15 ತಿಂಗಳಲ್ಲಿ 6,011 ಯುನಿಟ್‌ ರಕ್ತ ಸಂಗ್ರಹ

5
ಬೆಳಗಾವಿ ಜಿಲ್ಲಾ ಪಂಚಾಯ್ತಿಯಿಂದ ವಿನೂತನ ಕಾರ್ಯಕ್ರಮ

15 ತಿಂಗಳಲ್ಲಿ 6,011 ಯುನಿಟ್‌ ರಕ್ತ ಸಂಗ್ರಹ

Published:
Updated:
Deccan Herald

ಬೆಳಗಾವಿ: ಜಿಲ್ಲಾ ಪಂಚಾಯ್ತಿ ಸೂಚನೆಯಂತೆ, ಗ್ರಾಮ ಪಂಚಾಯ್ತಿಗಳು ನಡೆಸುತ್ತಿರುವ ರಕ್ತಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 15 ತಿಂಗಳಲ್ಲಿ 121 ಶಿಬಿರಗಳನ್ನು ಆಯೋಜಿಸಿ, 6,011 ಯುನಿಟ್‌ಗಳಷ್ಟು ರಕ್ತ ಸಂಗ್ರಹಿಸಲಾಗಿದೆ.

ಜಿಲ್ಲೆಯಲ್ಲಿ 506 ಗ್ರಾಮ ಪಂಚಾಯ್ತಿಗಳಿವೆ. ಇವುಗಳ ವ್ಯಾಪ್ತಿಯ ಗ್ರಾಮದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ವೈಯಕ್ತಿಕ ಶೌಚಾಲಯಗಳ ನಿರ್ಮಾಣದ ಮಹತ್ವ ತಿಳಿಸುವುದಕ್ಕಾಗಿಯೂ ಕೆಲವೆಡೆ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ. ಜಿಲ್ಲಾ ಪಂಚಾಯ್ತಿಯಿಂದಲೇ ವೇಳಾಪಟ್ಟಿ ನೀಡಲಾಗಿದ್ದು, ಕಾರ್ಯಕ್ರಮ ಸಂಘಟಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, 139 ಪ್ರಾಥಮಿಕ ಆರೋಗ್ಯ ಕೇಂದ್ರ, 16 ಸಮುದಾಯ ಆರೋಗ್ಯ ಕೇಂದ್ರ, 9 ತಾಲ್ಲೂಕು ಆಸ್ಪತ್ರೆ, 12 ನಗರ ಆರೋಗ್ಯ ಕೇಂದ್ರ ಹಾಗೂ ನೂರಾರು ಖಾಸಗಿ ಆಸ್ಪತ್ರೆಗಳಿವೆ. ಇಲ್ಲಿ, ಚಿಕಿತ್ಸೆಗಾಗಿ ವಾರ್ಷಿಕ ಲಕ್ಷಾಂತರ ರೋಗಿಗಳು ಬರುತ್ತಾರೆ. ಹೆರಿಗೆ ಸಂದರ್ಭ, ಅಪಘಾತ, ಅಪಾಯಕಾರಿ ರೋಗಗಳ ಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಕೊರತೆ ಕಂಡುಬರುತ್ತಿತ್ತು. ಇದನ್ನು ನೀಗಿಸುವುದಕ್ಕಾಗಿ ರಕ್ತದಾನದ ಮಹತ್ವ ಸಾರುವ ಅಭಿಯಾನವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಮಾಡಲಾಗುತ್ತಿದೆ. ಗ್ರಾಮ ಪಂಚಾಯ್ತಿಗಳು ಹಾಗೂ ಎಚ್‌ಐವಿ ಏಡ್ಸ್ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಕಚೇರಿಯವರಿಗೆ ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ.

ದೇಶದಲ್ಲೆಲ್ಲೂ ನಡೆದಿಲ್ಲ:

‘ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದಾಗಿದೆ. ರಕ್ತಕ್ಕೆ ಪರ್ಯಾಯ ಇಲ್ಲ; ಅಥವಾ ಯಾವುದೇ ತಂತ್ರಜ್ಞಾನದಿಂದಲೂ ಉತ್ಪಾದನೆ ಸಾಧ್ಯವಿಲ್ಲ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಗ್ರಾಮ ಪಂಚಾಯ್ತಿ ಆಡಳಿತದಲ್ಲಿ ಸಾಮಾಜಿಕ ಸಹಭಾಗಿತ್ವ ಹೆಚ್ಚಿಸಲು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈ ಅಭಿಯಾನ ಯಶಸ್ವಿಯೂ ಆಗುತ್ತಿವೆ. 2017–18ರಲ್ಲಿ 95 ಕ್ಯಾಂಪ್‌ಗಳನ್ನು ನಡೆಸಿ 4,551 ಯುನಿಟ್‌, ಪ್ರಸಕ್ತ ಆರ್ಥಿಕ ವರ್ಷದಲ್ಲಿ 26 ಶಿಬಿರ ನಡೆಸಿದ್ದು, 1,460 ಯುನಿಟ್‌ ರಕ್ತ ಸಂಗ್ರಹಿಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್ ‘ಪ್ರಜಾವಾಣಿ’ಗೆ ತಿಳಿಸಿದರು.

ರಕ್ತ ಸಂಗ್ರಹಣೆಯ ಮುಖ್ಯ ಕೇಂದ್ರ ಬಿಮ್ಸ್‌ನಲ್ಲಿದೆ. ಇದಲ್ಲದೇ, 6 ಖಾಸಗಿ ಬ್ಲಡ್‌ ಬ್ಯಾಂಕ್‌ಗಳಿವೆ. ಜಿಲ್ಲೆಯ ವಿವಿಧೆಡೆ 11 ಶೇಖರಣಾ ಕೇಂದ್ರಗಳಿವೆ. ಅಲ್ಲಿ ಸಂಗ್ರಹಿಸಲಾಗುವ ರಕ್ತವನ್ನು ತುರ್ತು ಅಗತ್ಯ ಇರುವವರಿಗೆ ನೀಡಲಾಗುತ್ತಿದೆ.

‘ಶಿಬಿರವೊಂದರಲ್ಲಿ ಸರಾಸರಿ 50ರಿಂದ 100 ಯುನಿಟ್‌ಗಳಷ್ಟು ರಕ್ತ ಸಂಗ್ರಹಿಸಲಾಗುತ್ತಿದೆ. ಹುಕ್ಕೇರಿ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಶಿಬಿರದಲ್ಲಿ ರಕ್ತಪರೀಕ್ಷೆ ಮಾಡುವುದಿಲ್ಲ. ಬಿಮ್ಸ್‌ಗೆ ತಂದು ಎಚ್‌ಐವಿ, ಮಲೇರಿಯಾ, ಕಾಮಾಲೆ ಮೊದಲಾದ ಪರೀಕ್ಷೆ ನಡೆಸಿ, ಸುರಕ್ಷಿತ ಎಂದು ಖಚಿತಪಡಿಸಿಕೊಂಡ ಬಳಿಕವಷ್ಟೇ ತಾಲ್ಲೂಕು ಸಂಗ್ರಹಣಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಅಲ್ಲಿ, ಅಗತ್ಯಗಳಿಗೆ ಅನುಗುಣವಾಗಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತದೆ’ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ.ಶೈಲಜಾ ತಮ್ಮಣ್ಣವರ ಮಾಹಿತಿ ನೀಡಿದರು.

‘ಕೆಲವು ಸಂದರ್ಭಗಳಲ್ಲಿ, ರಕ್ತದ ಮಾದರಿಗಳನ್ನು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿರುವ ಕೇಂದ್ರಕ್ಕೂ ಕಳುಹಿಸಲಾಗುತ್ತದೆ’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !