ಸೋಮವಾರ, ಮೇ 23, 2022
30 °C
ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿಗೆ ಒತ್ತಾಯ: ಕಾಲಾವಕಾಶ ಕೋರಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣವನ್ನು ಶೇ 3ರಿಂದ 7.5ಕ್ಕೆ ಹೆಚ್ಚಿಸುವ ಸಂಬಂಧ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಎರಡು ತಿಂಗಳ ಕಾಲಾವಕಾಶ ಕೇಳಿದೆ.

ಒಂದು ವೇಳೆ ತಮ್ಮ ಬೇಡಿಕೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಈ ಸಮುದಾಯದ ಶಾಸಕರು ಪಕ್ಷಾತೀತವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸ್ಥಳಕ್ಕೆ ಬಂದು ಅಹವಾಲು ಆಲಿಸಿದರು.

‘ಜನಸಂಖ್ಯೆ ಆಧಾರವಾಗಿ ಮೀಸಲಾತಿ ನೀಡಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್‌ ಅವರೇ ಸಂವಿಧಾನದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರು ಶೇ 24.1ರಷ್ಟು ಇದ್ದಾರೆ. ಈ ಸಮುದಾಯ ಶೇ 7.5ರಷ್ಟು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ’ ಎಂದು ಪರಮೇಶ್ವರ ಹೇಳಿದರು. 

‘ಸ್ವಾಮೀಜಿ ಪಾದಯಾತ್ರೆ ಹೊರಟ ದಿನದಿಂದಲೇ ಸರ್ಕಾರ ಈ ಬಗ್ಗೆ ಎಚ್ಚರ ವಹಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಮುದಾಯದ ಶಾಸಕರನ್ನು ಕರೆಸಿ ಮಾತನಾಡಿದ್ದಾರೆ. ಅವರ ಪ್ರತಿನಿಧಿಯಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ ಈ ಕೆಲಸ ಮಾಡಬೇಕು. ಹೀಗಾಗಿ, ಮೂರು ತಿಂಗಳು ಕಾಲಾವಕಾಶಬೇಕು’ ಎಂದು ಅವರು ಕೋರಿದರು. ಇದನ್ನು ಒಪ್ಪದ ಸ್ವಾಮೀಜಿ, ‘ಎರಡು ತಿಂಗಳಲ್ಲಿ ಬೇಡಿಕೆ ಈಡೇರಿಸಬೇಕು. ಮೀಸಲಾತಿ ಪ್ರಮಾಣ ಹೆಚ್ಚಳವಾಗದಿದ್ದರೆ ಸಮುದಾಯದ ಎಲ್ಲ ಶಾಸಕರೂ ರಾಜೀನಾಮೆ ನೀಡುತ್ತಾರೆ’ ಎಂದು ಸ್ವಾಮೀಜಿ ಹೇಳಿದರು. ಆಗ ವೇದಿಕೆಯಲ್ಲಿದ್ದ ಸಮುದಾಯದ ಶಾಸಕರು ಕೈ ಮೇಲೆತ್ತುವ ಮೂಲಕ ಬೆಂಬಲ ಸೂಚಿಸಿದರು.   

‘ಕುಮಾರಸ್ವಾಮಿ ಗೊಟಕ್‌ ಅಂತಾರೆ’

‘ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಒಟ್ಟು 17 ಶಾಸಕರು ಇದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೋ, ಇಲ್ಲವೋ ಎನ್ನುವುದು ಇಂದು ನಿರ್ಧಾರವಾಗಲಿದೆ. ಸರ್ಕಾರ ಉಳಿಸಿಕೊಳ್ಳಲು ನೀವು ಕಾಲು ಹಿಡಿಯುತ್ತೀರಿ ಎನ್ನುವುದು ನನಗೆ ಗೊತ್ತಿದೆ. ನಾವು ಹೇಳಿದರೆ ಕುಮಾರಸ್ವಾಮಿಯೂ ಕೇಳಬೇಕು, ಅವರ ಅಪ್ಪನೂ ಕೇಳಬೇಕು. ನಮ್ಮ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ಕೊಟ್ಟರೆ ಕುಮಾರಸ್ವಾಮಿ ಗೊಟಕ್‌ ಎಂದು ಬಿಡ್ತಾರೆ’ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಮುಖ್ಯಮಂತ್ರಿ ಭರವಸೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರಿಶಿಷ್ಟ ಪಂಗಡದ ಸಚಿವರು, ಶಾಸಕರ ಜತೆ ಚರ್ಚಿಸಿದರು. ‘ಮೀಸಲಾತಿ ಹೆಚ್ಚಳ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಚರ್ಚಿಸಿ, ಮಾಹಿತಿ ನೀಡಲಿದ್ದಾರೆ. ನಂತರ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು