ಶನಿವಾರ, ಆಗಸ್ಟ್ 17, 2019
27 °C

ನಾವು ಅತೃಪ್ತರಲ್ಲ, ದಂಗೆ ಎದ್ದವರು: ವಿಶ್ವನಾಥ್‌

Published:
Updated:

ನವದೆಹಲಿ: ‘ರಾಜ್ಯದಲ್ಲಿ 14 ತಿಂಗಳುಗಳಿಂದ ಸರ್ಕಾರವೇ ಇರಲಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಇಬ್ಬರು ಸಚಿವರ (ಎಚ್‌.ಡಿ.ರೇವಣ್ಣ, ಡಿ.ಕೆ. ಶಿವಕುಮಾರ್‌) ದುರಾಡಳಿತ ಇತ್ತು. ನಾವು ಬೇಸತ್ತು ರಾಜೀನಾಮೆ ಕೊಟ್ಟಿದ್ದಕ್ಕೆ ಸರ್ಕಾರ ಬಿತ್ತು’ ಎಂದು ಮಾಜಿ ಶಾಸಕ ಎಚ್‌.ವಿಶ್ವನಾಥ್‌ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಾಲ್ವರನ್ನು ಬಿಟ್ಟು ಬೇರೆಯವರ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಆ ಬಗ್ಗೆ ಪ್ರತಿಯೊಬ್ಬರಲ್ಲೂ ಅಸಮಾಧಾನ ಇತ್ತು. ನಾವು ಹೊರಬಂದೆವು’ ಎಂದರು.

‘ನಾವು ಅತೃಪ್ತರಲ್ಲ. ಬದಲಿಗೆ, ದಂಗೆ ಎದ್ದವರು. ದುರ್ವರ್ತನೆ ಕಂಡು ಅಸಮಾಧಾನದಿಂದ ಹೊರಬಂದವರು. ಎರಡೂ ಪಕ್ಷಗಳ ಮುಖಂಡರು ನಮ್ಮ ದೂರುಗಳ ಕುರಿತು ಚಿಂತನೆಯನ್ನೇ ನಡೆಸಲಿಲ್ಲ. ಸಮನ್ವಯ ಸಮಿತಿ ಹೆಸರಿಗೆ ಮಾತ್ರ ಇತ್ತು’ ಎಂದು ಅವರು ವಿವರಿಸಿದರು.

‘ಮಾತೆತ್ತಿದರೆ ಸಂವಿಧಾನ, ಸಮಾನತೆ, ಪ್ರಜಾಪ್ರಭುತ್ವ ಎನ್ನುವ ಸಿದ್ದರಾಮಯ್ಯ, ಸಮನ್ವಯ ಸಮಿತಿಗೆ ತಾವೊಬ್ಬರೇ ಮುಖ್ಯಸ್ಥರಾದರು. ಜೆಡಿಎಸ್‌ ಅಧ್ಯಕ್ಷನಾಗಿದ್ದ ನನ್ನನ್ನು ನೇಮಿಸುವಂತೆ ಕೇಳಲೂ ಇಲ್ಲ. ವಾಸ್ತವದಲ್ಲಿ ಸರ್ಕಾರದಲ್ಲಿ ಉನ್ನತ ಸ್ಥಾದಲ್ಲಿದ್ದ ಜಿ.ಪರಮೇಶ್ವರ್‌ ಕಾಂಗ್ರೆಸ್‌ ಶಾಸಕಾಂಗ ನಾಯಕರಾಗಬೇಕಿತ್ತು. ಆ ಜಾಗದಲ್ಲೂ ಕೂತ ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್‌ನ 7 ಶಾಸಕರು ಕಾಂಗ್ರೆಸ್‌ನತ್ತ ವಾಲಿದ್ದಾಗ ಪ್ರಜಾಪ್ರಭುತ್ವ ಎಂಬ ಪದವನ್ನು ಮರೆತಿದ್ದರೇ’ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಬಿಡಲು ನಿರ್ಧರಿಸಿದ್ದ ದೇವೇಗೌಡರು ಮೈಸೂರಲ್ಲಿ ಸ್ಪರ್ಧಿಸಿದ್ದರೆ ಗೆಲ್ಲುತ್ತಿದ್ದರು. ಮಂಡ್ಯದಲ್ಲಿ ಸುಮಲತಾಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರೆ ಮಿತ್ರ ಪಕ್ಷಗಳು ಕೆಲವೆಡೆ ಗೆಲ್ಲುತ್ತಿದ್ದವು. ಆದರೆ, ಜೆಡಿಎಸ್‌ ಮುಗಿಸಲು ಪಣತೊಟ್ಟಿದ್ದ ಸಿದ್ದರಾಮಯ್ಯ ಫಲಿತಾಂಶ ಬದಲಿಸಿದ ಕೀರ್ತಿಗೆ ಪಾತ್ರರಾದರು’ ಎಂದು ವಿಶ್ವನಾಥ ಮೂದಲಿಸಿದರು.

‘ಚುನಾವಣಾ ರಾಜಕೀಯದಿಂದ ದೂರ’

‘ನಾನು ಚುನಾವಣಾ ರಾಜಕಾರಣದಿಂದ ದೂರ ಉಳಿಯಲಿದ್ದೇನೆ. ರಾಜ್ಯಪಾಲನಾಗಲಿದ್ದೇನೆ ಎಂಬುದೂ ಊಹೆ’ ಎಂದು ಎಚ್‌.ವಿಶ್ವನಾಥ್‌ ಹೇಳಿದರು. ‘ಅತೃಪ್ತರೆಲ್ಲರಿಗೂ ಸಚಿವ ಸ್ಥಾನ ನೀಡಲಾಗದು’ ಎಂದು ಬಿಜೆಪಿಯ ರವಿಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಪಕ್ಷ ಸೇರಬೇಕು ಎಂಬುದನ್ನೂ ನಿರ್ಧರಿಸದ ನಾವೇ ಒಂದು ಪಕ್ಷ ಸ್ಥಾಪಿಸಿದರಾಯಿತು’ ಎಂದು ಚಟಾಕಿ ಹಾರಿಸಿದರು.

Post Comments (+)