ಆಧಾರ್‌ ಮಾಹಿತಿ ಸೋರಿಕೆ: ‌ಎಚ್ಚರಿಕೆ

7
ದತ್ತಾಂಶ ಅಳವಡಿಕೆ ಗೊತ್ತಿಲ್ಲದ ಬಹುತೇಕ ಇಲಾಖೆಗಳು

ಆಧಾರ್‌ ಮಾಹಿತಿ ಸೋರಿಕೆ: ‌ಎಚ್ಚರಿಕೆ

Published:
Updated:

ಬೆಂಗಳೂರು: ‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ನಿಯಮಗಳಿಗೆ ವಿರುದ್ಧವಾಗಿ ಆಧಾರ್‌ ಸಂಖ್ಯೆ ಸಂಗ್ರಹಿಸಿ ಬಳಸುತ್ತಿವೆ. ಇದರಿಂದಾಗಿ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ (ಸಿ.ಎಸ್‌) ಟಿ.ಎಂ. ವಿಜಯಭಾಸ್ಕರ್‌ ಆದೇಶಿಸಿದ್ದಾರೆ.

ಈ ಸಂಬಂಧ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಜುಲೈ 9ರಂದು ಐದು ಪುಟಗಳ ಸುತ್ತೋಲೆಯನ್ನೂ ಅವರು ಕಳುಹಿಸಿದ್ದಾರೆ. ಆಧಾರ್‌ ಮಾಹಿತಿ ಸೋರಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಅವರು ಸುತ್ತೋಲೆ ಹೊರಡಿಸಿರುವುದು ಮಹತ್ವ ಪಡೆದಿದೆ.

‘ಆಧಾರ್ ಸಂಖ್ಯೆ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) 2017ರ ಜುಲೈನಲ್ಲಿ ಸುತ್ತೋಲೆ ಹೊರಡಿಸಿದೆ. ಆದರೆ, ಇಲಾಖೆಯ ಅಧಿಕಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಹೇಗೆ ರೂಪಿಸಿಕೊಳ್ಳಬೇಕು ಎಂಬುದು ತಿಳಿದಿಲ್ಲ. ಪ್ರಾಧಿಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಸಂಖ್ಯೆ ಶೇಖರಣೆ ಮಾಡುತ್ತಿದ್ದಾರೆ. ವೆಬ್‌ಸೈಟ್‌ನಲ್ಲಿ ಆಧಾರ್‌ ಸಂಖ್ಯೆ ತೋರಿಸುವಾಗ ಅಥವಾ ನಮೂದಿಸುವಾಗ 12 ಅಂಕಿಗಳನ್ನು (ಗೋಪ್ಯತೆ ಕಾಪಾಡುವ ಸಲುವಾಗಿ ಆರಂಭದ ಸಂಖ್ಯೆಗಳಿಗೆ X ನಮೂದು ಮಾಡಿ, ಕೊನೆಯ ನಾಲ್ಕು ಸಂಖ್ಯೆಗಳನ್ನು ಮಾತ್ರ ಬಳಸುವ ಪದ್ಧತಿ ಇದೆ)  ಪ್ರದರ್ಶಿಸುವಂತಿಲ್ಲ ಎಂಬ ಅರಿವಿಲ್ಲ. ಎಂಐಎಸ್‌ (ಮ್ಯಾನೇಜ್‌ಮೆಂಟ್‌ ಇನ್‌ ಫಾರ್ಮೇಷನ್‌ ಸಿಸ್ಟಮ್‌) ವರದಿಗಳಲ್ಲಿ ಆಧಾರ್ ಸಂಖ್ಯೆಯನ್ನು ಸಂಪೂರ್ಣ ಬಹಿರಂಗ ಮಾಡಿರುವುದು ಆಧಾರ್‌ (ಮಾಹಿತಿ ಹಂಚಿಕೆ) ನಿಯಮಗಳು 2016ಕ್ಕೆ ವಿರುದ್ಧ’ ಎಂದು ಅವರು ತಿಳಿಸಿದ್ದಾರೆ.

‘ಬಹುತೇಕ ಇಲಾಖೆಗಳಿಗೆ ದತ್ತಾಂಶದಲ್ಲಿ ಆಧಾರ್‌ ಅನ್ನು ಯಾವ ರೀತಿ ಅಳವಡಿಸಬೇಕು ಎಂಬುದು ಗೊತ್ತಿಲ್ಲ. ಈ ಸಂಖ್ಯೆಯು ಆ ಫಲಾನುಭವಿಗೆ ಸೇರಿದೆಯೇ ಎಂಬುದನ್ನೂ ಪರೀಕ್ಷಿಸದೇ ಫಲಾನುಭವಿಯ ಹೆಸರಿನ ಮುಂದೆ ನಮೂದಿಸಲಾಗುತ್ತಿದೆ. ದತ್ತಾಂಶದಲ್ಲಿ ನಮೂದಿಸಿರುವ ಫಲಾನುಭವಿಯ ಹೆಸರು ಹಾಗೂ ಆಧಾರ್‌ ಸಂಖ್ಯೆ ಹೊಂದಾಣಿಕೆಯಾಗುತ್ತಿದೆ ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಬೇಕಿದೆ. ಈ ಪರಿಶೀಲನೆ ವೇಳೆ ಶೇ 50ರಷ್ಟು ಪ್ರಕರಣಗಳು ಹೊಂದಾಣಿಕೆ ಆಗದ ಸಾಧ್ಯತೆ ಇದೆ’ ಎಂದಿದ್ದಾರೆ.    

ಏಕೆ ಆಧಾರ್ ಕಡ್ಡಾಯ ಮಾಡುತ್ತಿದ್ದೇವೆ ಎಂಬುದು ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಇದರಿಂದಾಗಿ ಅನೇಕ ಸಲ ಪ್ರಯೋಜನಕ್ಕಿಂತ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇಲಾಖೆಗಳಿಗೆ ಮಾರ್ಗಸೂಚಿ: ರಾಜ್ಯ ಸರ್ಕಾರದ ವಿವಿಧ ಸಹಾಯಧನ (ಡಿಬಿಟಿ) ವಿತರಿಸಲು ಇಲಾಖೆಗಳು ಫಲಾನುಭವಿಗಳಿಂದ ಆಧಾರ್‌ ಸಂಖ್ಯೆ ಪಡೆಯುತ್ತಿವೆ. ರಾಜ್ಯ ಆಧಾರ್‌ ಮಸೂದೆಗೆ 2018ರ ವಿಧಾನಮಂಡಲದ ಅಧಿವೇಶನದಲ್ಲಿ ಅನುಮೋದನೆ ಪಡೆಯಲಾಗಿದೆ. ರಾಜ್ಯದಲ್ಲಿ ಆಗಸ್ಟ್‌ 1ರಿಂದ ಈ ಕಾಯ್ದೆ ಜಾರಿಗೆ ಬರಲಿದೆ. ಆಧಾರ್‌ ಬಳಕೆಯಲ್ಲಿನ ಈಗಿನ ಲೋಪದೋಷಗಳನ್ನು ಸರಿಪಡಿಸಲು 13 ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

**
ಪರಿಶೀಲನೆಗೆ ತಜ್ಞರ ಸಮಿತಿ
ಆಧಾರ್‌ ಬಳಕೆಯ ವಿಧಾನ ಹಾಗೂ ಇದಕ್ಕೆ ರೂಪಿಸಿರುವ ಕಾರ್ಯತಂತ್ರಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ  ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು. ಇಂತಹ ಪ್ರಸ್ತಾವಗಳಿಗೆ ಅನುಮೋದನೆ ನೀಡಲು ತಜ್ಞರ ಸಮಿತಿ ರಚಿಸಲಾಗುತ್ತದೆ ಎಂದೂ ವಿಜಯಭಾಸ್ಕರ್‌ ತಿಳಿಸಿದ್ದಾರೆ.
**
ಆಧಾರ್‌ ಸಂಖ್ಯೆ ನಿರ್ವಹಣೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದೇನೆ. ಆ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸುತ್ತಿದ್ದೇನೆ. ಸರ್ಕಾರದ ದತ್ತಾಂಶ ಸೋರಿಕೆ ಆಗುತ್ತಿಲ್ಲ.
–ಟಿ.ಎಂ. ವಿಜಯಭಾಸ್ಕರ್‌, ಮುಖ್ಯ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 2

  Happy
 • 4

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !