ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯ ಮೋಟ್ನಳ್ಳಿಯಲ್ಲಿ 150 ಜನರಲ್ಲಿ ‘ಆನೆಕಾಲು’ ಲಕ್ಷಣ!

ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರೋಗ ವ್ಯಾಪಕ; ಭೀತಿಯಲ್ಲಿ ಗ್ರಾಮಸ್ಥರು
Last Updated 7 ನವೆಂಬರ್ 2018, 11:29 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾಕೇಂದ್ರದಿಂದ 50 ಕಿಲೋ ಮೀಟರ್‌ ದೂರದಲ್ಲಿರುವ ‘ಮೋಟ್ನಳ್ಳಿ’ ಆನೆಕಾಲು ರೋಗಕ್ಕೆ ಅಕ್ಷರಶಃ ನಲುಗಿದೆ. 16ಕ್ಕೂ ಹೆಚ್ಚು ಮಹಿಳೆಯರು, 30ಕ್ಕೂ ಹೆಚ್ಚು ಪುರುಷರು ಆನೆಕಾಲು ರೋಗಕ್ಕೆ ತುತ್ತಾಗಿದ್ದಾರೆ. ಕನಿಷ್ಠ 150ಕ್ಕೂ ಹೆಚ್ಚು ಜನರಲ್ಲಿ ಪ್ರಾಥಮಿಕ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.

ಜಿಲ್ಲೆಯ ದೋರನಹಳ್ಳಿ, ಗಡಿಗ್ರಾಮ ಅಫಜಲ್‌ಪುರ, ಚಂಡ್ರಕಿ. ಪೇಟೆ ಅಮ್ಮಾಪುರ, ಕೊಂಕಲ್‌, ಕಲ್ಲೇದೇನಹಳ್ಳಿ ಹತ್ತಿಕುಣಿ, ಗಾಜರಕೋಟ, ಖಾನಾಪುರ ಹೊಸಳ್ಳಿ, ಚಿಂತಕುಂಟ, ಕೊಟಗೇರಾ ಹಾಗೂ ಸುರಪುರ ತಾಲ್ಲೂಕಿನ ರಂಗಂಪೇಟೆಯಲ್ಲಿ ಆನೆಕಾಲು ಸೋಂಕು ಜನರಲ್ಲಿ ಕಾಣಿಸಿಕೊಂಡಿದ್ದರೂ, ಈ ರೋಗಬಾಧೆ ಹೆಚ್ಚು ಮೊಟ್ನಳ್ಳಿ ಗ್ರಾಮಸ್ಥರಲ್ಲಿ ಕಾಣಿಸಿಕೊಂಡಿದೆ. ಮೋಟ್ನಳ್ಳಿಯಲ್ಲಿ 3,970 ಜನಸಂಖ್ಯೆ ಇದೆ. ಅವರಲ್ಲಿ 1,986 ಪುರುಷರು, 1984 ಮಹಿಳೆಯರು ಇದ್ದಾರೆ. ಅವರಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಜನರನ್ನು ಆನೆಕಾಲು ರೋಗ ಹಿಂಡಿಹಿಪ್ಪೆ ಮಾಡಿದೆ.

‘ಜಿಲ್ಲೆಯ ಪ್ರತಿಹಳ್ಳಿಗಳಲ್ಲೂ ಒಬ್ಬಿಬ್ಬರು ಆನೆಕಾಲು ರೋಗಿಗಳು ಸಿಗುತ್ತಾರೆ. ಆದರೆ, ಈ ರೋಗಕ್ಕೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಆರೋಗ್ಯ ಇಲಾಖೆ 13 ವರ್ಷಗಳಿಂದ ಗ್ರಾಮದಲ್ಲಿ ಆನೆಕಾಲು ರೋಗ ಪೀಡಿತರಿಗೆ ಡಿಇಸಿ ಮಾತ್ರೆಗಳನ್ನು ವಿತರಿಸುತ್ತಾ ಬಂದಿದೆ. ಆದರೆ, ಫಲಿತಾಂಶ ಮಾತ್ರ ಶೂನ್ಯ’ ಎಂಬುದಾಗಿ ಆನೆಕಾಲು ರೋಗಕ್ಕೆ ತುತ್ತಾಗಿರುವ ರೋಗಿಗಳು ಸಂಕಷ್ಟ ತೋಡಿಕೊಳ್ಳುತ್ತಾರೆ.

ಜಕ್ಕಳ್ಳಿ ತಿಪ್ಪಣ್ಣ, ಮುಧೋಳ ಶರಣಮ್ಮ, ಛಾಯಪ್ಪ ಭಂಗಿ, ಹಣಮಂತ, ದೇವೀಂದ್ರಪ್ಪ, ದೊಡ್ಡ ಮಹಾದೇವಪ್ಪ ಕೆಂಪನೋರ್, ಸಾಯಮ್ಮ ಕಾವಲಿ, ಮಲ್ಲಮ್ಮ ತಿಮ್ಮಣ್ಣವರ, ಮಹಾದೇವಮ್ಮ, ಮಹಾದೇವಮ್ಮ ಪಲನೂರು, ನರಸಿಂಹ ಆಶಣ್ಣವರ, ಸಣ್ಣ ಮಹಾದೇವಪ್ಪ ಕೆಂಪನೋರ್ ಇವರೆಲ್ಲ ಮೋಟ್ನಹಳ್ಳಿ ನಿವಾಸಿಗಳಾಗಿದ್ದು, ರೋಗಬಾಧೆಯಿಂದ ಬಳಲುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಆನೆಕಾಲು ರೋಗಕ್ಕೆ ಕಾರಣವಾಗಿರುವ ರೋಗಾಣು ಪತ್ತೆ ಹಚ್ಚಲು ದೇಶದ ಮಹಾರಾಷ್ಟ್ರ, ಜಾರ್ಖಂಡ್, ತೆಲಂಗಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿನ ನಾಲ್ಕು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಆರೋಗ್ಯ ಸರ್ವೇ ನಡೆಸಿದೆ. ರಾಜ್ಯದಿಂದ ‘ಯಾದಗಿರಿ’ ಆಯ್ಕೆ ಮಾಡಿಕೊಂಡಿದ್ದು, ವಿವಿಧ ಕಡೆಗಳಲ್ಲಿ ಎಂಟು ಸಾವಿರ ಜನರ ರಕ್ತ ಮಾದರಿ ಸಂಗ್ರಹಿಸಿದೆ. ಅಲ್ಲದೇ ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ಮೂರು ತಿಂಗಳ ಕಾಲ ಸರ್ವೇ ನಡೆಸಿರುವ ಕೇಂದ್ರ ಸರ್ಕಾರದ ಅಧೀನ ಆರೋಗ್ಯ ಅಂಗ ಸಂಸ್ಥೆ ವಿಸಿಆರ್‌ಸಿ (ವೆಕ್ಟರ್ ಕಂಟ್ರೋಲ್‌ ರೀಸರ್ಚ್‌ ಸೆಂಟರ್) ಕೂಡ ಜಿಲ್ಲೆಯಲ್ಲಿ ರೋಗ ಪ್ರಮಾಣ ಹೆಚ್ಚಿದೆ ಎಂದು ವಿಸಿಆರ್‌ಸಿ ತಂಡದ ಆರೋಗ್ಯ ವಿಜ್ಞಾನಿ ಡಾ.ವಿಜ್ಜೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘2004ರಲ್ಲಿ ಆನೆಕಾಲು ರೋಗ ಕುರಿತು ಇಡೀ ದೇಶದಲ್ಲಿ ಸರ್ವೇ ನಡೆಸಿದಾಗ ಕರ್ನಾಟಕದಲ್ಲಿ ರೋಗದ ಪ್ರಮಾಣ 1.98 (ಮೈಕ್ರೋ ಫೈಲೇರಿಯಾ ರೇಟ್) ಇತ್ತು. ಆಗ ವೆಸ್ಟ್‌ ಬೆಂಗಾಲ್‌ನಲ್ಲಿ 4.74, ಒಡಿಶಾದಲ್ಲಿ 2.60 ಇತ್ತು. ಆದರೆ, ಇಂದು 2018ರ ಸರ್ವೇ ಪ್ರಕಾರ ವೆಸ್ಟ್‌ ಬೆಂಗಾಲ್‌ ರಾಜ್ಯದಲ್ಲಿ 0.79, ಒಡಿಷಾದಲ್ಲಿ 0.77ರಷ್ಟು ಮೈಕ್ರೋ ಫೈಲೇರಿಯಾ ರೇಟ್ ಇದೆ. ಆದರೆ, ರಾಜ್ಯದಲ್ಲಿ ಮಾತ್ರ 1.19ರಷ್ಟು ರೋಗ ಪ್ರಮಾಣ ಈಗಲೂ ಇದೆ’ ಎನ್ನುತ್ತಾರೆ ಡಾ.ವಿಜ್ಜೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT