ದಲಿತತ್ವ ಕನ್ನಡತ್ವದೊಳಗಿದೆ: ಸಿದ್ದಯ್ಯ

7

ದಲಿತತ್ವ ಕನ್ನಡತ್ವದೊಳಗಿದೆ: ಸಿದ್ದಯ್ಯ

Published:
Updated:
Prajavani

ಧಾರವಾಡ: ‘ಸಿದ್ಧಪಡಿಸಿದ ನಿರೂಪಣೆಗಳನ್ನು ದಲಿತತ್ವದ ಮೇಲೆ ಹೇರಲಾಗಿದೆ. ದಲಿತತ್ವ ಕನ್ನಡದ ಬದುಕಿನಲ್ಲಿ, ಭಾಷೆಯ ಅಸ್ತಿತ್ವದಲ್ಲಿ, ಜಾತ್ಯತೀತ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ದಲಿತತ್ವ ಅನ್ನೋದು ಕನ್ನಡತ್ವದೊಳಗೆ ಅಡಗಿದೆ’ ಎಂದು ಕೆ.ಬಿ. ಸಿದ್ದಯ್ಯ ಹೇಳಿದರು.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ದಲಿತ ಅಸ್ಮಿತೆ’ ಗೋಷ್ಠಿಯಲ್ಲಿ ‘ದಲಿತತ್ವ;ಸ್ಥಿತ್ಯಂತರಗಳು’ವಿಷಯವಾಗಿ ಮಾತನಾಡಿದ ಅವರು, ‘ಭಾಷೆಯ ವಿಚಾರದಲ್ಲಿ ದಲಿತರು ನಿರ್ಣಾಯಕವಾದ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದಲಿತತ್ವವನ್ನು  ಕನ್ನಡತ್ವದೊಳಗೆ ಉಳಿಸಿಕೊಳ್ಳಲಾಗದು. ಆಗ ದಲಿತರ ಅಸ್ತಿತ್ವಕ್ಕೆ ಬಹುದೊಡ್ಡ ಅಪಾಯ ಎದುರಾಗಲಿದೆ’ ಎಂದರು. 

'ದಲಿತ ಚಳವಳಿಯ ಬಿಕ್ಕಟ್ಟುಗಳು’ ಕುರಿತು ಮಾತನಾಡಿದ ಗುರುಪ್ರಸಾದ್ ಕೆರೆಗೋಡು, ‘ದಲಿತ ಚಳವಳಿಯ ಕೆಲವು ಬಿಕ್ಕಟ್ಟುಗಳನ್ನು ಇಡೀ ದಲಿತ ಸಮುದಾಯದ ಬಹುದೊಡ್ಡ ಸಮಸ್ಯೆ ಎಂಬುದಾಗಿ ಬಿಂಬಿಸುವ, ವೈಭವೀಕರಿಸುವ ವ್ಯವಸ್ಥೆ; ಅದೇ ಇತರ ಚಳವಳಿಗಳಲ್ಲಿರುವ ಗಂಭೀರವಾದ ಬಿಕ್ಕಟ್ಟುಗಳ ಕುರಿತು ಪ್ರಾಮಾಣಿಕವಾದ ವಿಮರ್ಶೆಗೆ ಮುಂದಾಗುವುದಿಲ್ಲ ಏಕೆ‘ ಎಂದು ಪ್ರಶ್ನಿಸಿದರು.

‘ದಲಿತೇತರ ಜಾತಿ, ಸಮುದಾಯಗಳಲ್ಲಿಯೂ ಸಹ ಒಳಪಂಗಡಗಳ ನಡುವಿನ ತಾರತಮ್ಯ, ಜಗಳ, ದೌರ್ಜನ್ಯ ದೊಡ್ಡ ಪ್ರಮಾಣದಲ್ಲಿದ್ದರೂ ಅವುಗಳ ಬಗ್ಗೆ ಬಹಿರಂಗವಾಗಿ ಚರ್ಚೆಯಾಗುವುದಿಲ್ಲವೇಕೆ? ದಲಿತರ ಎಡ–ಬಲ ಸಮಸ್ಯೆಯನ್ನು ಬಹುದೊಡ್ಡ ಸಾಮುದಾಯಿಕ ಸಮಸ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಅವಮಾನವಾದಾಗ ಕೇವಲ ದಲಿತರು, ದಲಿತ ಸಂಘಟನೆಗಳು ಮಾತ್ರ ಏಕೆ ವಿರೋಧಿಸಬೇಕು?ಇತರ ಜಾತಿ, ಧರ್ಮ, ಸಮುದಾಯಗಳು ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಂದ ಏನನ್ನೂ ಪಡೆದುಕೊಂಡಿಲ್ಲವೇ?’ ಎಂದು ಕೇಳಿದರು.

‘ದಲಿತ ವಾಙ್ಮಯ: ಹೊಸ ನೆಲೆಗಳ ಶೋಧ’ ವಿಷಯ ಕುರಿತು ಡಾ.ಬಿ.ಎಂ. ಪುಟ್ಟಯ್ಯ ಮಾತನಾಡಿ, ‘ಪಂಪ ಕಾವ್ಯಂ ನಿತ್ಯಂ ಪೊಸತು ಎಂದ. ಆದರೆ, ಇಂದಿನ ಭಾರತದಲ್ಲಿ ಅಸ್ಪೃಶ್ಯತೆ, ನಿರುದ್ಯೋಗ, ಜೀತಪದ್ಧತಿ ನಿತ್ಯಂ ಪೊಸತು ಆಗುತ್ತಿದೆ’ ಎಂದು ವಿಷಾದಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕೆ.ಬಿ. ಶಾಣಪ್ಪ ಮಾತನಾಡಿ, ‘ಇಂದು ಅಂಬೇಡ್ಕರ್ ಇಲ್ಲದಿದ್ದರೆ ದಲಿತತ್ವದ ಚರ್ಚೆಯೇ ಆಗುತ್ತಿರಲಿಲ್ಲ. ನನಗೆ ಬುದ್ಧನಿಗಿಂತಲೂ ಅಂಬೇಡ್ಕರ್ ವಿಚಾರಧಾರೆ ದೊಡ್ಡದಾಗಿ ಕಾಣುತ್ತದೆ’ ಎಂದರು. ಡಾ.ರಮೇಶ ಲಂಡನಕರ ಸ್ವಾಗತಿಸಿದರು. ಕುಂದೂರು ಅಶೋಕ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ಕರ್ಕಿಕೋಡಿ ವಂದಿಸಿದರು. ಚಿ.ಮಾ. ಸುಧಾಕರ ಕಾರ್ಯಕ್ರಮ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !