ಟೆಕಿಗಳ ಪ್ರಶ್ನೆಗಳಿಗೆ ರಾಹುಲ್‌ ಉತ್ತರ

ಬುಧವಾರ, ಏಪ್ರಿಲ್ 24, 2019
32 °C

ಟೆಕಿಗಳ ಪ್ರಶ್ನೆಗಳಿಗೆ ರಾಹುಲ್‌ ಉತ್ತರ

Published:
Updated:

ಬೆಂಗಳೂರು: ಮಾನ್ಯತಾ ಟೆಕ್‌ ಪಾರ್ಕ್‌ ಆವರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೋಮವಾರ ನವೋದ್ಯಮಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಒಂದು ಗಂಟೆ ನಡೆದ ಸಂವಾದ ಕಾರ್ಯಕ್ರಮದ ಮಧ್ಯೆ ಎದುರಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಲೇ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.

ಪ್ರಶ್ನೋತ್ತರ ಸಂಕ್ಷಿಪ್ತದ ರೂಪ ಹೀಗಿದೆ.

ಅಪ್ರಮೇಯ ರಾಧಾಕೃಷ್ಣ: ಕೆಲವು ಕಂಪನಿಗಳಲ್ಲಿ ನಾನು ಬಂಡವಾಳ ಹೂಡಿದ್ದೇನೆ. ಅದಕ್ಕೆ ಸಂಬಂಧಿಸಿದಂಥ ತೆರಿಗೆ ಕಟ್ಟಿಲ್ಲ ಎಂದು ಭಾವಿಸಿ ತೆರಿಗೆ ನೋಟಿಸ್‌ ನೀಡಲಾಗುತ್ತಿದೆಯಲ್ಲ...

ರಾಹುಲ್‌: ಏಂಜೆಲ್‌ ಟ್ಯಾಕ್ಸ್‌ (ನವೋದ್ಯಮಗಳಲ್ಲಿ ಬಂಡವಾಳ ತೊಡಗಿಸುವುದರ ಮೇಲೆ ವಿಧಿಸುವ ತೆರಿಗೆ) ಸ್ಟಾರ್ಟ್ ಅಪ್‌ ಸಂಸ್ಕೃತಿಗೆ ವಿರುದ್ಧವಾಗಿದೆ. ನಾವು ಅಧಿಕಾರಕ್ಕೆ ಬಂದರೆ ಅದನ್ನು ತೆಗೆದು ಹಾಕುತ್ತೇವೆ.

ಕಾಜಲ್‌ ಉಪಾಧ್ಯಾಯ: ‘ಚೌಕಿದಾರ್‌ ಚೋರ್‌ ಹೈ’ ಎಂದು ಹೇಳಿಕೊಂಡು ಸುತ್ತಾಡುವುದು ಯಾಕೆ?

ರಾಹುಲ್‌: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಯಮಿ ಅನಿಲ್‌ ಅಂಬಾನಿ ಜೊತೆ ಕೈ ಜೋಡಿಸಿದ್ದಾರೆ. ಒಂದೇ ಒಂದು ವಿಮಾನ ತಯಾರಿಸದ ಅಂಬಾನಿ ಕಂಪನಿಗೆ ವಿಶ್ವದಲ್ಲೇ ಅತಿ ದೊಡ್ಡ ರಕ್ಷಣಾ ಗುತ್ತಿಗೆ ನೀಡಲಾಗಿದೆ. ರಕ್ಷಣಾ ಇಲಾಖೆಗೆ ಮಾಹಿತಿಯೇ ಇಲ್ಲದೆ, ಪ್ರಧಾನಿ ಸಮಾನಾಂತರ ಒಪ್ಪಂದದಲ್ಲಿ ಭಾಗಿಯಾಗಿರುವುದಕ್ಕೆ ದಾಖಲೆಗಳಿವೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಒತ್ತಾಯಿಸಿದ್ದೇವೆ. ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಕೂಡಾ ಆಗ್ರಹಿಸಿದ್ದೇವೆ. ಒಪ್ಪಂದದ ದಾಖಲೆಗಳ ಬಗ್ಗೆ ತನಿಖೆ ನಡೆದರೆ ಮೋದಿ ಮತ್ತು ಅಂಬಾನಿ ಜೈಲು ಸೇರಬೇಕಾಗುತ್ತದೆ.

ಮೀನಾ ಗಣೇಶ: ಹಿರಿಯ ನಾಗರಿಕರಿಗೆ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಸಮುದಾಯದ ಬೆಂಬಲ ಸಿಗುತ್ತಿಲ್ಲ. ಇದಕ್ಕೆ ಏನು ಮಾಡುತ್ತೀರಿ?

ರಾಹುಲ್‌: ಕನಿಷ್ಠ ಆರೋಗ್ಯ ಸೌಲಭ್ಯಗಳು ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಸಿಗುವಂತೆ ಮಾಡಬೇಕಿದೆ. ಹೀಗಾಗಿ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾವಗಳು ಇರಲಿವೆ. ಆರೋಗ್ಯ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಹೆಚ್ಚು ಹಣ ಮೀಸಲಿಟ್ಟು, ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು.

ತಿಪಟೂರು ಕೃಷ್ಣ: ಸರ್ಕಾರದ ಯೋಜನೆಗಳು ಹಳ್ಳಿಗಳಿಗೆ ತಲು ಪುವುದಿಲ್ಲ. ಸಾಲ ಸೌಲಭ್ಯ ನೀಡುವ ವಿಷಯದಲ್ಲಿ ಬ್ಯಾಂಕುಗಳಿಂದಲೂ ಸಹಕಾರ ಸಿಗುತ್ತಿಲ್ಲವಲ್ಲ...

ರಾಹುಲ್‌: ಬ್ಯಾಂಕಿಂಗ್‌ ವ್ಯವಸ್ಥೆ ಕೆಲವೇ ಜನರ ಹಿಡಿತದಲ್ಲಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಬ್ಯಾಂಕಿಂಗ್‌ ವಲಯ ಜನಸಾಮಾನ್ಯರ ಪರವಾಗಿ ಇರುವಂತೆ ಮಾಡಬೇಕಿದೆ. ಉದ್ಯೋಗ ಅವಕಾಶಗಳು ಕುಸಿಯುತ್ತಿರುವ ಬಗ್ಗೆ ಸಿಟ್ಟಿದೆ. ದೊಡ್ಡಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ.

ಮದನ್‌ ಪದಕಿ: ಹಳ್ಳಿಗಳಲ್ಲಿ ನವೋದ್ಯಮಿಗಳನ್ನು ಹೇಗೆ ಸೃಷ್ಟಿಸುತ್ತೀರಿ?

ರಾಹುಲ್‌: ಕೌಶಲ ಇಲ್ಲವೆಂದಲ್ಲ. ಇಡೀ ದೇಶದಲ್ಲಿ ನವೋದ್ಯಮಿಗಳಿದ್ದಾರೆ. ಆದರೆ, ಕೌಶಲ ಇರುವವರ ಸಮ ರ್ಪಕ ಬಳಕೆ ಆಗಬೇಕು ಅಷ್ಟೆ. ಆದರೆ, ನಾವು ಅದಕ್ಕೆ ಅವಕಾಶ ಒದಗಿಸುತ್ತಿಲ್ಲ. ತರಬೇತಿ ನೀಡಲು ಕ್ಷೌರಿಕರು ಅಥವಾ ಬಡಗಿಯರು ಬೇಕಾಗಿದ್ದಾರೆ ಎಂದು ಸರ್ಕಾರ ಎಂದಾದರೂ ಕೇಳಿದ್ದು ಇದೆಯೇ. ಸಾಂಪ್ರದಾ
ಯಿಕ ಕೌಶಲಕ್ಕೆ ಒತ್ತು ನೀಡಿದ ಕಾರಣ ಚೀನಾದವರು ಶೇ 90ರಷ್ಟು ಸ್ಥಳೀಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಆ ವ್ಯವಸ್ಥೆ ನಮ್ಮಲ್ಲೂ ಬರಬೇಕು.

ರಾಜ್ಯ ನಾಯಕರ ವಿರುದ್ಧ ಆಕ್ರೋಶ

ಸಂವಾದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಬರುತ್ತಿದ್ದಂತೆ ಮಾನ್ಯತಾ ಟೆಕ್‌ ಪಾರ್ಕ್‌ನ ರಸ್ತೆಯಲ್ಲಿ ನಿಂತಿದ್ದ ಟೆಕಿಗಳು ನರೇಂದ್ರ ಮೋದಿ ಪರ ಘೋಷಣೆ ಕೂಗಿದ್ದರಿಂದ ಮುಜುಗರಕ್ಕೆ ಒಳಗಾದ ರಾಹುಲ್‌ ಗಾಂಧಿ, ರಾಜ್ಯ ನಾಯಕರ ಮೇಲೆ ಹರಿಹಾಯ್ದಿದ್ದಾರೆ.

ರಾಹುಲ್ ಬರುತ್ತಿದ್ದಂತೆ ‘ಮೋದಿ, ಮೋದಿ, ಮೋದಿ, ಹರ ಹರ ಮೋದಿ, ಜೈ ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದ ಟೆಕಿಗಳು, 'ಮತ್ತೊಮ್ಮೆ ಮೋದಿ', ‘ಈ ಸಲ 400 ಸೀಟುಗಳು ಬಿಜೆಪಿಗೆ’ ಎಂದು ಬರೆದಿದ್ದ ‌ಫಲಕಗಳನ್ನೂ ಪ್ರದರ್ಶಿಸಿದರು. ಇದರಿಂದ ಕಸಿವಿಸಿಗೊಂಡ ರಾಹುಲ್‌, ಸಂವಾದದಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುಮಾರು 20 ನಿಮಿಷ ವಿಶ್ರಾಂತಿ ಪಡೆದರು.

ಕಾರ್ಯಕ್ರಮ ಮುಗಿದ ಬಳಿಕ ಸಚಿವ ಕೃಷ್ಣ ಬೈರೇಗೌಡ ಮತ್ತು ರಿಜ್ವಾನ್‌ ಅರ್ಷದ್‌ ಮೇಲೆ ರೇಗಾಡಿದ ರಾಹುಲ್‌, ‘ಮೋದಿಪರ ಘೋಷಣೆ ಕೂಗುವ ವಿಷಯ ಪೊಲೀಸರಿಗೆ ಮೊದಲೇ ಯಾಕೆ ಗೊತ್ತಾಗಿಲ್ಲ. ಇದು ಗುಪ್ತಚರ ಇಲಾಖೆಯ ವೈಫಲ್ಯ ಅಲ್ಲವೇ’ ಎಂದೂ ಪ್ರಶ್ನಿಸಿದರು ಎಂದು ಗೊತ್ತಾಗಿದೆ.

‘ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡಾಗಲೂ ಈ ರೀತಿಯ ಅನುಭವ ಆಗಿಲ್ಲ. ಟೆಕಿಗಳು ಕಾಂಗ್ರೆಸ್‌ ಪರವಾಗಿದ್ದಾರೆ ಎಂದು ನಿಮಗೆ ಯಾರು ಹೇಳಿದರು. ಇಲ್ಲೇ (ಮಾನ್ಯತಾ ಟೆಕ್‌ ಪಾರ್ಕ್‌) ಯಾಕೆ ಕಾರ್ಯಕ್ರಮ ಆಯೋಜಿಸಬೇಕಿತ್ತು. ಯಾವುದಾದರೂ ಹೋಟೆಲ್‌ನಲ್ಲಿ ಅಥವಾ ಸಭಾಂಗಣದಲ್ಲಿ ಮಾಡಬಹುದಿತ್ತಲ್ಲ’ ಎಂದು ಸಿಟ್ಟಾದರು.

ಆರು ಮಂದಿ ಪೊಲೀಸ್‌ ವಶಕ್ಕೆ

ಕಾರ್ಯಕ್ರಮಕ್ಕೂ ಮೊದಲು ಮೋದಿ ಬೆಂಬಲಿಗರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.

‘ಗಲಾಟೆಯಲ್ಲಿ ಕೆಲ ಅಮಾಯಕ ಯುವಕರನ್ನು ಬಂಧಿಸಲಾಗಿದೆ’ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಕಲಾ ಕೃಷ್ಣಸ್ವಾಮಿ, ‘ಯಾರನ್ನೂ ಬಂಧಿಸಿಲ್ಲ’ ಎಂದು ತಿಳಿಸಿದರು.

ವಶಕ್ಕೆ ಪಡೆದವರೆಲ್ಲ ಉದ್ಯೋಗಿಗಳು: ‘ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ವಿವಿಧ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು, ಗಲಾಟೆಗೆ ಕಾರಣರಾಗಿದ್ದರು. ಅವರನ್ನು ವಶಕ್ಕೆ ಪಡೆದು ಬಿಟ್ಟು ಕಳುಹಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 38

  Happy
 • 10

  Amused
 • 0

  Sad
 • 6

  Frustrated
 • 7

  Angry

Comments:

0 comments

Write the first review for this !