ಶನಿವಾರ, ಆಗಸ್ಟ್ 17, 2019
24 °C
ಸಿಬ್ಬಂದಿ ಕೊರತೆ, ತಾಂತ್ರಿಕ ದೋಷದಿಂದ ಕುಸಿದ ಆಧಾರ್‌ ಸೇವೆ, ಜನಸಾಮಾನ್ಯರು ಹೈರಾಣ

ಆಧಾರ್‌ ತಿದ್ದುಪಡಿಯ ಸಂಕಟ

Published:
Updated:

ಚಾಮರಾಜನಗರ: ಬಸವಾಪುರ ಗ್ರಾಮದ ನಿವಾಸಿ ಜ್ಯೋತಿ ತಮ್ಮ ಇಬ್ಬರು ಮಕ್ಕಳೊಂದಿಗೆ ರಾತ್ರಿ 2 ಗಂಟೆಗೇ ನಗರದ ತಾಲ್ಲೂಕು ಕಚೇರಿಗೆ ರಿಕ್ಷಾ ಬಾಡಿಗೆ ಮಾಡಿಕೊಂಡು ಬಂದಿದ್ದರು. ಬಾಗಿಲಿಗೆ ಎದುರಾಗಿದ್ದ ದೊಡ್ಡ ಸರತಿ ಸಾಲಿನಲ್ಲಿ ಅವರೇ ಮೊದಲಿಗರು. ಬೆಳಗ್ಗಿನ ತಿಂಡಿ, ನೀರು ಬಿಟ್ಟು ಕುಳಿತಿದ್ದ ಅವರು, ಅಂದು ಕೆಲಸ ಆಗಿ ಬಿಡುತ್ತದೆ ಎಂಬ ಖುಷಿಯಲ್ಲಿದ್ದರು. 

ಬಸಮ್ಮ 75ರ ಹರೆಯದ ವೃದ್ಧೆ. ಕುಟುಂಬದ ಸದಸ್ಯರೊಂದಿಗೆ ಮಲ್ಲಯ್ಯನಪುರದಿಂದ ಬಂದಿದ್ದರು. ನಸುಕಿನ ನಾಲ್ಕು ಗಂಟೆಗೆ ತಾಲ್ಲೂಕು ಕಚೇರಿ ತಲುಪಿದ್ದರು. ಅಷ್ಟೊತ್ತಿಗಾಗಲೇ ಹಲವು ಮಂದಿ ಅಲ್ಲಿ ಸೇರಿದ್ದರು. ಬಂದ ಕೆಲಸ ಆಗುತ್ತದೆಯೋ ಇಲ್ಲವೋ ಎಂಬ ಆತಂಕ ಅವರಲ್ಲಿತ್ತು. 

ಗುರುನಾಥ್‌ ಅವರು ನಗರದ ಹಿರಿಯ ನಾಗರಿಕರು. ಸಣ್ಣ ಕೆಲಸಕ್ಕಾಗಿ ನಾಲ್ಕೈದು ದಿನಗಳಿಂದ ಅಂಚೆ ಕಚೇರಿ, ಬ್ಯಾಂಕುಗಳಿಗೆ ಅಲೆದಾಡುತ್ತಿದ್ದಾರೆ. ಇನ್ನೆರಡು ದಿನ ರಜೆ ಬರಬೇಡಿ ಎಂದು ಸಿಬ್ಬಂದಿ ಹೇಳಿದ್ದಾರೆ. ಗೊಣಗುತ್ತಲೇ ಅಂಚೆ ಕಚೇರಿಯಿಂದ ಅವರು ಹೊರನಡೆದರು.

ಇವರಿಗೆಲ್ಲ ಆಗಬೇಕಾಗಿದ್ದು ಚಿಕ್ಕ ಕೆಲಸ. ಹೊಸದಾಗಿ ಆಧಾರ್‌ ನೋಂದಣಿ ಮಾಡುವುದು ಇಲ್ಲವೇ ಈಗಿರುವ ಆಧಾರ್‌ ಕಾರ್ಡ್‌ನಲ್ಲಿ ವಿವರಗಳನ್ನು ತಿದ್ದುಪಡಿ ಮಾಡುವುದು. ಎರಡನೇ ಕೆಲಸಕ್ಕೆ ಬಂದವರೇ ಹೆಚ್ಚು ಜನ.

ಚಾಮರಾಜನಗರದಲ್ಲಿ ಮಾತ್ರ ಅಲ್ಲ; ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಈ ದೃಶ್ಯ ಇತ್ತೀಚಿನ ದಿನಗಳಲ್ಲಿ ದಿನನಿತ್ಯವೂ ಕಂಡುಬರುತ್ತಿದೆ. ಕೇಳಿದವರದ್ದೆಲ್ಲ ಒಂದೇ ಉತ್ತರ; ‘ಆಧಾರ್ ತಿದ್ದುಪಡಿ ಮಾಡಿಸಬೇಕಿತ್ತು’ ಎಂಬುದು. ಆದರೆ, ಜನರ ಕೆಲಸ ಸುಲಭದಲ್ಲಿ ಆಗುತ್ತಿಲ್ಲ. ಅದಕ್ಕಾಗಿ ಗಂಟೆಗಟ್ಟಲೆ, ದಿನಗಟ್ಟಲೆ ಕಾಯಬೇಕು.   

ಜಿಲ್ಲೆಯಾದ್ಯಂತ ಆಧಾರ್‌ ಸೇವೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಜನರು ಆಧಾರ್‌ ನೋಂದಣಿ ಹಾಗೂ ತಿದ್ದುಪಡಿಗಾಗಿ ಇನ್ನಿಲ್ಲದ ಪಾಡು ಪಡುತ್ತಿದ್ದಾರೆ. ತಾಲ್ಲೂಕು ಕಚೇರಿ, ಕೆಲವು ಬ್ಯಾಂಕುಗಳು ಹಾಗೂ ಅಂಚೆ ಕಚೇರಿ... ಹೀಗೆ ಬೆರಳೆಣಿಕೆಯಷ್ಟು ಕಡೆಗಳಲ್ಲಿ ಬಿಟ್ಟು ಬೇರೆಲ್ಲೂ ಆಧಾರ್‌ ಸೇವೆ ಲಭ್ಯವಾಗುತ್ತಿಲ್ಲ. ಇಲ್ಲೂ ದಿನಪೂರ್ತಿ ಲಭ್ಯವಿಲ್ಲ. ಇದಕ್ಕಾಗಿ ನಿರ್ದಿಷ್ಟ ಸಮಯ ಮೀಸಲಿಡಲಾಗಿದೆ. ಆ ಅವಧಿಯಲ್ಲಿ ಮಾತ್ರ ಸೇವೆ ನೀಡಲಾಗುತ್ತಿದೆ. ಅದೂ ಬೆರಳೆಣಿಕೆ ಮಂದಿಗೆ. 

ಸರ್ಕಾರಿ ಸೇವೆ ಪಡೆಯಲು ಆಧಾರ್‌ ಕಡ್ಡಾಯವೇನಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಇಲಾಖೆಗಳು ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಕೊಡಲೇಬೇಕು ಎಂದು ಷರತ್ತು ಹಾಕಿರುವುದರಿಂದ ಫಲಾನುಭವಿಗಳು ಅನಿವಾರ್ಯವಾಗಿ ಆಧಾರ್‌ ನೋದಣಿ ಇಲ್ಲವೇ ಅದರ ತಿದ್ದುಪಡಿಗಾಗಿ ಓಡಾಡಬೇಕಿದೆ. ರೈತರು, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳು ಆಧಾರ್‌ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ. ಇತ್ತೀ‌ಚೆಗೆ ಶಾಲೆಗಳಲ್ಲೂ ವಿದ್ಯಾರ್ಥಿಗಳು ಆಧಾರ್‌ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಿರುವುದರಿಂದ ಮಕ್ಕಳು ಆಧಾರ್‌ ಕೇಂದ್ರಗಳತ್ತ ಎಡತಾಕುತ್ತಿದ್ದಾರೆ. ಇದಕ್ಕಾಗಿ ಅವರು ಶಾಲೆಗೆ ರಜೆ ಹಾಕಬೇಕಾದ ಅನಿವಾರ್ಯ ಸ್ಥಿತಿಯೂ ಎದುರಾಗಿದೆ.

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ಸದ್ಯ ಜಿಲ್ಲೆಯಲ್ಲಿ ಆಧಾರ್‌ ಸೇವೆಯ ಸ್ಥಿತಿ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಸೇವೆ ಸಿಗುತ್ತಿಲ್ಲ. ದಿನ ಕಳೆದಂತೆ ಕೇಂದ್ರಗಳಲ್ಲಿ ಜನರ ಸರತಿ ಸಾಲು ದೊಡ್ಡದಾಗುತ್ತಿದೆ. 

ಜಿಲ್ಲಾ ಕೇಂದ್ರದಲ್ಲಿ ತಾಲ್ಲೂಕು ಕಚೇರಿ, ಮೂರು ಬ್ಯಾಂಕುಗಳು (ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ) ಹಾಗೂ ಅಂಚೆ ಕಚೇರಿಯಲ್ಲಿ ಆಧಾರ್‌ ಸೇವೆ ನೀಡಲಾಗುತ್ತಿದೆ. ತಾಲ್ಲೂಕು ಕಚೇರಿಯಲ್ಲಿ ಪ್ರತಿದಿನ 30 ಮಂದಿಗೆ, ಬ್ಯಾಂಕುಗಳಲ್ಲಿ ತಲಾ 15ರಿಂದ 20 ಮಂದಿಗೆ ಮತ್ತು ಅಂಚೆ ಕಚೇರಿಯಲ್ಲಿ ದಿನಂಪ್ರತಿ 10 ಮಂದಿಗೆ ಅವಕಾಶ ನೀಡಲಾಗುತ್ತಿದೆ. 

ಕೆಲವು ಕಡೆ ಟೋಕನ್‌ ವ್ಯವಸ್ಥೆ ಇದ್ದರೆ, ಇನ್ನೂ ಕೆಲವೆಡೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ಹಾಗಾಗಿ ಜನರು ತಡರಾತ್ರಿ ಅಥವಾ ನಸುಕಿನಲ್ಲೇ ಕೇಂದ್ರದ ಬಳಿ ಬಂದು ಸರತಿ ಸಾಲಿನಲ್ಲಿ ಕಾಯುತ್ತಾರೆ. ನಂತರ ಬಂದವರು ಸಾಲಿನಲ್ಲಿ ನಿಂತಿರುವ ಜನರನ್ನು ನೋಡಿ ವಾಪಸ್‌ ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಆಧಾರ್ ಕಿಟ್‌, ಸಿಬ್ಬಂದಿ ಕೊರತೆ

ಜಿಲ್ಲೆಯಲ್ಲಿ ಸಾಕಷ್ಟು ಕೇಂದ್ರಗಳು ಇಲ್ಲದಿರುವುದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು. ಹಲವು ಕಡೆಗಳಲ್ಲಿ ಆಧಾರ್‌ ಕಿಟ್‌ಗಳು ಹಾಳಾಗಿವೆ. ಸಿಬ್ಬಂದಿಯ ಕೊರತೆಯೂ ಇದೆ. ಇವುಗಳ ಜೊತೆಗೆ ಸರ್ವರ್‌ ಸಮಸ್ಯೆಯೂ ಜನರನ್ನು ಹೈರಾಣವಾಗಿಸುತ್ತಿದೆ. 

‘ಆಧಾರ್‌ ಇಲ್ಲ, ಅದರಲ್ಲಿರುವ ಮಾಹಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಫಲಾನುಭವಿಗಳು ಮಾಸಾಶನ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ತಕ್ಷಣ ಜಿಲ್ಲೆಯ ಎಲ್ಲ 130 ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್‌ ಸೇವಾ ಕೇಂದ್ರ ತೆರೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

‘ಗ್ರಾ.ಪಂ.ನಲ್ಲಿ ಆಧಾರ್‌ ಕೇಂದ್ರ: ಸಂಪುಟದ ಸಮ್ಮತಿ’

ಆಧಾರ್‌ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ‘ನಮ್ಮ ಜಿಲ್ಲೆಯಲ್ಲಿ ಮಾತ್ರ ಅಲ್ಲ; ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ನಾಡ ಕಚೇರಿಗಳಲ್ಲಿರುವ ಒಬ್ಬ ಡಾಟಾ ಎಂಟ್ರಿ ಆಪರೇಟರೇ ಆಧಾರ್‌ ಸೇವೆ ಒದಗಿಸಬೇಕಾಗಿದೆ. ಅವರು ಸರ್ಕಾರದ ಇತರ ಸೇವೆಗಳನ್ನು ನೀಡುವುದರ ಜೊತೆಗೆ ಇದನ್ನೂ ಮಾಡಬೇಕಿದೆ. ಹೆಚ್ಚುವರಿ ಸಿಬ್ಬಂದಿ ಇಲ್ಲ’ ಎಂದು ಹೇಳಿದರು.

‘ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಆಧಾರ್‌ ಸೇವೆ ಒದಗಿಸುವವರಿಗೆ ಲಾಗಿನ್‌ ನೀಡುತ್ತದೆ. ಅವರೇ ಮಾಡಬೇಕಾಗುತ್ತದೆ. ಬ್ಯಾಂಕುಗಳು ಹಾಗೂ ಅಂಚೆ ಕಚೇರಿಯ ಸಿಬ್ಬಂದಿ ಕೂಡ ಅವರ ಇನ್ನಿತರ ಸೇವೆಗಳ ಜೊತೆಗೆ ಆಧಾರ್‌ ಸೇವೆಯನ್ನು ನೀಡಬೇಕಾಗಿದೆ. ಹಾಗಾಗಿ, ಒತ್ತಡ ಸ್ವಲ್ಪ ಹೆಚ್ಚಿದೆ’ ಎಂದರು.

ಹೆಚ್ಚಿನ ಕಿಟ್‌ಗೆ ಬೇಡಿಕೆ

ನಮ್ಮಲ್ಲಿ ಮೂರು ಸಂಚಾರಿ (ಮೊಬೈಲ್‌) ಆಧಾರ್‌ ಕಿಟ್‌ಗಳಿದ್ದವು. ಅವುಗಳಲ್ಲಿ ಒಂದು ದುರಸ್ತಿಗೆ ಬಂದಿದೆ. ಇನ್ನೆರಡನ್ನು ತೆರಕಣಾಂಬಿಗೆ ಹಾಗೂ ಕೊಳ್ಳೇಗಾಲಕ್ಕೆ ನೀಡಲಾಗಿದೆ. ಹೆಚ್ಚುವರಿ ಕಿಟ್‌ಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಮೂರು ಕಿಟ್‌ಗಳು ಸದ್ಯದಲ್ಲೇ ಬರಲಿದೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಧಾರ್‌ ಕೇಂದ್ರಗಳನ್ನು ತೆರೆಯಬೇಕು ಎಂಬ ನಿರ್ಧಾರವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ. ಅದು ಜಾರಿಗೆ ಬಂದರೆ, ಸಮಸ್ಯೆ ಬಗೆಹರಿಯಲಿದೆ’ ಎಂದು ಕಾವೇರಿ ಅವರು ಹೇಳಿದರು.

Post Comments (+)