ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕಂಪನಿಗಳ ನೆರವಿನಿಂದ ಕೆರೆಗಳ ಅಭಿವೃದ್ಧಿ

ಕಾರ್ಪೊರೇಟ್‌ ಕಂಪನಿಗಳಿಂದ ₹600 ಕೋಟಿ ಹೂಡಿಕೆ: ಪುಟ್ಟರಾಜು
Last Updated 10 ಜನವರಿ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ ಕೆರೆಗಳ ಸಂರಕ್ಷಣೆಗೆ ವಿವಿಧ ಕಾರ್ಪೊರೇಟ್‌ ಕಂಪನಿಗಳು ₹600 ಕೋಟಿಯಷ್ಟು ಹಣ ತೊಡಗಿಸಲು ಮುಂದಾಗಿವೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ತಿಳಿಸಿದರು.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗುರುವಾರ ನಡೆದ ಕರ್ನಾಟಕ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ರಾಜ್ಯದಲ್ಲಿ ಯಾವ ಮತ್ತು ಎಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬುದನ್ನು ಗುರುತಿಸಲು ಕಂಪನಿಗಳು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿವೆ ಎಂದೂ ಹೇಳಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕೆರೆಗಳ ಅಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸುವುದು ಅತಿ ಅಗತ್ಯ. ಖಾಸಗಿ ಸಂಸ್ಥೆಗಳು ಕೆರೆಗಳ ಸಂರಕ್ಷಣೆ, ಅಭಿವೃದ್ಧಿಪಡಿಸಲು ಉತ್ಸಾಹ ತೋರಿ ಮುಂದೆ ಬಂದಾಗ ಅಧಿಕಾರಿಗಳು ಉತ್ತೇಜನ ನೀಡಿ ತ್ವರಿತವಾಗಿ ಅನುಮೋದನೆ ನೀಡಬೇಕು ಎಂದು ಹೇಳಿದರು.

ಸರ್ಕಾರ ಮತ್ತು ಖಾಸಗಿ ಕಂಪನಿಗಳ ಪಾತ್ರಗಳ ಬಗ್ಗೆ ಒಪ್ಪಂದದಲ್ಲಿ ಸ್ಪಷ್ಟ ಉಲ್ಲೇಖವಿರಬೇಕು. ಯೋಜನೆ ಅನುಷ್ಠಾನದಲ್ಲಿ ಯಾವುದೇ ಲೋಪಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಕೆರೆಗಳ ದುಃಸ್ಥಿತಿಯನ್ನು ರಾತ್ರೋ ರಾತ್ರಿ ಸರಿಪಡಿಸಲು ಸಾಧ್ಯವಿಲ್ಲ. ಕೆಲವು ವಿಚಾರಗಳಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು.ಈ ಸಂಬಂಧ ಸಮಗ್ರ ಯೋಜನಾ ವರದಿ ಸಿದ್ಧಪಡಿಸಬೇಕು. ಕೆರೆಗಳ ಅಭಿವೃದ್ಧಿಯನ್ನುಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಗಳ ನೆರವಿನೊಂದಿಗೆ ಹಂತ ಹಂತವಾಗಿ ನಿಗದಿತ ಕಾಲಮಿತಿಯಲ್ಲಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಬೆಂಗಳೂರು ಕೆರೆಗಳ ಕುರಿತು ವಿಸ್ತೃತ ಚರ್ಚೆ: ಬೆಂಗಳೂರು ನಗರದ ಕೆರೆಗಳ ಜಲಾನಯನ ಪ್ರದೇಶಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಕೆರೆಗಳಿಗೆ ನೀರು ಸರಾಗವಾಗಿ ಹರಿದು ಬರುವಂತೆ ಮಾಡಬೇಕು. ರಾಜಕಾಲುವೆ ಮೇಲೆ ಮನೆಗಳನ್ನು ಕಟ್ಟಿಕೊಂಡಿರುವ ಬಡವರಿಗೆ ಪುನರ್ವಸತಿ ಕಲ್ಪಿಸಲು ಪರ್ಯಾಯ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದರು.

ಡಿಟರ್ಜೆಂಟ್‌ಗಳಲ್ಲಿ ಫಾಸ್ಫೇಟ್‌ ಮತ್ತು ಸಲ್ಫೇಟ್‌ ನಿಷೇಧಕ್ಕೆ ಮನವಿ

ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ 204 ಕೆರೆಗಳಿವೆ. ಮಾನವ ತ್ಯಾಜ್ಯ, ಡಿಟೆರ್ಜೆಂಟ್‌, ಕೈಗಾರಿಕಾ ತ್ಯಾಜ್ಯಗಳಲ್ಲಿ ಫಾಸ್ಫೇಟ್‌ ಮತ್ತು ಸಲ್ಫೇಟ್‌ ಅಂಶಗಳು ಹೆಚ್ಚಾಗಿರುವ ತ್ಯಾಜ್ಯ ನೀರು ಸೇರುವ ಕಾರಣ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ, ಒಳಚರಂಡಿ ನೀರು ನೇರವಾಗಿ ಕೆರೆಗಳಿಗೆ ಸೇರದಂತೆ ಸಂಸ್ಕರಿಸಬೇಕು. ಡಿಟರ್ಜೆಂಟ್‌ಗಳಲ್ಲಿ ಫಾಸ್ಫೇಟ್‌ ಮತ್ತು ಸಲ್ಫೇಟ್‌ ಅಂಶಗಳನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT