ರೆಸಾರ್ಟ್‌ನಲ್ಲಿ ಶಾಸಕರೊಂದಿಗೆ ಸಿ.ಎಂ ಚರ್ಚೆ

ಬುಧವಾರ, ಜೂಲೈ 17, 2019
24 °C

ರೆಸಾರ್ಟ್‌ನಲ್ಲಿ ಶಾಸಕರೊಂದಿಗೆ ಸಿ.ಎಂ ಚರ್ಚೆ

Published:
Updated:

ದೇವನಹಳ್ಳಿ: ಇಲ್ಲಿನ ನಂದಿಬೆಟ್ಟದ ರಸ್ತೆ ಕೋಡಗುರ್ಕಿ ಬಳಿ ಇರುವ ಪ್ರೆಸ್ಟೀಜ್‌ ಗಾಲ್ಫ್‌ಶೈರ್‌ ರೆಸಾರ್ಟ್‌ಗೆ ಮಂಗಳವಾರ ಬಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ನ 25 ಶಾಸಕರ ಜತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಮಧ್ಯಾಹ್ನ 2.15ಕ್ಕೆ ರೆಸಾರ್ಟ್ ಸಭಾಂಗಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಾಸಕರಿಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮನವರಿಕೆ ಮಾಡಿದರು.

‘ಬಿಜೆಪಿ ಏನೇ ಮಾಡಿದರೂ ಸರ್ಕಾರ ಬೀಳುವುದಿಲ್ಲ. ನೀವು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಕೆಟ್ಟ ನಿರ್ಧಾರಕ್ಕೆ ಬರಬೇಡಿ ಎಂದು ಸೂಚಿಸಿದ್ದಾರೆ’ ಎಂದು ಜೆಡಿಎಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

‘ಪಕ್ಷ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಮೂವರು ಶಾಸಕರು ಕೈಕೊಟ್ಟಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ನಿಮಗೂ ಅವಕಾಶ ಸಿಗಲಿದೆ. ಬಿಜೆಪಿ ನೀಡುವ ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಆಯ್ಕೆ ಮಾಡಿದ ಮತದಾರರ ಭಾವನೆಗಳಿಗೆ ಧಕ್ಕೆ ತರಬಾರದು’ ಎಂದು ಸಿಎಂ ಹೇಳಿದರು.

‘ನಿಮ್ಮ ಕ್ಷೇತ್ರಗಳ ಸಮಸ್ಯೆ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಕಾಂಗ್ರೆಸ್ ಮುಖಂಡರು ರಾಜೀನಾಮೆ ನೀಡಿರುವ ಶಾಸಕರ ಮನವೊಲಿಸುತ್ತಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾಗುವ ಸಂಭವ ಬರಬಹುದು. ಇನ್ನು ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ’ ಎಂದು ಮುಖ್ಯಮಂತ್ರಿ ಧೈರ್ಯ ತುಂಬಿದರು ಎಂದು ಜೆಡಿಎಸ್ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ರೆಸಾರ್ಟ್‌ನಲ್ಲಿ 150ಕ್ಕೂ ಹೆಚ್ಚು ಅತ್ಯಾಧುನಿಕ ವಿಲ್ಲಾಗಳಿವೆ. ರೆಸಾರ್ಟ್‌ ದ್ವಾರದ ಬಳಿ ಬಿಗಿ ಪೊಲಿಸ್ ಬಂದೋಬಸ್ತ್ ಭದ್ರತೆ ಒದಗಿಸಲಾಗಿದ್ದು ಮುಖ್ಯಮಂತ್ರಿ ಸೂಚಿಸಿದವರಿಗೆ ಮಾತ್ರ ಒಳಪ್ರವೇಶವಿದೆ. ಶುಕ್ರವಾರದವರೆಗೆ ರೆಸಾರ್ಟ್‌ನಲ್ಲಿ ತಂಗುವ ಸಾಧ್ಯತೆ ಇದೆ ಎಂದು ಈ ಮೂಲಗಳು ಹೇಳಿವೆ.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಕಳೆದ ವರ್ಷ ಸರ್ಕಾರ ರಚನೆ ಸಂದರ್ಭದಲ್ಲಿ ಇದೇ ರೆಸಾರ್ಟ್‌ಗೆ ಬಂದಿದ್ದು, ಪ್ರಸ್ತುತ ಅನಿವಾರ್ಯ ಸಂದರ್ಭದಲ್ಲಿ ಜೆಡಿಎಸ್‌ ವರಿಷ್ಠರ ಆದೇಶದ ಮೇರೆಗೆ ಇಲ್ಲಿ ತಂಗಿದ್ದೇವೆ. ಈಗ ರಾಜೀನಾಮೆ ನೀಡಿರುವ ಶಾಸಕರನ್ನು ಹೊರತುಪಡಿಸಿ ಬೇರೆ ಶಾಸಕರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು. ‘ಯಾವುದೇ ಆಮಿಷ ಒಡ್ಡಿದರೂ ಜೆಡಿಎಸ್‌ ಬಿಟ್ಟು ಹೊರಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.

ಪ್ರೆಸ್ಟೀಜ್‌ ಗಾಲ್ಫ್‌ಶೈರ್‌ ದಿನದ ವೆಚ್ಚ ₹3 ಲಕ್ಷ

ಗಾಲ್ಫ್‌ಶೈರ್‌ ಕ್ಲಬ್‌ನಲ್ಲಿನ ಒಂದು ವಿಲ್ಲಾದ ಒಂದು ದಿನದ ಬಾಡಿಗೆ ದರ ₹ 20 ಸಾವಿರದಿಂದ ₹25 ಸಾವಿರದಷ್ಟಿದ್ದು, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪ್ರತಿದಿನಕ್ಕೆ ಸರಿಸುಮಾರು ₹3 ಲಕ್ಷ ಖರ್ಚಾಗುತ್ತಿದೆ.

ಗಾಲ್ಫ್‌ ಕ್ಲಬ್‌, ಈಜುಕೊಳ, ಜಿಮ್‌ ಸಹಿತ ಬೇಕಾದ ಎಲ್ಲಾ ಐಷಾರಾಮಿ ವ್ಯವಸ್ಥೆಯೂ ಇಲ್ಲಿದ್ದು, ಅತ್ಯಾಧುನಿಕ 150ರಷ್ಟು ವಿಲ್ಲಾಗಳು ಇಲ್ಲಿವೆ. 25 ಜೆಡಿಎಸ್‌ ಶಾಸಕರು ಇಲ್ಲಿ ತಂಗಿದ್ದು, ಒಟ್ಟು ಆರು ವಿಲ್ಲಾಗಳನ್ನು ಬುಕ್‌ ಮಾಡಲಾಗಿದೆ. ಒಂದೊಂದು ವಿಲ್ಲಾದಲ್ಲಿ ಐದು ಶಾಸಕರು ತಂಗುವ ವ್ಯವಸ್ಥೆ ಮಾಡಲಾಗಿದೆ ಎಂದು ರೆಸಾರ್ಟ್‌ನ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !