ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಸಾವಿರ ಕ್ವಿಂಟಲ್‌ ಕಳಪೆ ಸಕ್ಕರೆ ಉತ್ಪಾದನೆ

ಮೈಷುಗರ್‌: ಖರೀದಿಸಲು ವರ್ತಕರ ನಿರಾಕರಣೆ
Last Updated 3 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಮಂಡ್ಯ: ಸರ್ಕಾರಿ ಸ್ವಾಮ್ಯದ ಮೈಷುಗರ್‌ ಕಾರ್ಖಾನೆಯಲ್ಲಿ ಜನಬಳಕೆಗೆ ಯೋಗ್ಯವಲ್ಲದ ಸಕ್ಕರೆ ತಯಾರಿಸಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ವರ್ತಕರು ನಿರಾಕರಿಸಿದ್ದಾರೆ. ಹೀಗಾಗಿ ಈ ಹಂಗಾಮಿನಲ್ಲಿ ಉತ್ಪಾದನೆಯಾಗಿರುವ 60 ಸಾವಿರ ಕ್ವಿಂಟಲ್‌ ವ್ಯರ್ಥವಾಗಿದೆ.

ನಾಲ್ಕು ವರ್ಷಗಳಿಂದ ರೋಗಗ್ರಸ್ತವಾಗಿದ್ದ ಕಾರ್ಖಾನೆಗೆ ಸರ್ಕಾರ ₹ 20 ಕೋಟಿ ಅನುದಾನ ನೀಡಿದ್ದು, ಆಗಸ್ಟ್ 23ರಂದು ಕಬ್ಬು ಅರೆಯುವಿಕೆ ಆರಂಭಿಸಿತ್ತು. ಸಾಕಷ್ಟು ತಾಂತ್ರಿಕ ಸಮಸ್ಯೆಗಳೊಂದಿಗೆ ಕುಂಟುತ್ತಾ ಸಾಗಿದ್ದು, 1.08 ಲಕ್ಷ ಟನ್‌ ಕಬ್ಬು ಅರೆದಿದ್ದು, 59,772 ಕ್ವಿಂಟಲ್‌ ಸಕ್ಕರೆ ಉತ್ಪಾದಿಸಿದೆ. ಇದಿಷ್ಟೂ ಸಕ್ಕರೆ ಕಂದುಬಣ್ಣದಿಂದ ಕೂಡಿದ್ದು, ಬಳಕೆಗೆ ಯೋಗ್ಯವಾಗಿಲ್ಲ.

ಪ್ರಯೋಗಾಲಯದ ಪ್ರಮಾಣಪತ್ರವೂ ಸಿಕ್ಕಿಲ್ಲ. ಗಾಳಿಗೆ ತೂರಿದರೆ ಹಾರಿಹೋಗುವಂತಹ ಬೂದಿಯಂತಿದೆ. ಕಾರ್ಖಾನೆ ಆಡಳಿತ ಮಂಡಳಿ ಮಾರಾಟಕ್ಕೆ ಐದಾರು ಬಾರಿ ಟೆಂಡರ್‌ ಕರೆದರೂ ಕೊಳ್ಳಲು ಯಾರೂ ಮುಂದೆ ಬಂದಿಲ್ಲ. ಬಿಸ್ಕತ್‌, ಮಿಠಾಯಿ ಕಾರ್ಖಾನೆ, ಆಲೆಮನೆಗಳಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.

‘ಸಕ್ಕರೆ ಕಂದು ಬಣ್ಣಕ್ಕೆ ತಿರುಗಲು ಕಾರ್ಖಾನೆಯಲ್ಲಿರುವ ರಾಸಾಯನಿಕ ತಜ್ಞರ (ಕೆಮಿಸ್ಟ್) ಅನುಭವದ ಕೊರತೆಯೇ ಕಾರಣ. ಮೈಷುಗರ್‌ ಕಾರ್ಖಾನೆಯ ಯಂತ್ರಗಳನ್ನು ಕಾರ್ಮಿಕರೇ (ಮಾನ್ಯೂವಲ್‌) ನಿರ್ವಹಣೆ ಮಾಡಬೇಕು. ಹೊಸದಾಗಿ ಲಕ್ಷ ಲಕ್ಷ ಸಂಬಳ ಕೊಟ್ಟು ನೇಮಕಾತಿ ಮಾಡಿಕೊಂಡ ತಂತ್ರಜ್ಞರಿಗೆ ಹಳೆಯ ಕಾರ್ಖಾನೆ ನಿರ್ವಹಣೆ ಮಾಡಿದ ಅನುಭವ ಇಲ್ಲ. ಹೀಗಾಗಿ ಸಕ್ಕರೆ ಕಂದು ಬಣ್ಣಕ್ಕೆ ತಿರುಗಿದೆ. ಈ ಬಗ್ಗೆ ಕೆಲ ಕಾರ್ಮಿಕರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ, ಸಕ್ಕರೆ ಸಿಹಿಯಾಗಿದ್ದರೆ ಸಾಕು ಎಂಬ ಉಡಾಫೆ ಉತ್ತರ ನೀಡಿದ್ದಾರೆ. ಸಕ್ಕರೆ ವ್ಯರ್ಥವಾಗುತ್ತಿದ್ದರೂ ಯಾವ ಅಧಿಕಾರಿಯೂ ಚಕಾರ ಎತ್ತಿಲ್ಲ’ ಎಂದು ಹೆಸರು ಹೇಳಬಯಸದ ಕಾರ್ಮಿಕರೊಬ್ಬರು ತಿಳಿಸಿದರು.

ಮೊಲಾಸಿಸ್‌ ಸಂಗ್ರಹ: ಕಾರ್ಖಾನೆ ಆರಂಭವಾದ ನಂತರ ಹಲವು ಬಾರಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ. ಅರ್ಧಕ್ಕೆ ನಿಂತ ಯಂತ್ರಗಳು ಮತ್ತೊಮ್ಮೆ ಕಾರ್ಯಾರಂಭ ಮಾಡುವಷ್ಟರಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ಕಬ್ಬಿನ ಹಾಲು ವ್ಯರ್ಥವಾಗಿದೆ. ಹೀಗಾಗಿ ಆ. 23ರಿಂದ ಈವರೆಗೆ 7 ಸಾವಿರ ಮೆಟ್ರಿಕ್‌ ಟನ್‌ ಮೊಲಾಸಿಸ್‌ ಸಂಗ್ರಹವಾಗಿದೆ.

‘ಒಂದು ಲಕ್ಷ ಟನ್‌ ಕಬ್ಬು ಅರೆದರೆ 4 ಸಾವಿರ ಮೆಟ್ರಿಕ್‌ಟನ್‌ (ಶೇ 4) ಮೊಲಾಸಿಸ್‌ ಹೊರಬರಬೇಕು. ಆದರೆ ಇಲ್ಲಿ 7 ಸಾವಿರ ಮೆಟ್ರಿಕ್‌ ಟನ್‌ (ಶೇ 7) ಹೊರಬಂದಿದೆ. ಇದರಿಂದ ಇಳುವರಿ ಕುಸಿದು ಕಾರ್ಖಾನೆ ನಷ್ಟದತ್ತ ಸಾಗಿದೆ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಬೋರೇಗೌಡ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

**

ರೈತರಿಗೆ ಮುಂಗಡ ಇಲ್ಲ; ಕಾರ್ಮಿಕರಿಗೆ ಸಂಬಳ ಇಲ್ಲ

ಕಬ್ಬು ಪೂರೈಸಿದ 24 ಗಂಟೆಯಲ್ಲಿ ಶೇ 15ರಷ್ಟು ಹಣವನ್ನು ರೈತರಿಗೆ ಮುಂಗಡವಾಗಿ ನೀಡುವುದಾಗಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ, ಸಕ್ಕರೆ ಆಯುಕ್ತ ಅಜಯ್‌ ನಾಗಭೂಷಣ್‌ ಭರವಸೆ ನೀಡಿದ್ದರು. ಆದರೆ, ಸೆ. 20ರ ನಂತರ ರೈತರಿಗೆ ಮುಂಗಡ ಹಣ ಪಾವತಿಯಾಗಿಲ್ಲ. ಸಕ್ಕರೆ ಮಾರಾಟವಾಗದ ಕಾರಣ ಆರು ತಿಂಗಳಿಂದ ಕಾರ್ಮಿಕರಿಗೆ ಸಂಬಳವನ್ನೂ ಕೊಟ್ಟಿಲ್ಲ.

‘ಮೈಷುಗರ್‌ ಕಾರ್ಖಾನೆ ಮುಚ್ಚುವುದು ಒಳಿತು. ಕಾರ್ಖಾನೆ ಇಲ್ಲ ಎಂದಾದರೆ ರೈತರು ಹೇಗಾದರೂ ಬದುಕಿಕೊಳ್ಳುತ್ತಾರೆ. ನಡೆಸುವುದಾಗಿ ಭರವಸೆ ನೀಡಿ ಕಬ್ಬು ಹಾಕಿಸಿಕೊಂಡು ಹಣ ಕೊಡದಿದ್ದರೆ ರೈತರಿಗೆ ಆತ್ಮಹತ್ಯೆಯೊಂದೇ ಮಾರ್ಗ’ ಎಂದು ರೈತ ಸಂಘದ ಮುಖಂಡ ಶಂಭೂನಹಳ್ಳಿ ಸುರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT