ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾಕ್ಕೆ ಬಜೆಟ್‌ನಲ್ಲಿ ₹25 ಸಾವಿರ ಕೋಟಿ

ಹಾವೇರಿ ಜಿಲ್ಲೆಯಲ್ಲಿ ಬರ ಪರಿಶೀಲಿಸಿದ ನಂತರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ
Last Updated 5 ಜನವರಿ 2019, 7:16 IST
ಅಕ್ಷರ ಗಾತ್ರ

ಹಾವೇರಿ: ಫೆ.8ರಂದು ಬಜೆಟ್ ಮಂಡಿಸಲಿದ್ದು, ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾಕ್ಕೆ ₹ 25 ಸಾವಿರ ಕೋಟಿ ನೀಡಲಾಗುವುದು. ಭೂ ರಹಿತರು ಹಾಗೂ ಬೀದಿ ವ್ಯಾಪಾರಿಗಳ ‘ಬಡವರ ಬಂಧು’ ಯೋಜನೆಗೆ ಇನ್ನಷ್ಟು ಅನುದಾನನೀಡಿ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಣೆಬೆನ್ನೂರು ತಾಲ್ಲೂಕಿನ ಜೋಯಿಸರಹರಳಹಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ರೈತರ ಸಾಲಮನ್ನಾಕ್ಕೆ ಈಗಾಗಲೇ ₹6 ಸಾವಿರ ಕೋಟಿ ಹಣವನ್ನು ಪ್ರತ್ಯೇಕವಾಗಿ ಇಟ್ಟಿದ್ದೇನೆ. ಯಾವುದೇ ಯೋಜನೆಯ ಅನುದಾನ ಕಡಿತ ಗೊಳಸಿಲ್ಲ. ಎಲ್ಲರಿಗೂ ಸಾಲ ಋಣಮುಕ್ತ ಪತ್ರ ನೀಡಲಾಗುವುದು. ಎಲ್ಲರೂ ತಾಳ್ಮೆಯಿಂದ ಕಾಯಬೇಕು’ ಎಂದು ಮನವಿ ಮಾಡಿದರು.

ಕೇವಲ ಸಾಲಮನ್ನಾದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಒತ್ತಡ ಮುಕ್ತರಾ ಗಲು ಒಂದು ಬಾರಿ ಮನ್ನಾ ಮಾಡಿದ್ದೇವೆ. ರೈತರ ಆರ್ಥಿಕಾಭಿವೃದ್ಧಿಗಾಗಿ ಕೃಷಿ ವಿಧಾನದಲ್ಲಿ ಬದಲಾವಣೆ ತರಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.

‘ರೈತರ ಬೆಳೆಯನ್ನು ಸರ್ಕಾರವೇ ಖರೀದಿಸುವುದು ಮತ್ತಿತರ ತೀರ್ಮಾನ ವನ್ನು ಸರ್ಕಾರ ತೆಗೆದುಕೊಳ್ಳಲಿದೆ. ‘ಆ ಯೋಜನೆಯನ್ನು ರಾತ್ರಿಯೊಳಗೆ ಪ್ರಾರಂಭ ಮಾಡು...’ ಎಂದು ಒತ್ತಾಯಿಸಿದರೆ ನನ್ನ ಬಳಿ ಮಂತ್ರ ದಂಡ ಇಲ್ಲ. ಸಮಯಾವಕಾಶ ನೀಡಿ’ ಎಂದರು.

ಎಲ್ಲ ರೈತರು ಭೇದಗಳನ್ನು ಮರೆತು, ಒಟ್ಟಾಗಿ ಗ್ರಾಮದ ಮಳೆ ಪ್ರಮಾಣ, ಯಾವ ಬೆಳೆ ಉತ್ತಮ, ಮಣ್ಣಿನ ರಕ್ಷಣೆ, ಪರಿಸರ ಸಂರಕ್ಷಣೆ, ಕೃಷಿ ವಿಧಾನ ಬಗ್ಗೆ ಚರ್ಚಿಸಿ ಹೆಜ್ಜೆ ಇಡಬೇಕು. ಇಂತಹ ತರಬೇತಿಯನ್ನು ಸರ್ಕಾರವೇ ನೀಡಲಿದೆ ಎಂದರು.

ಸರ್ಕಾರಿ ಶಾಲೆಗಳ ಮೂಲ ಸೌಕರ್ಯಕ್ಕೆ ₹1,200 ಕೋಟಿ ನೀಡಲಾಗುವುದು. ಶಿಕ್ಷಕರ ನೇಮಕಾತಿ ಯನ್ನೂ ಮಾಡಲಾಗುವುದು ಎಂದು ಹೇಳಿದರು.

ಕುಡಿಯುವ ನೀರು, ಮೇವು, ಉದ್ಯೋಗ ಸೃಜನೆಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ವಿಶ್ವಾಸವಿಟ್ಟು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವಿಶ್ವಾಸ ಹೆಚ್ಚಿದೆ ಎಂದರು.

ರಾಣೆಬೆನ್ನೂರು ತಾಲ್ಲೂಕಿನ ಯರೇಕುಪ್ಪಿ ರೈತ ದ್ಯಾವಪ್ಪ ಕಡ್ಲೆಗೊಂದಿ ಅವರ ಹೊಲದಲ್ಲಿ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿದ ಕುಮಾರಸ್ವಾಮಿ, ‘ಸಾಲಮನ್ನಾ, ಬೆಳೆವಿಮೆ, ಬೆಳೆ ಪರಿಹಾರ, ಇನ್‌ಫುಟ್‌ ಸಬ್ಸಿಡಿ ಮೂಲಕ ರೈತರ ನೆರವಿಗೆ ಸರ್ಕಾರ ನಿಲ್ಲುತ್ತಿದೆ. ಬೆಳೆವಿಮೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಸಮಸ್ಯೆ ಉಂಟಾದರೆ ಸರ್ಕಾರವೇ ಪರಿಹಾರ ನೀಡಲಿದೆ ಎಂದರು.

‘ಕೊಳವೆ ಬಾವಿಯನ್ನು 600 ಅಡಿಗೂ ಹೆಚ್ಚು ಆಳ ಕೊರೆಯಲು ಪರವಾನಗಿ ನೀಡಬೇಕು. ಅರಣ್ಯ ಭೂಮಿಯಲ್ಲಿ ವಾಸವಿರುವವರಿಗೆ ಹಕ್ಕುಪತ್ರ ನೀಡಬೇಕು. ಬೆಳೆ
ವಿಮೆ ನೀಡಬೇಕು ಎಂಬಿತ್ಯಾದಿ ಮನವಿಯನ್ನು ಯರೇಕುಪ್ಪಿಯ ಗ್ರಾಮಸ್ಥರು ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್, ಶಾಸಕ ಬಿ.ಸಿ. ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎಚ್.ಎನ್. ಕೋನರೆಡ್ಡಿ, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಮತ್ತಿತರರು ಇದ್ದರು.

‘ನಿಮ್ಮನ್ನು ಸಿ.ಎಂ. ಮಾಡಿದ್ದೇವೆ’

ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು,‘ನಮ್ಮೂರಿನ ಕೆರೆ ತುಂಬಿಸಿ’ ಎಂದು ರೈತರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದಅವರು, ‘ಹೌದು, ಅದು ಮಾಡಿ, ಇದು ಮಾಡಿ ಎಂದು ನನಗೆ ಕೇಳುತ್ತೀರಿ. ನನಗೇನು ಮಾಡಿದ್ದೀರಿ?’ ಎಂದು ಪ್ರಶ್ನಿಸಿದರು.

ಆಗ ರೈತರು, ‘ನಿಮ್ಮನ್ನು ನಾವು ಸಿ.ಎಂ. ಮಾಡಿದ್ದೇವೆ. ನಿಮ್ಮಿಂದ ಮಾತ್ರ ರೈತರ ಸಮಸ್ಯೆ ಪರಿಹಾರ ಸಾಧ್ಯ’ ಎಂದಾಗ, ಕುಮಾರಸ್ವಾಮಿ ನಸುನಕ್ಕರು.

* ರೈತರು ಧೈರ್ಯವಾಗಿದ್ದರೆ, ನನಗೆ ಕೆಲಸ ಮಾಡಲು ಉತ್ಸಾಹವಿರುತ್ತದೆ. ನೀವೇ ನನ್ನ ಭರವಸೆಗಳ ಬಗ್ಗೆ ಅನುಮಾನಪಟ್ಟರೆ ಕೆಲಸ ಆಗುವುದಿಲ್ಲ

-ಎಚ್.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT