ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ನಾಗೇಂದ್ರ ಸೋದರ ಪ್ರಸಾದ್‌ ಬಿಜೆಪಿ ಸೇರ್ಪಡೆ

Last Updated 19 ಮಾರ್ಚ್ 2019, 19:59 IST
ಅಕ್ಷರ ಗಾತ್ರ

ಬಳ್ಳಾರಿ: ಗ್ರಾಮೀಣ ಕ್ಷೇತ್ರದ ಶಾಸಕ, ಕಾಂಗ್ರೆಸ್‌ನ ಬಿ.ನಾಗೇಂದ್ರ ಅವರ ಕಿರಿಯ ಸೋದರ, ಉದ್ಯಮಿ ಬಿ.ವೆಂಕಟೇಶ ಪ್ರಸಾದ್‌ ನಗರದಲ್ಲಿ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾದರು.

ನವೆಂಬರ್‌ನಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಪ್ರಸಾದ್ ಅವರು ಕಾಂಗ್ರೆಸ್ ಟಿಕೆಟ್ ಬಯಸಿದ್ದರೂ ದೊರಕಿರಲಿಲ್ಲ. ಉಗ್ರಪ್ಪನವರಿಗೆ ಟಿಕೆಟ್‌ ಘೋಷಣೆಯಾದ ಬಳಿಕ ಪ್ರಸಾದ್‌ ಅಸಮಾಧಾನಗೊಂಡಿದ್ದರು. ಅವರ ಅಭಿಮಾನಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಈಗ, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅವರು ಬಿಜೆಪಿ ಸೇರಿರುವುದು ಹಾಗೂ ನಾಗೇಂದ್ರ ಕೂಡ ಸಮ್ಮಿಶ್ರ ಸರ್ಕಾರದೊಂದಿಗೆ ಮುನಿಸಿಕೊಂಡಿರುವುದು, ಮುಂದಿನ ಬೆಳವಣಿಗೆಯ ಕಡೆಗೆ ಕುತೂಹಲ ಮೂಡಿಸಿದೆ.

‘ಕಾಂಗ್ರೆಸ್‌ನಲ್ಲಿದ್ದುಕೊಂಡೇ ಬಿಜೆಪಿ ಟಿಕೆಟ್‌ಗಾಗಿ ಕೋರಿಕೆ ಸಲ್ಲಿಸಿದರೆ ಪ್ರಯೋಜನವಾಗುವುದಿಲ್ಲ’ ಎಂಬ ಅಂಶದ ಹಿನ್ನಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಬಳಿಕವೇ ಪ್ರಸಾದ್‌, ಬಿಜೆಪಿ ಸೇರಲು ನಿರ್ಧರಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹರಪನಹಳ್ಳಿಯ ಕಾಂಗ್ರೆಸ್ ಮುಖಂಡರಾಗಿದ್ದ, ಜಾರಕಿಹೊಳಿ ಸೋದರರ ಸಂಬಂಧಿ ದೇವೇಂದ್ರಪ್ಪ ಕೂಡ ಇತ್ತೀಚೆಗೆ ಬಿಜೆಪಿ ಸೇರಿದ್ದರು. ಸದ್ಯಕ್ಕೆ ಇವರಿಬ್ಬರ ಪೈಕಿ ಒಬ್ಬರಿಗೆ ಟಿಕೆಟ್ ದೊರಕಬಹುದು ಎಂಬ ಚರ್ಚೆಯೂ ನಡೆದಿದೆ.

ಪ್ರಸಾದ್‌ ಸೇರ್ಪಡೆ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶ್ರೀರಾಮುಲು ನಗರದಲ್ಲಿದ್ದರೂ ಕಚೇರಿಗೆ ಬಾರದೇ ಇರುವ ಕುರಿತ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ, ‘ಪ್ರಸಾದ್ ಸೇರ್ಪಡೆ ಬಗ್ಗೆ ಶ್ರೀರಾಮುಲು ಸೇರಿದಂತೆ ಯಾರಿಗೂ ಅಸಮಾಧಾನವಿಲ್ಲ’ ಎಂದು ಅವರು ಹೇಳಿದರು.

ನಂತರ ಮಾತನಾಡಿದ ಪ್ರಸಾದ್, ‘ಪ್ರಧಾನಿ ಮೋದಿಯವರ ಆಡಳಿತ ಮೆಚ್ಚಿ ಬೇಷರತ್ತಾಗಿ ಬಿಜೆಪಿ ಸೇರಿರುವೆ. ಪಕ್ಷದ ಹೈಕಮಾಂಡ್ ಅವಕಾಶ ನೀಡಿದರೆ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸುವೆ.ನಾನು ಬಿಜೆಪಿ ಸೇರುವುದಕ್ಕೂ ಸೋದರ ನಾಗೇಂದ್ರ ಕಾಂಗ್ರೆಸ್‌ನಲ್ಲಿರುವುದಕ್ಕೂ ಸಂಬಂಧವಿಲ್ಲ. ಸೋದರರು ಒಟ್ಟಿಗೇ ಇರಬಹುದು. ಬೇರೆಯಾಗಲೂಬಹುದು’ ಎಂದರು.

ನಂತರ ಶ್ರೀರಾಮುಲು ಅವರನ್ನು ಅವರ ಮನೆಯಲ್ಲಿ ಪ್ರಸಾದ್ ಭೇಟಿ ಮಾಡಿದರು. ‘ಪ್ರಸಾದ್‌ ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸುವೆ. ಬಿಜೆಪಿಗೆ ಇನ್ನಷ್ಟು ಮಂದಿ ಸೇರಲಿದ್ದಾರೆ’ ಎಂದು ಶ್ರೀರಾಮುಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT