ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಗೈರು: ‘ಆಧಾರ್‌’ ಕಣ್ಣು

Last Updated 15 ಅಕ್ಟೋಬರ್ 2018, 18:57 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಗುಟ್ಟಾಗಿ ಖಾಸಗಿ ಕ್ಲಿನಿಕ್‌ಗಳನ್ನು ನಡೆಸುವ ವೈದ್ಯರ ಮೇಲೆ ಕಣ್ಣಿಡಲು ವೈದ್ಯಕೀಯ ಶಿಕ್ಷಣ ಇಲಾಖೆ ‘ಆಧಾರ್‌’ ಮೊರೆ ಹೋಗಲಿದೆ.

ಇಲಾಖೆಯ ಅಧೀನದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ವೈದ್ಯರ ಹಾಜರಾತಿಗೆ ಆಧಾರ್ ಆಧರಿತ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ ರಾಜ್ಯದ ಐದು ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯ ಇರುವುದಿಲ್ಲ. ಅವರು ಖಾಸಗಿ ಕ್ಲಿನಿಕ್‌ಗಳಲ್ಲೇ ಹೆಚ್ಚು ಕಾಲಕಳೆಯುತ್ತಾರೆ’ ಎಂಬ ಆರೋಪಗಳು ಇತ್ತೀಚೆಗೆ ವ್ಯಾಪಕವಾಗಿವೆ. ಇದಕ್ಕೆ ಕಡಿವಾಣ ಹಾಕುವುದು ಇಲಾಖೆಯ ಉದ್ದೇಶ. ರಾಜ್ಯದಲ್ಲಿ ‘ಆರೋಗ್ಯ ಕರ್ನಾಟಕ’ ಯೋಜನೆ ಅನುಷ್ಠಾನ ಹಂತದಲ್ಲಿದೆ. ಈ ವೇಳೆಯಲ್ಲಿ, ಆಧಾರ್‌ ಆಧರಿತ ಹಾಜರಾತಿ ವ್ಯವಸ್ಥೆ ಹೆಚ್ಚು ಮಹತ್ವ ಪಡೆದಿದೆ.

ರಾಜ್ಯ ಆಧಾರ್‌ ಕಾಯ್ದೆ ಆಗಸ್ಟ್‌ 1ರಿಂದ ಜಾರಿಗೆ ಬಂದಿದೆ. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳ ದತ್ತಾಂಶವನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗುತ್ತಿದೆ.

ಸೇವೆಗಳಲ್ಲಿ ಆಧಾರ್‌ ಅಳವಡಿಕೆ ಸಂಬಂಧ ಹೊರಡಿಸುವ ಅಧಿಸೂಚನೆಗಳು, ಮಾರ್ಗಸೂಚಿಗಳನ್ನು ಪರಿಶೀಲಿಸಲು ಇ–ಆಡಳಿತದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ನಾಲ್ಕು ಇಲಾಖೆಗಳ ಅಧಿಸೂಚನೆಗಳನ್ನು ಪರಿಶೀಲಿಸಿ ಸಮಿತಿ ಒಪ್ಪಿಗೆ ನೀಡಿದೆ. ವೈದ್ಯರ ಹಾಜರಾತಿಯಲ್ಲಿ ಆಧಾರ್‌ ಬಳಕೆಯ ಪ್ರಸ್ತಾವವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಸಲ್ಲಿಸಿತ್ತು. ಪ್ರಾಯೋಗಿಕ ಜಾರಿಗೆ ಇ–ಆಡಳಿತ ಇಲಾಖೆ ಸಮ್ಮತಿ ನೀಡಿದೆ.

‘ಪ್ರಸ್ತುತ ಎಲ್ಲ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಹಾಜರಾತಿ ಮೇಲೆ ನಿಗಾ ಇಡಲು ಕೇಂದ್ರೀಕೃತ ವ್ಯವಸ್ಥೆ ಇಲ್ಲ. ರಾಜ್ಯದ ಯಾವುದಾದರೂ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯ ಇಲ್ಲದಿದ್ದರೆ ಅದನ್ನುಬೆಂಗಳೂರಿನಲ್ಲಿ ಕುಳಿತೇ ಪತ್ತೆಹಚ್ಚುವಂತಾಗಬೇಕು. ಹೊಸ ವ್ಯವಸ್ಥೆಯಡಿ, ಹಾಜರಾತಿ ಪರಿಶೀಲನೆಗೆ ಡ್ಯಾಷ್‌ಬೋರ್ಡ್‌ ಆಧಾರಿತ ಕೇಂದ್ರೀಕೃತ ದತ್ತಾಂಶ ಇರಲಿದೆ’ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ತಿಳಿಸಿದರು.

ಆಧಾರ್‌ ಆಧರಿತ ಹಾಜರಾತಿ ವ್ಯವಸ್ಥೆಗೆ ನ್ಯಾಷನಲ್‌ ಇನ್ಫರ್ಮ್ಯಾಟಿಕ್ಸ್‌ ಸೆಂಟರ್‌ (ಎನ್‌ಐಸಿ) ಡ್ಯಾಷ್‌ಬೋರ್ಡ್‌ ಅಭಿವೃದ್ಧಿಪಡಿಸಿದೆ. ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಡೇಟಾ ಬೇಸ್‌ಗೆ ಜೋಡಿಸಿದ ಬೆರಳಚ್ಚು ಸಾಧನಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುತ್ತದೆ. ‘ಅನೇಕ ವೈದ್ಯರು ಹಾಗೂ ಸಿಬ್ಬಂದಿ ರಾತ್ರಿಪಾಳಿಗೆ ಗೈರುಹಾಜರಾಗುತ್ತಾರೆ ಎಂಬ ದೂರುಗಳಿವೆ. ಈ ಬಗ್ಗೆಯೂ ನಿಗಾ ಇಡಲು ಈ ವ್ಯವಸ್ಥೆ ನೆರವಾಗಲಿದೆ’ ಎಂದು ಮಂಜುಳಾ ಹೇಳಿದರು.

ಆರಂಭಿಕ ಹಂತದಲ್ಲಿ ಕಾಯಂ ನೌಕರರ ಮೇಲ್ವಿಚಾರಣೆಗೆ ಆಧಾರ್‌ ಹಾಜರಾತಿ ಬಳಸಲಾಗುತ್ತದೆ. ಕ್ರಮೇಣ ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಲಾಗುತ್ತದೆ
-ವಿ.ಮಂಜುಳಾ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT