ಶುಕ್ರವಾರ, ಫೆಬ್ರವರಿ 26, 2021
31 °C
*8ಕ್ಕೂ ಹೆಚ್ಚು ಕಚೇರಿಗಳ ಸ್ಥಳಾಂತರಕ್ಕೆ ತಾತ್ವಿಕ ಒಪ್ಪಿಗೆ* ಸಚಿವ ಸಂಪುಟ ಉಪ ಸಮಿತಿ ರಚನೆ

ಉತ್ತರಮುಖಿ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭಿವೃದ್ಧಿ ವಿಷಯದಲ್ಲಿ ಅವಕೃಪೆಗೆ ಒಳಗಾಗಿದ್ದೇವೆ ಎಂಬ ಉತ್ತರ ಕರ್ನಾಟಕದವರ ಜನರ ಕೂಗಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ, 8ಕ್ಕೂ ಹೆಚ್ಚು ಪ್ರಮುಖ ಕಚೇರಿಗಳನ್ನು ಅತ್ತ ಸ್ಥಳಾಂತರಿಸುವ ತೀರ್ಮಾನವನ್ನು ಕೈಗೊಂಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ.

ಯಾವ ಕಚೇರಿಗಳನ್ನು ಎಲ್ಲಿಗೆ ಸ್ಥಳಾಂತರಿಸಬೇಕು ಎಂಬ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಲಿದೆ. ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಉತ್ತರ ಕರ್ನಾಟಕದ ಜನರ ಅನುಕೂಲಕ್ಕಾಗಿ ಬೆಳಗಾವಿಯ ಸುವರ್ಣಸೌಧಕ್ಕೆ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂಬುದು ಅಲ್ಲಿನ ಜನರು ಹಲವು ವರ್ಷಗಳಿಂದ ಹಕ್ಕೊತ್ತಾಯ ಮಂಡಿಸಿದ್ದರು. ಸುವರ್ಣ ಸೌಧ, ಕಲಬುರ್ಗಿ ಹಾಗೂ ವಿಜಯ‍ಪುರಕ್ಕೆ ಹಲವು ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಹೋರಾಟಗಾರರಿಗೆ ಇತ್ತೀಚೆಗೆ ಅಭಯ ನೀಡಿದ್ದರು. ಉತ್ತರದ ಉದ್ಧಾರಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದರು.

ಈ ಸಂಬಂಧ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ನೇತೃತ್ವದ ಸಮಿತಿಗೆ ಸೂಚಿಸಿದ್ದರು. ಈ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಯಿತು. ‘ಉಪ ಸಮಿತಿಯ ಅಧ್ಯಕ್ಷರು ಯಾರು, ಸದಸ್ಯರು ಯಾರು ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. ಬೆಳಗಾವಿ, ಹೊಸಪೇಟೆ, ವಿಜಯಪುರ, ಕಲಬುರ್ಗಿ ಹಾಗೂ ಬಾಗಲಕೋಟೆಗೆ ಈ ಕಚೇರಿಗಳನ್ನು ಸ್ಥಳಾಂತರಿಸಲು ಚರ್ಚಿಸಲಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.

**

ಸಮಿತಿಯ ಶಿಫಾರಸು

* ಕೃಷ್ಣಾ ಜಲಭಾಗ್ಯ ನಿಗಮದ ಕೇಂದ್ರ ಕಚೇರಿ ಹಾಗೂ ನೋಂದಾಯಿತ ಕಚೇರಿಗಳನ್ನು ಆಲಮಟ್ಟಿಗೆ ಸ್ಥಳಾಂತರ.

* ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಹಾಗೂ ನೋಂದಾಯಿತ ಕಚೇರಿಗಳು.

* ಸಕ್ಕರೆ ಅಭಿವೃದ್ಧಿ ನಿರ್ದೇಶನಾಲಯ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ.

* ಕರ್ನಾಟಕ ವಿದ್ಯುತ್‌ ಮ‌ಗ್ಗದ ನಿಗಮದ ಕಚೇರಿ.

* ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ. ಅದನ್ನು ವಿಭಜಿಸಿ ಉತ್ತರ ಕರ್ನಾಟಕ ನೀರು ಸರಬರಾಜು, ಒಳಚರಂಡಿ ಮಂಡಳಿ ಸ್ಥಾಪನೆ.

* ಕರ್ನಾಟಕ ಮಾನವ ಹಕ್ಕು ಆಯೋಗದ ಒಬ್ಬರು ಸದಸ್ಯರ ಕಚೇರಿ ಸ್ಥಳಾಂತರ.

* ಇಬ್ಬರು ಮಾಹಿತಿ ಹಕ್ಕು ಆಯುಕ್ತರ ಕಚೇರಿ.

* ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆಯ ನಿರ್ದೇಶನಾಲಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು