ಬುಧವಾರ, ಆಗಸ್ಟ್ 4, 2021
22 °C
ದಕ್ಷಿಣ ಕನ್ನಡ: ಕೋವಿಡ್‌ ಸೋಂಕಿನಿಂದ ಮೂವರ ಸಾವು

ಜಿಲ್ಲೆಯಲ್ಲಿ 75 ಮಂದಿಯಲ್ಲಿ ಸೋಂಕು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಶನಿವಾರ 75 ಜನರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1,095ಕ್ಕೇರಿದೆ.

ಅಬುಧಾಬಿ, ಮಸ್ಕತ್‌ ಮತ್ತು ದುಬೈನಿಂದ ಹಿಂದಿರುಗಿರುವ 11 ಜನರು, ವಿಷಮ ಶೀತ ಜ್ವರದಿಂದ (ಐಎಲ್‌ಐ) ಆಸ್ಪತ್ರೆಗಳಿಗೆ ದಾಖಲಾಗಿದ್ದ 29 ಮಂದಿ, ಉಸಿರಾಟದ ತೀವ್ರ ತೊಂದರೆಯಿಂದ (ಎಸ್‌ಎಆರ್‌ಐ) ಆಸ್ಪತ್ರೆ ಸೇರಿದ್ದ ಆರು ಜನರು, ಕೋವಿಡ್‌ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 24 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಒಬ್ಬರಲ್ಲಿ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಒಬ್ಬರು, ಒಬ್ಬ ಬಾಣಂತಿ, ರ‍್ಯಾಂಡಮ್‌ ಪರೀಕ್ಷೆಯಲ್ಲಿ ಮಾದರಿ ನೀಡಿದ್ದ ಒಬ್ಬರು ಹಾಗೂ ಸೋಂಕಿತರ ಸಂಪರ್ಕವೇ ಇಲ್ಲದ ಒಬ್ಬರಲ್ಲಿ ಕೋವಿಡ್‌–19 ಪತ್ತೆಯಾಗಿದೆ. ಇವರ ಸೋಂಕಿನ ಮೂಲ ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಶನಿವಾರ ಸೋಂಕು ದೃಢಪಟ್ಟವರಲ್ಲಿ 10 ದಿನದ ನವಜಾತ ಶಿಶುವಿನಿಂದ 86 ವರ್ಷದ ವಯೋವೃದ್ಧರವರೆಗೂ ಸೇರಿದ್ದಾರೆ. ಈ ಪಟ್ಟಿಯಲ್ಲಿ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 22 ಮಂದಿ ಇದ್ದಾರೆ. 40ರಿಂದ 50ರ ವಯೋಮಾನದವರ ಸಂಖ್ಯೆಯೂ ಹೆಚ್ಚಿದೆ.

ಮಂಗಳೂರು ನಗರದ ಹಲವು ಮಂದಿಯಲ್ಲಿ ಸೋಂಕು ಇರುವುದು ಶನಿವಾರ ಬಂದಿರುವ ವರದಿಗಳಿಂದ ದೃಢಪಟ್ಟಿದೆ. ಉಳ್ಳಾಲ ನಗರಸಭೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಐವರಿಗೆ ಕೋವಿಡ್‌ ಸೋಂಕು ತಗುಲಿರುವುದು ಖಚಿತವಾಗಿದೆ.

ಪುತ್ತೂರು ನಗರಸಭೆ ವ್ಯಾಪ್ತಿಯ ಕೆಮ್ಮಿಂಜೆಯ ಒಂದೂವರೆ ವರ್ಷದ ಮಗು ಹಾಗೂ ದರ್ಬೆಯ ಯುವಕನಿಗೆ ಸೋಂಕು ಇರುವುದು ಪತ್ತೆಯಾಗಿದೆ. ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆ.ಎಸ್.ರಾವ್‌ ನಗರದಲ್ಲಿನ ಕಿರಾಣಿ ಅಂಗಡಿ ಮಾಲೀಕರ ಪತ್ನಿಗೆ ಕೋವಿಡ್‌ –19 ಸೋಂಕು ಇರುವುದು ದೃಢಪಟ್ಟಿದೆ. ಈ ಪ್ರದೇಶವನ್ನು ಶನಿವಾರ ಸೀಲ್‌ಡೌನ್ ಮಾಡಲಾಗಿದೆ.

13 ಮಂದಿ ಬಿಡುಗಡೆ: ಕೋವಿಡ್‌ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ 13 ಮಂದಿ ಗುಣಮುಖರಾಗಿದ್ದು, ಶನಿವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಗುಣಮುಖರಾದವರಲ್ಲಿ 25 ವರ್ಷದ ಯುವಕನಿಂದ 70 ವರ್ಷದ ವೃದ್ಧೆಯವರೆಗೂ ಇದ್ದಾರೆ.

ಜಿಲ್ಲೆಯಲ್ಲಿ 516 ಮಂದಿ ಕೋವಿಡ್‌ ಸೋಂಕಿತರು ಗುಣಮುಖರಾಗಿದ್ದಾರೆ. 557 ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಧುಮೇಹ, ಹೃದ್ರೋಗ, ಶ್ವಾಸಕೋಶದ ಸಮಸ್ಯೆ, ಯಕೃತ್ತಿನ ಸಮಸ್ಯೆ, ನ್ಯುಮೋನಿಯಾ ರೋಗಗಳಿಂದ ಬಳಲುತ್ತಿರುವ ಐವರು ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಈ ಪೈಕಿ ಮೂವರಿಗೆ ವೆಂಟಿಲೇಟರ್‌ ಅಳವಡಿಸಿದ್ದು, ಇಬ್ಬರಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಆತಂಕಪಡದಂತೆ ಮನವಿ:

‘ಜಿಲ್ಲೆಯಲ್ಲಿ ಈವರೆಗೆ 1,095 ಕೋವಿಡ್‌–19 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದು ಜಿಲ್ಲೆಯ ಜನಸಂಖ್ಯೆಗೆ ಹೋಲಿಸಿದರೆ ಶೇ 0.054ರಷ್ಟಾಗುತ್ತದೆ. ಸೋಂಕಿತರಲ್ಲಿ ಶೇ 50ರಷ್ಟು ಜನರು ಹೊರ ರಾಜ್ಯ ಮತ್ತು ವಿದೇಶಗಳಿಂದ ಬಂದವರು. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 210 ಹಾಗೂ ದ್ವಿತೀಯ ಸಂಪರ್ಕದಿಂದ ಐವರಿಗೆ ಮಾತ್ರ ಸೋಂಕು ತಗುಲಿರುವುದು ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್‌ನಿಂದ ಮೂವರ ಸಾವು

ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಉಸಿರಾಟದ ತೀವ್ರ ತೊಂದರೆ ಎದುರಿಸುತ್ತಿದ್ದ ಒಬ್ಬರು ಗುರುವಾರ ಮೃತಪಟ್ಟಿದ್ದು, ಅವರಿಗೆ ಕೋವಿಡ್‌ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಶುಕ್ರವಾರ ಇದೇ ರೀತಿ ಮೃತರಾದ ಇಬ್ಬರಲ್ಲೂ ಕೋವಿಡ್‌ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಮೃತ‍ಪಟ್ಟವರ ಸಂಖ್ಯೆ 22ಕ್ಕೇರಿದೆ.

ಮಂಗಳೂರಿನ ಕೋಡಿಕ್ಕಲ್‌ನ 67 ವರ್ಷದ ಪುರುಷನನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಮೃತಪಟ್ಟಿದ್ದು, ನಂತರ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಕೋವಿಡ್‌ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸುಳ್ಯ ತಾಲ್ಲೂಕಿನ ನಿವೃತ್ತ ಶಿಕ್ಷಕಿಯನ್ನು (60) ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮೃತಪಟ್ಟಿದ್ದು, ಅವರಲ್ಲೂ ಸೋಂಕು ಪತ್ತೆಯಾಗಿದೆ. ಮಂಗಳೂರಿನ ಕೂಳೂರಿನ 65 ವರ್ಷ ವಯಸ್ಸಿನ ಮಹಿಳೆಯನ್ನು ಶುಕ್ರವಾರ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಮೃತಪಟ್ಟಿದ್ದಾರೆ. ಅವರಲ್ಲೂ ಸೋಂಕು ದೃಢಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು