ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಹೃದಯ ಕಿತ್ತು ಬರುತ್ತೆ: ಸದನದ ಗದ್ದಲಕ್ಕೆ ನೊಂದು ನುಡಿದ ರಮೇಶ್‌ಕುಮಾರ್‌ 

Last Updated 14 ಫೆಬ್ರುವರಿ 2019, 12:18 IST
ಅಕ್ಷರ ಗಾತ್ರ

ಬೆಂಗಳೂರು:ಆಡಿಯೊ ತನಿಖೆಗೆ ಎಸ್‌ಐಟಿ ರಚನೆ, ಜೆಡಿಎಸ್ ಕಾರ್ಯಕರ್ತರಿಂದ ಹಾಸನದಲ್ಲಿ ಬಿಜೆಪಿ ಶಾಸಕರ ಮನೆ ಮೇಲೆ ಕಲ್ಲೆಸೆದ ಕುರಿತು ವಿಪಕ್ಷ ಸದಸ್ಯರುವಿಧಾನಸಭೆಯಲ್ಲಿ ಎಬ್ಬಿಸಿದ ಗದ್ದಲ ಬಜೆಟ್‌ ಅಧಿವೇಶನದ ಕಲಾಪವನ್ನೇ ಬಲಿ ಪಡೆಯಿತು. ಕೊನೆಯಲ್ಲಿ, ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರು ‘ನನಗೆ ಹೃದಯ ಕಿತ್ತು ಬರುತ್ತೆ’ ಎಂಬ ಮಾತಿಗೆ ಸದನ ಸಾಕ್ಷಿಯಾಯಿತು.

ವಿಧಾನಸಭೆ ಕಲಾಪ ಗುರುವಾರ ಮಧ್ಯಾಹ್ನ ಆರಂಭವಾಗುತ್ತಿದ್ದಂತೆ ಸದನದಲ್ಲಿ ಬಿಜೆಪಿ ಸದಸ್ಯರು ರೈತ ವಿರೋಧಿ ಗೂಂಡಾ ಸರ್ಕಾರ, ಎಸ್‌ಐಟಿ ಬೇಡ, ಶಾಸಕರ ಮೇಲೆ ಹಲ್ಲೆ ನಡೆಸುವ ಸರ್ಕಾರ ಎಂದೆಲ್ಲಾ ಘೋಷಣೆ ಕೂಗಿ, ಕಲಾಪಕ್ಕೆ ಅಡ್ಡಿಪಡಿಸಿದರು.

‘ಸದನದಲ್ಲಿ ಇಂತಹ ವಾತಾವರಣ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಕಾರಣರು? ಅವರೋ, ಇವರೋ ಗೊತ್ತಿಲ್ಲ. ಬಜೆಟ್‌ ಮಂಡನೆಯಾಗಿ ಪಾಸ್ ಆಯಿತು ಎಂದು ನಾನು ಹೆಮ್ಮೆಪಡುವುದಿಲ್ಲ. ಮನೆಯಲ್ಲಿ ಒಂದೊಂದು ರೂಪಾಯಿಯನ್ನು ಲೆಕ್ಕ ಹಾಕುತ್ತೇವೆ. ಒಂದು ವಸ್ತುವಿಗೆ ಹತ್ತಾರು ಅಂಗಡಿ ತಿರುಗುತ್ತೇವೆ, ನೂರಾರು ಬಾರಿ ಯೋಚಿಸುತ್ತೇವೆ. ಜನರ ಪರವಾಗಿ, ಜನರ ತೆರಿಗೆಯ ಲಕ್ಷಾಂತರ ರೂಪಾಯಿಗಳ ವಿಷಯದಲ್ಲಿ(ಬಜೆಟ್‌) ಹೀಗಾಗಬಾರದು. ಮುಂದೆ ಹೀಗಾಗದಂತಿರಲಿ’ ಎಂದು ರಮೇಶ್‌ ಕುಮಾರ್‌ ಹೇಳಿದರು.

ಗದ್ದಲದ ವೇಳೆ ಶಾಸಕ ಎಂ.ಪಿ. ರೇಣುಕಾಚಾರ್ಯ ಕೂಗಿಕೊಂಡಾಗ ಸಭಾಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ಕೆಲ ಮಾತುಗಳನ್ನು ಹೇಳಲು ಬಯಸಿದ ಸಭಾಧ್ಯಕ್ಷರು, ಸದಸ್ಯರ ವರ್ತನೆಗೆ ನೊಂದುಕೊಂಡರು.

ಇದರಮಧ್ಯೆಯೇ ಕಾರ್ಯ ಕಲಾಪದ ಸಂಕ್ಷಿಪ್ತ ವರದಿಯನ್ನು ಓದಿದ ಸಭಾಧ್ಯಕ್ಷರು, ಕಲಾಪ ಏಳು ದಿನಗಳ ಕಾಲದಲ್ಲಿ 15 ಗಂಟೆ 10 ನಿಮಿಷ ನಡೆದಿದೆ ಎಂದು ತಿಳಿಸಿದರು.

‘ನೋಡ್ರೀ ಮ್ಯಾನರ್ಸ್‌ ಇರಬೇಕಾಗುತ್ತೆ. ಯಾರ್ರಿ ಇವ್ರು. ಇವರನ್ನೆಲ್ಲಾ ಯಾರು ಇಲ್ಲಿಗೆ ಕಳುಹಿಸ್ತಾರೋ... ನಾನು ಒಂದೆರೆಡು ಮಾತುಗಳನ್ನು ಹೇಳಿ ಕೊನೆಗೊಳಿಸೋಣ ಎಂದುಕೊಂಡಿದ್ದೆ. ನಾನು ಯಾವುದೇ ಪಕ್ಷ ವಹಿಸಿ ಮಾತನಾಡುತ್ತಿಲ್ಲ. ಇಡೀ ಸದನಕ್ಕೆ ಹೇಳುತ್ತಿದ್ದೇನೆ ಕೇಳ್ರೀ’ ಎಂದು ರಮೇಶ್‌ಕುಮಾರ್‌ ಹೇಳಿದರು. ಆದರೂ, ಬಿಜೆಪಿ ಸದಸ್ಯರು ಗದ್ದಲ ಮುಂದುವರಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಗದ್ದಲದ ನಡುವಿಯೂ ಕೆಲ ತಿಳಿವಳಿಕೆ ಮಾತನ್ನು ಹೇಳಲು ಮುಂದಾದ ರಮೇಶ್‌ ಕುಮಾರ್‌, ‘ನನಗೆ ಹೃದಯ ಕಿತ್ತು ಬರುತ್ತೆ’ ಎಂದು ನೋವಿನಿಂದಲೇ ಹೇಳುತ್ತಾ ‘ತೆರಿಗೆ ಹಣ ವೆಚ್ಚ ಮಾಡುವಾಗ ಹೀಗಾಗಬಾರದು. ನಾನು ಪಕ್ಷ ವಹಿಸಿ ಮಾತನಾಡುತ್ತಿಲ್ಲ. ಒಬ್ಬರನ್ನು ಕಾರಣ ಮಾಡುತ್ತಿಲ್ಲ’ ಎಂದು ಹೇಳಿದರು.

ಗದ್ದಲ ಮತ್ತಷ್ಟು ಹೆಚ್ಚಾಯಿತು. ವಿಪಕ್ಷ ಸದಸ್ಯರು ಸಭಾಧ್ಯಕ್ಷರ ಮಾತನ್ನು ಕೇಳಲು ತಯಾರಿರಲಿಲ್ಲ. ಆದ್ದರಿಂದ, ರಾಷ್ಟ್ರಗೀತೆ ಹಾಡಲು ಅನುವು ಮಾಡಿಕೊಟ್ಟು, ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುವಂತೆ ಸೂಚಿಸಿದರು.

ಬಳಿಕ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ರಮೇಶ್‌ಕುಮಾರ್‌ ನೊಂದ ಮನಸ್ಸಿನಿಂದಲೇ ಪೀಠದಿಂದ ಇಳಿದು, ಸದನದಿಂದ ಹೊರ ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT