ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಗ್ಲ ಪದ ನುಡಿಯದ ‘ಅಭಿನವ ಆಂಡಯ್ಯ’

ದೇವಪ್ಪಜ್ಜನವರ ರಾಜ್ಯೋತ್ಸವ ಸವಾಲು ವಿಜೇತರಿಗೆ ₹ 55,555 ಬಹುಮಾನ
Last Updated 16 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಈಶ್ವರನಗರದ ದಕ್ಷಿಣ ಶ್ರೀವೈಷ್ಣೋದೇವಿ ಮಂದಿರದ ಧರ್ಮಾಧಿಕಾರಿ, ‘ಅಭಿನವ ಆಂಡಯ್ಯ’ ಎಂದೇ ಪ್ರಸಿದ್ಧರಾಗಿರುವ ದೇವಪ‍್ಪಜ್ಜನವರ ಬಾಯಿಯಿಂದ ಆಂಗ್ಲ ಪದಗಳನ್ನು ಹೇಳಿಸಿದವರಿಗೆ ₹55,555 ಗೆಲ್ಲುವ ಅವಕಾಶ!

35 ವರ್ಷಗಳಿಂದ ಅವರು ಒಡ್ಡುತ್ತಿರುವ ಈ ಸವಾಲಿನಲ್ಲಿ ಯಾರೊಬ್ಬರೂ ಜಯಶಾಲಿಗಳಾಗಿಲ್ಲ. ಈ ವರ್ಷವೂ ನವೆಂಬರ್‌ 24ರಂದು ಮುಕ್ತ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಸಾಹಿತಿಗಳು, ವಿದ್ವಾಂಸರು, ಶಿಕ್ಷಕರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಆಸಕ್ತ ಸಾರ್ವಜನಿಕರು ಸೇರಿದಂತೆ ಯಾವುದೇ ಜಾತಿ, ಧರ್ಮದವರು ಬೇಕಾದರೂ ಈ ಸವಾಲಿನಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.

ಷರತ್ತುಗಳು: ಸ್ಪರ್ಧಾಳುಗಳಿಗೆ ಐದು ನಿಮಿಷ ಕಾಲಾವಕಾಶ ಇರಲಿದ್ದು, ಈ ಸಮಯದಲ್ಲಿ ದೇವಪ‍್ಪಜ್ಜನವರಿಂದ ಆಂಗ್ಲಪದ ಹೇಳಿಸಿದರೆ ಸವಾಲು ಗೆದ್ದಂತೆ. ಆದರೆ, ಸವಾಲಿನ ಸಂದರ್ಭದಲ್ಲಿ ವಾದ, ತಕರಾರು ಮಾಡುವುದಾಗಲಿ, ಹೊಡೆಯುವುದಾಗಲಿ, ಬೈಯ್ಯುವುದಕ್ಕಾಗಲಿ ಅವಕಾಶವಿಲ್ಲ. ಜೊತೆಗೆ ಯಾವುದೇ ತರಹದ ಆಯುಧ ಇಟ್ಟುಕೊಳ್ಳುವಂತಿಲ್ಲ ಎಂಬುದು ಅವರ ಪ್ರಮುಖ ಷರತ್ತುಗಳು.

ಪ್ರತಿ ವರ್ಷ ನವೆಂಬರ್‌ನಲ್ಲಿ ಆಯೋಜಿಸುವ ಈ ಸವಾಲಿನಲ್ಲಿ ನೂರಾರು ಸ್ಪರ್ಧಿಗಳು ಭಾಗವಹಿಸುತ್ತಾರೆ. ಆರಂಭದ ವರ್ಷಗಳಲ್ಲಿ ಇವರ ಸವಾಲು ಜಯಿಸಿದವರಿಗೆ ₹ 500 ಬಹುಮಾನ ಇಟ್ಟಿದ್ದರು. 2006–07ರಲ್ಲಿ ಈ ಮೊತ್ತ ₹ 1 ಕೋಟಿ ಇತ್ತು! ಆಗಲೂ ಯಾರೊಬ್ಬರೂ ಗೆಲ್ಲಲಿಲ್ಲ.

ಸೋತ ಪ್ರಮುಖರು: ‘ನನ್ನಿಂದ ಆಂಗ್ಲ ಪದ ಹೇಳಿಸಲು ಯತ್ನಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್‌, ಚಂದ್ರಕಾಂತ ಬೆಲ್ಲದ, ಪ್ರೊ.ಐ.ಜಿ.ಸನದಿ, ಚಂಪಾ, ಮಾತೆ ಮಹಾದೇವಿ, ಸಿ.ಎಸ್‌.ಶಿವಳ್ಳಿ ಸೇರಿದಂತೆ ಪ್ರಮುಖರು ಸೋಲೊಪ್ಪಿದ್ದಾರೆ’ ಎಂದು ದೇವಪ್ಪಜ್ಜ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ನಿದ್ರೆ ಮಾಡುವಾಗ ಏಕಾಏಕಿ ಎಬ್ಬಿಸಿ ನನ್ನ ಬಾಯಿಯಿಂದ ಆಂಗ್ಲ ಪದ ಹೇಳಿಸಲು ಅನೇಕ ಸ್ನೇಹಿತರು ಇನ್ನಿಲ್ಲದ ಪ್ರಯತ್ನ ಮಾಡಿಯೂ ವಿಫಲರಾಗಿದ್ದಾರೆ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ದೇವಪ್ಪಜ್ಜ ಅವರ ಪತ್ನಿ ಮತ್ತು ಪುತ್ರಿ ಇಬ್ಬರೂ ವೈದ್ಯರು. ಪುತ್ರ, ಹೈದರಾಬಾದ್‌ನ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟಾದರೂ ಮನೆಯಲ್ಲಿ ಅಚ್ಚಕನ್ನಡ ಮಾತನಾಡುತ್ತಾರೆ. 55 ವರ್ಷ ವಯಸ್ಸಾಗಿರುವ ಇವರು ಕನ್ನಡದ ಜೊತೆಗೆ ಹಿಂದಿ, ಇಂಗ್ಲಿಷ್, ಉರ್ದು, ತೆಲಗು, ತಮಿಳು, ರಷ್ಯನ್‌, ಮಲಯಾಳಂ, ಮರಾಠಿ, ಗುಜರಾತಿ, ರಾಜಸ್ಥಾನಿ ಸೇರಿದಂತೆ 11 ಭಾಷೆಗಳಲ್ಲಿ ಪ್ರವೀಣರು.

ಭಾರತ ಮಾತ್ರವಲ್ಲದೇ ನೇಪಾಳ, ರಷ್ಯಾ, ಅಮೆರಿಕಾ, ಜರ್ಮನಿಯನ್ನು ಸುತ್ತಿ ಬಂದಿದ್ದಾರೆ.

ನೋಂದಣಿಗೆ ಅವಕಾಶ: ಸವಾಲಿನಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತರು ಮೊಬೈಲ್‌ 98806 38208/ 86188 58462 ಸಂಪರ್ಕಿಸಿ, ತಮ್ಮ ಹೆಸರು ನೋಂದಾಯಿಸಬಹುದು. ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT