ಸೋಮವಾರ, ಆಗಸ್ಟ್ 19, 2019
28 °C

ಲಿಂಗಾಯತರೂ ಹಿಂದೂಗಳು | ಪಂಥಾಹ್ವಾನ ನೀಡಲು ಶ್ರೀಗಳು ಯಾರು?: ಶಾಸಕ ಎಂ.ಬಿ.ಪಾಟೀಲ

Published:
Updated:

ವಿಜಯಪುರ: ‘ಲಿಂಗಾಯತರೂ ಹಿಂದೂಗಳು ಎಂಬ ವಿಷಯದ ಚರ್ಚೆಗೆ ಪಂಥಾಹ್ವಾನ ನೀಡಲು ಪೇಜಾವರಶ್ರೀ ಯಾರು’ ಎಂದು ಶಾಸಕ ಎಂ.ಬಿ.ಪಾಟೀಲ ಖಾರವಾಗಿ ಪ್ರಶ್ನಿಸಿದರು.

ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪೇಜಾವರ ಶ್ರೀಗಳಿಗೆ ಕಡ್ಡಿ ಆಡಿಸುವ ಚಟವಿದೆ. ಮೊದಲು ತಮ್ಮ ಮಠದಲ್ಲಿನ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ. ಮಠವನ್ನು ಸ್ವಚ್ಛ ಮಾಡಿಕೊಳ್ಳಲಿ. ಆ ಬಳಿಕ ಲಿಂಗಾಯತರ ವಿಷಯದ ಬಗ್ಗೆ ಚರ್ಚೆಗೆ ಬರಲಿ’ ಎಂದು ಗರಂ ಆದರು.

‘ಲಿಂಗಾಯತರೂ ಹಿಂದೂಗಳು ಎಂಬುದು ಬಹಿರಂಗವಾಗಿ ಚರ್ಚಿಸಿ ತೀರ್ಮಾನಿಸುವ ವಿಚಾರವಲ್ಲ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಚರ್ಚಿಸುವುದೇ ಆದಲ್ಲಿ ಸಾಣೇಹಳ್ಳಿ ಮಠಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಬೇಕಿದ್ದರೇ ಶ್ರೀಗಳೇ ಚರ್ಚೆಗೆ ಬರಲಿ. ಅವರು ಕರೆದಲ್ಲಿ ಹೋಗಲು ಅವರೇನು ಮುಖ್ಯಮಂತ್ರಿನಾ, ಪ್ರಧಾನ ಮಂತ್ರಿನಾ ಅಥವಾ ಹೈಕಮಾಂಡಾ’ ಎಂದು ಅವರು ಪ್ರಶ್ನಿಸಿದರು.

‘ಪೇಜಾವರಶ್ರೀಗಳಿಗೆ ನಿಜವಾಗಿಯೂ ಇತರ ಧರ್ಮಗಳ ಬಗ್ಗೆ ಕಳಕಳಿ ಇದ್ದರೆ ತಮ್ಮ ಮಠಕ್ಕೆ ದಲಿತರು, ಕಡೇ ಪಕ್ಷ ಲಿಂಗಾಯತರನ್ನಾದರೂ ನೇಮಕ ಮಾಡಲಿ’ ಎಂದು ಅವರು ಸವಾಲು ಹಾಕಿದರು.

‘ಆಕ್ರೋಶ ಸರಿ ಅಲ್ಲ’

ಮೈಸೂರು: ‘ನಾನು ಲಿಂಗಾಯತ ಮತವನ್ನು ಸರಿಪಡಿಸಲು ಹೋಗುತ್ತಿಲ್ಲ. ಆದರೂ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಏಕೆ? ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು, ಶಾಸಕ ಎಂ.ಬಿ.ಪಾಟೀಲರಿಗೆ ಪ್ರತಿಕ್ರಿಯಿಸಿದ್ದಾರೆ.

‘ಸ್ನೇಹ, ಸಹೋದರತೆಯಿಂದ ನಮ್ಮಲ್ಲೇ ಇರಿ ಎಂದಿದ್ದೇನೆ. ನಾನು ಅವರಲ್ಲಿ ಹುಳುಕು ಹುಡುಕಿಲ್ಲ. ನೀವೂ ಹಿಂದೂಗಳಾಗಿದ್ದು, ನಮ್ಮನ್ನು ಬಿಟ್ಟುಹೋಗಬೇಡಿ ಎಂದಿದ್ದೇನೆ. ಬಸವಣ್ಣನವರ ಬಗ್ಗೆ ಗೌರವವಿದೆ. ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ನಾನು ಸೌಜನ್ಯದಿಂದ ಹೇಳಿದರೂ ಅವರು ಅಷ್ಟೊಂದು ಆಕ್ರೋಶಭರಿತರಾಗಲು ಕಾರಣವೇನು’ ಎಂದು ಅವರು ಪ್ರಶ್ನಿಸಿದ್ದಾರೆ.

ನೀಲಾ ಅವರಿಂದ ಆತ್ಮವಂಚನೆ

ಉಡುಪಿ: ‘ಮಂಡ್ಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇರುವ ಕಾರಣ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲ ಎಂದು ಚಿಂತಕಿ ಕೆ.ನೀಲಾ ತಿಳಿಸಿದ್ದರು. ಬಳಿಕ, ಮೋಹನ್ ಆಳ್ವ ಅವರಂಥವರನ್ನು ಆಹ್ವಾನಿಸಿದ್ದಕ್ಕೆ ಗೈರಾಗುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ. ಅಹಂಕಾರಕ್ಕೆ ಸ್ವಾಗತವಿಲ್ಲ. ನೀಳಾ ಅವರದ್ದು ಆತ್ಮವಂಚನೆಯ ಕೆಲಸ’ ಎಂದು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

‘ಪೇಜಾವರ ಶ್ರೀಗಳು ಸಾಣೆಹಳ್ಳಿಗೆ ಬರಲಿ’

‘ಲಿಂಗಾಯತರೂ ಹಿಂದೂಗಳು’ ಎಂಬ ವಿಚಾರ ಚರ್ಚೆಯ ಮೂಲಕ ಬಗೆಹರಿಯುವಂತಹದ್ದಲ್ಲ. ಈ ವಿಚಾರವಾಗಿ ಪೇಜಾವರ ಶ್ರೀಗಳು ಚರ್ಚಿಸಲೇಬೇಕು ಎಂದಾದರೆ ನಾವೂ ಸಿದ್ಧ. ಶ್ರೀಗಳಿಗೆ ಒಂದು ತಿಂಗಳು ಚಾತುರ್ಮಾಸ್ಯ ಇರುವಂತೆ, ನಾವು ಕೂಡ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದೆ. ಒಂದು ತಿಂಗಳ ಬಳಿಕ ಶ್ರೀಗಳು ಸಾಣೆಹಳ್ಳಿ ಮಠಕ್ಕೆ ಬಂದರೆ ಸಮಾಲೋಚನೆಗೆ ಸಿದ್ಧ’ ಎಂದು ಸಾಣೆಹಳ್ಳಿ ಶ್ರೀಗಳು ಹೇಳಿದರು.

Post Comments (+)