ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಿಂದ ಆಂಧ್ರದಲ್ಲಿ ಸಿಲುಕಿದ ಅಪ್ಪನ ಕನವರಿಕೆಯಲ್ಲೇ ಜೀವಬಿಟ್ಟ ಬಾಲಕ

ಲಾಕ್‌ಡೌನ್‌ನಿಂದ ಆಂಧ್ರಪ್ರದೇಶದಲ್ಲಿ ಸಿಲುಕಿದ್ದ ತಂದೆ
Last Updated 12 ಮೇ 2020, 20:00 IST
ಅಕ್ಷರ ಗಾತ್ರ

ಶಿವಮೊಗ್ಗ: ಲಾಕ್‌ಡೌನ್ ಪರಿಣಾಮ ಆಂಧ್ರಪ್ರದೇಶದಲ್ಲಿ ಸಿಲುಕಿರುವ ತಂದೆಯನ್ನು ನೋಡಬೇಕು ಎಂದು ಒಂದೇ ಸಮನೆ ಹಟ ಮಾಡುತ್ತಲೇ 12 ವರ್ಷದ ಬಾಲಕ ಚರಣ್ ಇಲ್ಲಿನ ಸರ್ಜಿ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದ.

ಸಾಗರ ತಾಲ್ಲೂಕು ಭೈರಾಪುರ ಗೌತಮಪುರದ ಲೋಕಪ್ಪ–ಸರೋಜಾ ದಂಪತಿ ಪುತ್ರ ಚರಣ್‌ ಮೂತ್ರಪಿಂಡಗಳಸಮಸ್ಯೆಯಿಂದಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡೂ ಮೂತ್ರಪಿಂಡಗಳು ವಿಫಲವಾದ ಪರಿಣಾಮ ಮಂಗಳವಾರ ಮೃತಪಟ್ಟ.

ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾದ ದಿನದಿಂದಲೂ ಅಪ್ಪನನ್ನು ನೋಡಬೇಕು ಎಂದು ಹಟ ಹಿಡಿದಿದ್ದ. ಸಾಯುವ ಕೊನೆಯ ಕ್ಷಣದಲ್ಲೂ ‘ಅಪ್ಪ ಬೇಕು, ಕರೆಸಿ’ ಎಂದು ಗೋಳಾಡುತ್ತಿದ್ದ. ‘ಅಪ್ಪ.. ಅಪ್ಪ..’ ಎಂದು ಕನವರಿಸುತ್ತಲೇ ಪ್ರಾಣಬಿಟ್ಟ. ಈ ದೃಶ್ಯ ಅವರ ಪೋಷಕರ ಜತೆ ಆಸ್ಪತ್ರೆ ಸಿಬ್ಬಂದಿಯ ಕಣ್ಣಾಲಿಗಳಲ್ಲೂ ನೀರು ತರಿಸಿತು.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಆದಂಕಿಯ ಬೆಂಗಳೂರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಲೋಕಪ್ಪ ಲಾಕ್‌ಡೌನ್‌ ನಂತರ ಅಲ್ಲೇ ಸಿಲುಕಿದ್ದರು. ಊರಿಗೆ ಮರಳಲು ಆಗಿರಲಿಲ್ಲ. ತಾಯಿ ಊರಿನಲ್ಲೇ ಕೂಲಿ ಕೆಲಸ ಮಾಡುತ್ತಿದ್ದರು.

‘ಎರಡುಮೂತ್ರಪಿಂಡಗಳೂ ವಿಫಲವಾಗಿವೆ. ಕೊನೆಯ ಕ್ಷಣದವರೆಗೂ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಸಾಯುವ ಮೊದಲೂ ಅವನು ಅಪ್ಪನ ಕನವರಿಕೆ ಬಿಟ್ಟಿರಲಿಲ್ಲ’ ಎಂದು ಸರ್ಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಪ್ರತಿಕ್ರಿಯಿಸಿದರು.

ದಂಪತಿಗೆ ಇಬ್ಬರು ಪುತ್ರಿಯರ ನಂತರ ಚರಣ್‌ ಜನಿಸಿದ್ದ. ಗೌತಮಪುರದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಪೂರೈಸಿದ್ದ.

ಪಾಸ್‌ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಡಳಿತ

ಪುತ್ರನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ತಂದೆ ಲೋಕಪ್ಪ ಅವರಿಗೆ ಜಿಲ್ಲಾಡಳಿತ ಪಾಸ್‌ ವ್ಯವಸ್ಥೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಅನುರಾಧ ಪಾಸ್‌ ದೊರಕಿಸಿಕೊಟ್ಟಿದ್ದಾರೆ. ಆಂಧ್ರದ ಸ್ನೇಹಿತರು ಕಾರಿನ ವ್ಯವಸ್ಥೆ ಮಾಡಿದ್ದಾರೆ. ಬುಧವಾರ ಬೆಳಿಗ್ಗೆ ಊರು ತಲುಪಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT