ಮಗ ನಿಖಿಲ್ ಗೆಲ್ಲಿಸಲು ಶತಪ್ರಯತ್ನ ಆರಂಭ: ಮಂಡ್ಯದಲ್ಲೇ ಎಚ್‌ಡಿಕೆ ಠಿಕಾಣಿ

ಬುಧವಾರ, ಏಪ್ರಿಲ್ 24, 2019
32 °C
ಚುನಾವಣೆ

ಮಗ ನಿಖಿಲ್ ಗೆಲ್ಲಿಸಲು ಶತಪ್ರಯತ್ನ ಆರಂಭ: ಮಂಡ್ಯದಲ್ಲೇ ಎಚ್‌ಡಿಕೆ ಠಿಕಾಣಿ

Published:
Updated:
Prajavani

ಮಂಡ್ಯ: ಪುತ್ರ ನಿಖಿಲ್‌ ಅವರನ್ನು ಗೆಲ್ಲಿಸಿಕೊಳ್ಳಲು ಪ್ರತಿಷ್ಠೆಯನ್ನು ಪಣಕ್ಕೊಡ್ಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಚುನಾವಣೆ ಮುಗಿಯುವವರೆಗೂ ನಗರದಲ್ಲೇ ಠಿಕಾಣಿ ಹೂಡಲು ಮುಂದಾಗಿದ್ದಾರೆ. ಬುಧವಾರ ಆದಿಚುಂಚನಗಿರಿ ಮಠದಲ್ಲಿ ಪೂಜೆ ಸಲ್ಲಿಸುವ ಮೂಲಕ ಅಬ್ಬರದ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

ನಗರದಲ್ಲಿ ಜೆಡಿಎಸ್‌ ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಕ್ಷೇತ್ರ ಪ್ರವಾಸದಲ್ಲಿರುವ ಪುತ್ರ ನಿಖಿಲ್‌ ಅವರೊಂದಿಗೆ ಪ್ರಚಾರದಲ್ಲಿ ತೊಡಗಲಿದ್ದಾರೆ. ಪತ್ನಿ, ರಾಮನಗರ ಶಾಸಕಿ ಅನಿತಾ ಕೂಡ ಸಾಥ್‌ ನೀಡಲಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲೇ ಉಳಿದು ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್‌ 25ರಂದು ಪಂಚಮಿಯ ಶುಭ ಗಳಿಗೆಯಲ್ಲಿ ನಿಖಿಲ್‌ ನಾಮಪತ್ರ ಸಲ್ಲಿಸಲಿದ್ದಾರೆ.

ನಾಲ್ಕು ವಾರ ಪೂರೈಸಿದ ಅನಿತಾ: ಮದ್ದೂರು ಪಟ್ಟಣದ ಹೊಳೆ ಆಂಜನೇಯ ದೇವಾಲಯದಲ್ಲಿ ಶಾಸಕಿ ಅನಿತಾ ನಡೆಸುತ್ತಿರುವ ‘ಒಂದೂಕಾಲು ರೂಪಾಯಿ ಹರಕೆ’ ಸೇವೆಗೆ ನಾಲ್ಕು ವಾರ ಪೂರೈಸಿದರು. ಮಂಗಳವಾರ ದೇವಾಲಯಕ್ಕೆ ಭೇಟಿ ನೀಡಿ, ಪುತ್ರನ ಹೆಸರಿನಲ್ಲಿ ಪೂಜೆ ಸಲ್ಲಿಸಿದರು. ಐದು ವಾರ ಪೂಜೆ ಸಲ್ಲಿಸುವ ಹರಕೆ ಹೊತ್ತಿದ್ದು ಇನ್ನೊಂದು ವಾರ ಬಾಕಿ ಇದೆ.

‘ಜೋಡೆತ್ತು’ಗಳ ವಿರುದ್ಧ ಗೋ ಬ್ಯಾಕ್‌ ಚಳವಳಿ: ಸುಮಲತಾ ಬೆನ್ನಿಗೆ ನಿಂತಿರುವ ನಟರಾದ ಯಶ್‌ ಹಾಗೂ ದರ್ಶನ್‌ (ಜೋಡೆತ್ತು) ವಿರುದ್ಧ ಜೆಡಿಎಸ್‌ ಮುಖಂಡರು ಗೋಬ್ಯಾಕ್‌ ಚಳವಳಿ ನಡೆಸಲು ನಿರ್ಧರಿಸಿದ್ದಾರೆ.

ಮಂಗಳವಾರ ಮಳವಳ್ಳಿ ತಾಲ್ಲೂಕಿನಲ್ಲಿ ನಿಖಿಲ್‌ ಪ್ರಚಾರ ನಡೆಸುವ ಸಂದರ್ಭದಲ್ಲಿ ಯಶ್‌, ದರ್ಶನ್‌ ವಿರುದ್ಧ ಘೋಷಣೆ ಕೂಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಮಂಡ್ಯ ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಕಾವೇರಿ ಹೋರಾಟ ನಡೆಸುವಾಗ ಎಲ್ಲಿಗೆ ಹೋಗಿದ್ದಿರಿ’ ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

ಸುಮಲತಾ ನಾಮಪತ್ರ: ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ಜಿಲ್ಲಾಧಿಕಾರಿ ಕಚೇರಿಯಿಂದ ಸಿಲ್ವರ್‌ ಜ್ಯೂಬಿಲಿ ಉದ್ಯಾನದವರೆಗೆ ಮೆರವಣಿಗೆ ನಡೆಯಲಿದ್ದು ನಟ–ನಟಿಯರು ಸಾಥ್‌ ಕೊಡಲಿದ್ದಾರೆ. ನಂತರ ಬಹಿರಂಗ ಸಭೆ ನಡೆಯಲಿದೆ.

ಡಿಡಿಯಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಬ್ರೇಕ್‌

ಮಂಡ್ಯ ಕ್ಷೇತ್ರದಲ್ಲಿ ಚಲನಚಿತ್ರ ನಟ, ನಟಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಅಭಿನಯಿಸಿರುವ ಚಲನಚಿತ್ರಗಳ ಪ್ರದರ್ಶನಕ್ಕೆ ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ನಿರ್ಬಂಧ ವಿಧಿಸಲಾಗಿದೆ.

ಖಾಸಗಿ ವಾಹಿನಿಗಳು, ಚಿತ್ರಮಂದಿರಗಳಲ್ಲಿ ಸ್ಪರ್ಧಿಗಳು ಅಭಿನಯಿಸಿರುವ ಚಲನಚಿತ್ರ, ಜಾಹೀರಾತು ಪ್ರದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ದೂರದರ್ಶನದಲ್ಲಿ ಮಾತ್ರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !