ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಹಿನ್ನೆಲೆ: ಹಾಸಿಗೆ ಮಂಜೂರಾತಿಗೆ ಕೇಂದ್ರೀಕೃತ ವ್ಯವಸ್ಥೆ

ಖಾಸಗಿ ಆಸ್ಪತ್ರೆಗಳ ಶೇ 50ರಷ್ಟು ಹಾಸಿಗೆ ಸೋಂಕಿತರಿಗೆ ಮೀಸಲು
Last Updated 27 ಜೂನ್ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಸೋಂಕಿತರನ್ನು ತಕ್ಷಣ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಲು ತಂತ್ರಾಂಶ ಆಧಾರಿತ ‘ಕೇಂದ್ರೀಕೃತ ಹಾಸಿಗೆ ಮಂಜೂರಾತಿ ವ್ಯವಸ್ಥೆ’ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ನಡೆದ ತುರ್ತು ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ವೈದ್ಯಕೀಯ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಪೈಕಿ ಶೇ 50 ರಷ್ಟನ್ನು ಈ ರೋಗಿಗಳಿಗೆ ಮೀಸಲಿಡಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ.

ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಆಂಬ್ಯುಲೆನ್ಸ್‌ಗಳ ಸಂಖ್ಯೆಗಳನ್ನು 250ಕ್ಕೆ ಹೆಚ್ಚಿಸಲು ಮತ್ತು ಕೋವಿಡ್‍ನಿಂದ ಮೃತಪಟ್ಟವರ ದೇಹಗಳನ್ನು ಸಾಗಿಸಲು ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಆಂಬುಲೆನ್ಸ್‌ ಇರುವ ಸ್ಥಳವನ್ನು ಗುರುತಿಸಲು ಮತ್ತು ಚಲನವಲನ ತಿಳಿಯಲು ಪೊಲೀಸ್ ನಿಯಂತ್ರಣ ಕೊಠಡಿಯ ವಯರ್‌ಲೆಸ್‌ ಸೇವೆ ಬಳಸಿಕೊಳ್ಳಲು ಸಭೆಯಲ್ಲಿ ಸೂಚಿಸಲಾಗಿದೆ.

ಕೋವಿಡ್‍ನಿಂದ ಮೃತಪಟ್ಟವರ ದೇಹಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ತಂಡ ರಚಿಸಲು ಮತ್ತು ಅಂತ್ಯಕ್ರಿಯೆಗೆ ಇನ್ನೂ ಹೆಚ್ಚು ಜಾಗಗಳನ್ನು ಗುರುತಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ತೀರ್ಮಾನಿಸಲಾಯಿತು.

ವೈದ್ಯರ ಕೊರತೆ ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಇಎಸ್‌ಐ ವೈದ್ಯರನ್ನು ಬಳಸಿಕೊಳ್ಳಲು ಮತ್ತು ಪರೀಕ್ಷಾರ್ಥಿ ತಹಶೀಲ್ದಾರ್‌ಗಳನ್ನು ಕೋವಿಡ್ ಆಸ್ಪತ್ರೆಗಳು ಮತ್ತು ಕೇರ್ ಸೆಂಟರ್‌ಗಳಿಗೆ ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲು ತೀರ್ಮಾನಿಸಲಾಗಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಆಯುಕ್ತರ ಮೇಲಿನ ಕೆಲಸದ ಹೊರೆ ಕಡಿಮೆಗೊಳಿಸಲು ಬಿಬಿಎಂಪಿಯ ಎಲ್ಲ ಎಂಟು ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಮತ್ತು ಅವರ ನೆರವಿಗೆ ಕೆಎಎಸ್‌ ಅಧಿಕಾರಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ನಗರದ ಸಗಟು ತರಕಾರಿ ಮಾರುಕಟ್ಟೆಗಳಲ್ಲಿ ಜನದಟ್ಟಣೆ ತಪ್ಪಿಸುವ ಉದ್ದೇಶದಿಂದ ಹೆಚ್ಚು ಸಗಟು ತರಕಾರಿ ಮಾರುಕಟ್ಟೆಗಳನ್ನು ತೆರೆಯಲು ಸೂಚಿಸಲಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಕೋವಿಡ್ ಆರೈಕೆ ಕೇಂದ್ರಗಳ ಮಂಚಗಳನ್ನು ಸ್ಥಳಾಂತರದ ಕುರಿತು ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್‌. ಅಶೋಕ, ‘ರಾಜ್ಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜ್ ಅವರು ಕ್ರೀಡಾಂಗಣದಲ್ಲಿ ಹಾಸಿಗೆಗಳನ್ನು ಹಾಕದಂತೆ ಗಲಾಟೆ ಮಾಡಿದರೆಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಸದ್ಯಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸ್ಥಿತಿ ಸೃಷ್ಟಿಯಾಗಿಲ್ಲ. ಬೇರೆ ಕಡೆ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಆದರೆ, ಗೋವಿಂದರಾಜ್ ಅವರ ನಡವಳಿಕೆ ತಪ್ಪು. ಇಂತಹ ತುರ್ತು ಸಂದರ್ಭದಲ್ಲಿ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಅವರು ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ’ ಎಂದರು.

ಸಾರ್ವಜನಿಕರಿಗೆ ಕೋರ್ಟ್ ಪ್ರವೇಶ ನಿರ್ಬಂಧ ಮುಂದುವರಿಕೆ

ಕೋವಿಡ್-19ರ ನಿಯಂತ್ರಣ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳ ಕಾರ್ಯ ಕಲಾಪಕ್ಕೆ ಸಂಬಂಧಿಸಿದ ಮಾರ್ಗಸೂಚಿ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಹಿಂದಿನಂತೆ ಕೋರ್ಟ್ ಪ್ರವೇಶವನ್ನು ವಕೀಲರಿಗೆ, ಸಿಬ್ಬಂದಿಗೆ ಸೀಮಿತಗೊಳಿಸಲಾಗಿದೆ. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವನ್ನು ಮುಂದುವರಿಸಲಾಗಿದೆ. ಸಿಬ್ಬಂದಿ, ವಕೀಲರು ಸೇರಿ ಎಲ್ಲರೂ ಕೋರ್ಟ್‌ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಹೈಕೋರ್ಟ್‌ನ ವೆಬ್‌ಸೈಟ್‌ ನೋಡಬಹುದು.

150 ಜನರನ್ನು ಸೇರಿಸಿ ಜನ್ಮದಿನಾಚರಣೆ: ಎಫ್‌ಐಆರ್‌

ಮಾಸ್ಕ್ ಧರಿಸದೇ ಅಂತರವನ್ನು ಕಾಯ್ದುಕೊಳ್ಳದೇ ಜನರನ್ನು ಗುಂಪುಗೂಡಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕೃಷ್ಣಕುಮಾರ್ ಅಲಿಯಾಸ್ ಕಿಟ್ಟಿ ಎಂಬಾತನ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಮಲ್ಲಸಂದ್ರ ನಿವಾಸಿಯಾದ ಕಿಟ್ಟಿ, ಜೂನ್ 24ರಂದು 150 ಜನರನ್ನು ಸೇರಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಭಾಗವಹಿಸಿದ್ದ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಅಂತರವನ್ನೂ ಕಾಯ್ದುಕೊಂಡಿಲ್ಲ. ಹುಟ್ಟುಹಬ್ಬದ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಕೋವಿಡ್‌ ನಿಯಂತ್ರಣದ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಕಿಟ್ಟಿ ಹೆಸರು ಈ ಹಿಂದೆ ರೌಡಿ ಪಟ್ಟಿಯಲ್ಲಿತ್ತು. ಆತ ತನ್ನ ಸಹಚರರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT