ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 88 ಕೊರೊನಾ ಪ್ರಕರಣ ದೃಢ, 3 ಸಾವು: ಆರೋಗ್ಯ ಇಲಾಖೆ ಪ್ರಕಟಣೆ

Last Updated 30 ಮಾರ್ಚ್ 2020, 13:08 IST
ಅಕ್ಷರ ಗಾತ್ರ

ಬೆಂಗಳೂರು: ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಜಾಸ್ತಿಯಾಗುತ್ತಲೇ ಸಾಗಿದ್ದು, ರಾಜ್ಯದಲ್ಲಿ ಈವರೆಗೆ 88 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 3 ಮಂದಿ ಮೃತಪಟ್ಟಿದ್ದರೆ, ಐವರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸದಾಗಿ ಐದು ಪ್ರಕರಣಗಳು ದೃಡಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯು 88ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 92 ಕೊರೊನಾ ವೈರಸ್ ಸೋಂಕು (ಕೋವಿಡ್–19) ಪ್ರಕರಣಗಳು ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸದ್ಯ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,071 ತಲುಪಿದ್ದು, ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ನಿನ್ನೆ (ಮಾರ್ಚ್ 29) ಸಂಜೆ 5 ಗಂಟೆಯಿಂದ ಇಂದು ಬೆಳಿಗ್ಗೆ 8 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ದೃಢಪಟ್ಟ ಪ್ರಕರಣಗಳ ವಿವರ ಇಂತಿದೆ.

ಪ್ರಕರಣ 84: ಪ್ರಕರಣ 60ರ ವೃದ್ಧನ ಮಗ 13 ವರ್ಷದ ತುಮಕೂರು ನಿವಾಸಿಗೆ ಕೋವಿಡ್-19 ದೃಢಪಟ್ಟಿದ್ದು, ಆತನನ್ನು ತುಮಕೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲಾಗಿದೆ.

ಪ್ರಕರಣ 85: ಮೈಸೂರಿನ ನಂಡನಗೂಡು ನಿವಾಸಿ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರಾಥಮಿಕ ತನಿಖೆ ಪ್ರಕಾರ ಸೋಂಕಿತ ವ್ಯಕ್ತಿಯು ಪ್ರಕರಣ 52ರ ವ್ಯಕ್ತಿಯು ಕೆಲಸ ಮಾಡುತ್ತಿದ್ದ ಔಷಧೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲಾಗಿದೆ.

ಪ್ರಕರಣ 86: ನಂಜನಗೂಡಿನ ನಿವಾಸಿಯಾಗಿರುವ 34 ವರ್ಷದ ವ್ಯಕ್ತಿಯಲ್ಲಿ ಕೋವಿಡ್-19 ದೃಢಪಟ್ಟಿದ್ದು, ಈತನು ಕೂಡ ಪ್ರಕರಣ 52ರ ವ್ಯಕ್ತಿ ಕೆಲಸ ಮಾಡುತ್ತಿದ್ದ ಔಷಧೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ವ್ಯಕ್ತಿಯನ್ನು ಸದ್ಯ ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲಾಗಿದೆ.

ಪ್ರಕರಣ 87: 24 ವರ್ಷದ ನಂಜನಗೂಡು ನಿವಾಸಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈತ ಕೂಡ ಪ್ರಕರಣ 52ರ ವ್ಯಕ್ತಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸೋಂಕಿತನನ್ನು ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿಡಲಾಗಿದೆ.

ಪ್ರಕರಣ 88: ನಂಜನಗೂಡಿನವರೇ ಆದ 24 ವರ್ಷದ ವ್ಯಕ್ತಿಗೆ ಕೋವಿಡ್-19 ತಗುಲಿದ್ದು, ಈತ ಕೂಡ ಮೇಲಿನ ಪ್ರಕರಣಗಳ ವ್ಯಕ್ತಿಗಳು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈತನನ್ನು ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT