ಬುಧವಾರ, ನವೆಂಬರ್ 13, 2019
17 °C

‘ಕ್ವಾಥಾ’ಗಾಗಿ ಆಯುಷ್ ಬಾಡಿಬಿಲ್ಡಿಂಗ್‌

Published:
Updated:

ನಟ ಆಯುಷ್ ಶರ್ಮಾ ‘ಕ್ವಾಥಾ’ ಸಿನಿಮಾದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಅವರು ಬಾಡಿಬಿಲ್ಡಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

‘ಬಾಲಿವುಡ್‌ನಲ್ಲಿ ನೆಲೆವೂರಬೇಕು. ಹಾಗೆಯೇ ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕಾದರೆ ನನಗೆ ಈ ಸಿನಿಮಾದ ಗೆಲುವು ತುಂಬಾ ಮುಖ್ಯ. ‘ಕ್ವಾಥಾ’ದಲ್ಲಿ ಹೊಸತನ ತೋರುವ ಉತ್ಸಾಹದಲ್ಲಿದ್ದೇನೆ’ ಎಂದು ಆಯುಷ್‌ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಆಯುಷ್‌ ಮಾಡುತ್ತಿರುವ ಪಾತ್ರವೇ ಹಾಗಿದೆ. ಖಡಕ್‌ ಸೇನಾಧಿಕಾರಿ ಪಾತ್ರದಲ್ಲಿ ಅವರು ನಟಿಸಲಿದ್ದಾರೆ. ಸಿನಿಮಾದ ಒಂದೆರಡು ದೃಶ್ಯಗಳಲ್ಲಿ ಅವರು ಶರ್ಟ್ ಧರಿಸದೇ ಕಾಣಿಸಿಕೊಳ್ಳಬೇಕಿದೆ. ಇದಕ್ಕಾಗಿಯೇ ವಿಶೇಷ ತಯಾರಿ ನಡೆಸಿದ್ದಾರಂತೆ.

ಕತ್ರಿನಾ ಕೈಫ್‌ ಸಹೋದರಿ ಇಸಬೆಲ್ಲಾ ಕೈಫ್‌ ಈ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇಸಬೆಲ್ಲಾ ಕೂಡ ಸೇನಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಮಿಶ್ರ ಮಾರ್ಷಲ್‌ ಆರ್ಟ್ಸ್‌ ಕಲಿಯುತ್ತಿದ್ದಾರಂತೆ. ಜಿಮ್‌ನಲ್ಲಿ ಅವರು ವರ್ಕ್‌ಔಟ್‌ ಮಾಡುತ್ತಿರುವ ಚಿತ್ರಗಳು ಕೂಡ ಟ್ವಿಟರ್‌ನಲ್ಲಿ ಹರಿದಾಡಿವೆ.

ಆಯುಷ್‌ ಶರ್ಮಾ ಇತ್ತೀಚಿನ ತಮ್ಮ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಜಿಮ್‌ನಲ್ಲಿ ಅವರು ಶರ್ಟ್ ಇಲ್ಲದೇ ಕಾಣಿಸಿಕೊಂಡ ಈ ಚಿತ್ರ ಸಾಕಷ್ಟು ವೈರಲ್ ಆಗಿದೆ. ‘ಆಯುಷ್ ನಿಮ್ಮ ಸಿದ್ಧತೆ ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ’ ಎಂದು ಸಾಕಷ್ಟು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಸಿನಿಮಾದ ಕೆಲವು ಭಾಗಗಳ ಶೂಟಿಂಗ್ ಆಗಿದೆಯಂತೆ. ಇನ್ನು 50 ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ. ಭಾರತದ ಸೇನಾಧಿಕಾರಿಗಳ ಕತೆಯನ್ನು ಇದು ಒಳಗೊಂಡಿದೆ. ಆಯುಷ್‌ ಒಂದು ತಿಂಗಳ ಕಾಲ ಸೈನಿಕರ ಶಿಬಿರಗಳಲ್ಲಿ ತರಬೇತಿ ಪಡೆದುಕೊಂಡು ಬಂದ ನಂತರ ಶೂಟಿಂಗ್‌ಗೆ ಸಣ್ಣ ಬ್ರೇಕ್ ಪಡೆದುಕೊಂಡಿದ್ದರು. ಪತ್ನಿ ಅರ್ಪಿತಾ ಖಾನ್‌ ಅವರೊಂದಿಗೆ ಪ್ರವಾಸ ಮುಗಿಸಿಬಂದ ಬಳಿಕ ಮತ್ತೆ ಈಗ ಶೂಟಿಂಗ್ ಆರಂಭಿಸಲಿದ್ದಾರೆ.

ಪ್ರತಿಕ್ರಿಯಿಸಿ (+)