ-ಅರ್ಥ: ನೋಡಲೆಲ್ಲರೆಲ್ಲರ=ನೋಡಲು+ಎಲ್ಲರ+ಎಲ್ಲರ, ಬಂಧುತೆಯ=ಬಾಂಧವ್ಯದ, ಆವುದದಕಂಟಿರದು=ಆವುದು+ಅದಕೆ+ಅಂಟಿರದು.

ವಾಚ್ಯಾರ್ಥ: ನೋಡಿದರೆ ಈ ವಿಶ್ವದಲ್ಲಿ ಎಲ್ಲರಿಗೂ ಎಲ್ಲರ ನಂಟಿದೆ. ಈ ಬಾಂಧವ್ಯದ ಹೆಣಿಗೆಯನ್ನು ಬಿಡಿಸುವವರು ಯಾರು? ಒಂದು ಜೀವಕ್ಕೆ ಮತ್ತೊಂದು ಜೀವದ ನಂಟು, ಜಡವಾದದ್ದಕ್ಕೆ ಚೇತನದ ನಂಟು. ಯಾವುದಕ್ಕೂ ಅಂಟಲಾರದ್ದು ಉಂಟೇ?

ವಿವರಣೆ: ನಮ್ಮ ವಿಶ್ವ ಇಂದಿನ ದಿನಗಳಲ್ಲಿ ಪುಟ್ಟ ಹಳ್ಳಿಯಂತಾಗುತ್ತಿದೆ. ಈಗಿನ ಇಂಟರ್‌ನೆಟ್‌ ಇಡೀ ವಿಶ್ವವನ್ನು ಮುಷ್ಟಿಯಲ್ಲಿ ತಂದು ಬಿಟ್ಟಿದೆ. ಆಫ್ರಿಕಾದಲ್ಲಿ ಆದ ಘಟನೆ ಅದೇ ಕ್ಷಣದಲ್ಲಿ ನಮ್ಮ ಕಣ್ಣಿಗೆ ಬೀಳುತ್ತದೆ. ಜಪಾನ ದೇಶದಲ್ಲಾದ ಸುನಾಮಿಯಿಂದ ಜನರಿಗಾದ ಕಷ್ಟ ಇಲ್ಲಿ ನಮ್ಮ ಹೃದಯವನ್ನು ಕಲಕುತ್ತದೆ. ಟೆಲಿವಿಷನ್ ಮಾತ್ರ ಇಡೀ ಜಗತ್ತನ್ನು ತನ್ನ ಪರದೆಯಲ್ಲಿ ಬಂಧಿಸಿಬಿಟ್ಟಿದೆ. ಎಲ್ಲೆಲ್ಲಿಯೋ ಆದ ಘಟನೆಗಳು, ಕ್ರೀಡೆಗಳು, ಮನರಂಜನೆಗಳು ನಮ್ಮ ಕಣ್ಣಮುಂದೆಯೇ ನಡೆದಂತೆ ತೋರಿ ಆತ್ಮೀಯ ಸಂಬಂಧಗಳನ್ನು ನಿರ್ಮಿಸುತ್ತವೆ.

ನಮಗರಿವಿಲ್ಲದಂತೆಯೇ ನಂಟುಗಳು ಸೃಷ್ಟಿಯಾಗುತ್ತವೆ. ಒಬ್ಬ ಗಾಯಕನ ಸಿ.ಡಿ. ಬಿಡುಗಡೆಯಾದ ಮೇಲೆ, ಯು ಟ್ಯೂಬ್‍ನಲ್ಲಿ ಬಂದೊಡನೆ ಸಾವಿರಾರು ಜನರೊಡನೆ ಆತನ ನಂಟು ಹುಟ್ಟಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯನ್ನು ನೋಡದೆ ಹೋದರೂ ಅಸಂಖ್ಯ ಅಭಿಮಾನಿಗಳ ನಂಟು ಅವನೊಡನೆ ಬೆಳೆಯುತ್ತದೆ. ಅಂತೆಯೇ ಪ್ರಪಂಚವನ್ನು ಗಮನಿಸಿದರೆ ಎಲ್ಲರಿಗೂ ಎಲ್ಲರ ನಂಟಾದಂತೆ ತೋರುತ್ತದೆ. ಈ ಬಾಂಧವ್ಯ ಹೇಗೆ ಹೆಣೆದುಕೊಂಡಿದೆಯೆಂದರೆ ಅದನ್ನು ಬಿಡಿಸುವುದು ಅಸಾಧ್ಯ. ಹಿಂದಿನ ಕಗ್ಗದಲ್ಲಿ ನೋಡಿದಂತೆ ಜೀವ-ಜೀವಗಳ ನಡುವಿನ ನಂಟು ತಪ್ಪಿದ್ದಲ್ಲ. ಅಂತೆಯೆ ಜಡ-ಚೇತನಗಳ ನಡುವೆಯೂ ನಂಟಿದೆ. ನನ್ನ ಮನೆ, ನನ್ನ ಕಾರು, ನನ್ನ ಆಭರಣಗಳು, ನನ್ನ ಸೈಟು ಇವೆಲ್ಲ ಜಡ-ಚೇತನಗಳ ನಂಟೇ ಆಗಿದೆ.

ಇನ್ನೂ ಆಳಕ್ಕೆ ನೋಡಿದರೆ ಮೂರ್ತಿಪೂಜೆಯ ಹಿಂದಿನ ಸತ್ಯವನ್ನು ಗಮನಿಸಿ. ಮೂರ್ತಿ ಮರದ್ದಾಗಿರಬಹುದು, ಕಲ್ಲಿನದಾಗಿರಬಹುದು, ಅದು ಜಡವಸ್ತುವೇ. ಆದರೆ ಭಕ್ತನಿಗೆ ಅದು ಜಡವಸ್ತುವಲ್ಲ. ಅದೊಂದು ಮಹಾನ್ ಚೈತನ್ಯದ ಮೂಲಸ್ಥಳ. ಹೀಗಾಗಿ ಮೂರ್ತಿ ಜಡ-ಚೈತನ್ಯದ ಸಂಗಮಸ್ಥಾನ. ಸರಿಯಾಗಿ ನೋಡಿದರೆ ಅಂಟದಿರುವ ಜೀವವೇ ಇರದು. ಅತ್ಯಂತ ನಿರ್ಮೋಹಿಗಳನ್ನು ಈ ಮೋಹದ ನಂಟು ಬಿಟ್ಟಿಲ್ಲ. ಭಗವಂತನಿಗೇ ಅವನು ಸೃಷ್ಟಿಸಿದ ಪ್ರಪಂಚದ ಬಗ್ಗೆ ಮೋಹವಿರುವಾಗ ಉಳಿದ ನಂಟುಗಳ ಮಾತೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT