ಹೊರಗುತ್ತಿಗೆ ರದ್ದುಪಡಿಸಲು ಒತ್ತಾಯ

7
ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ

ಹೊರಗುತ್ತಿಗೆ ರದ್ದುಪಡಿಸಲು ಒತ್ತಾಯ

Published:
Updated:
ಹೊರಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯಿಸಿ ಟಿಯುಸಿಐ ಸಂಯೋಜಿತ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಕಾರ್ಮಿಕರು ರಾಯಚೂರಿನಲ್ಲಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು

ರಾಯಚೂರು: ತುಂಗಭದ್ರಾ ಯರಮರಸ್ ವೃತ್ತದ 738 ಕಾರ್ಮಿಕರನ್ನು ಬೀದಿಪಾಲು ಮಾಡಲಿರುವ ಹೊರಗುತ್ತಿಗೆ ರದ್ದುಪಡಿಸಲು ಒತ್ತಾಯಿಸಿ ಟಿಯುಸಿಐ ಸಂಯೋಜಿತ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಕಾರ್ಮಿಕರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಧರಣಿ ಆರಂಭಿಸಿದ ಕಾರ್ಮಿಕರು ಜಿಲ್ಲಾಡಳಿತದ ಮೂಲಕ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದ ಮನವಿ ಸಲ್ಲಿಸಿದರು. ಸಂಧಾನ ನಡೆಸಿದರೂ ಫಲ ದೊರೆಯದ ಕಾರಣ ಅನಿವಾರ್ಯವಾಗಿ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರದ ಮೇಲೆ ಭರವಸೆಯಿಟ್ಟು ಎರಡು ಬಾರಿ ಮುಷ್ಕರ ಮುಂದೂಡಿದರೂ ಕಾರ್ಮಿಕ ವಿರೋಧಿ ನಿಲುವು ಮುಂದುವರೆಸಿದೆ ಎಂದು ಆರೋಪಿಸಿದರು.

ಕಳೆದ 25 ವರ್ಷಗಳಿಂದ ತುಂಗಭದ್ರಾ ಎಡದಂಡೆ ಕಾಲುವೆಯ ನೀರು ನಿರ್ವಹಣೆ ಮಾಡುತ್ತಾ ಬಂದಿರುವ ಯರಮರಸ್‌, ಸಿಂಧನೂರು ಹಾಗೂ ಸಿರವಾರ ವಿಭಾಗ ಒಳಗೊಂಡ ಯರಮರಸ್ ವೃತ್ತದ ಕಾರ್ಮಿಕರನ್ನು ನೀರಾವರಿ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ದೂರಿದರು.

2014–15 ರಿಂದ ವರ್ಷದ ಆರಂಭದಲ್ಲಿ ಹೊರ ಸಂಪನ್ಮೂಲ ಏಜೆನ್ಸಿಗಳ ಮೂಲಕ ಕಾರ್ಮಿಕರನ್ನು ಸರಬರಾಜು ಮಾಡಿಕೊಳ್ಳಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಂತೆಯೇ ವಿರೋಧಿಸುತ್ತಾ ಬಂದಿದ್ದರಿಂದ ಅಧಿಕಾರಿಗಳು ಸಭೆ ನಡೆಸಿ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿಸಿಕೊಂಡು ಹೊರಗುತ್ತಿಗೆ ನಿರ್ಧಾರ ಕೈಬಿಟ್ಟಿದ್ದಾರೆ. ಆದರೆ, ಕರ್ನಾಟಕ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಲೆಕ್ಕಾಧಿಕಾರಿ ಆದೇಶದಂತೆ ಹೊರಗುತ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಬಿಡ್‌ ಓಪನ್ ಮಾಡಲಾಗಿದೆ. ಇದು ಜಾರಿಯಾದರೆ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ ಎಂದರು.

ಸರ್ಕಾರದ ಅಧೀನ ಕಾರ್ಯದರ್ಶಿ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಪತ್ರ ಬರೆದು 3,865 ಕಾರ್ಮಿಕರಿಗೆ ಸರ್ಕಾರದಿಂದ ನೇರವಾಗಿ ವೇತನ ಪಾವತಿಸಲು ಕ್ರಮ ಜರುಗಿಸಲು ವಿವರ ಕೇಳಿದ್ದಾರೂ, ಇದನ್ನು ಲೆಕ್ಕಿಸದೇ ಹೊರಗುತ್ತಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಕೆಟಿಪಿಪಿ ಕಾಯ್ದೆಯನ್ನು 1999ರಲ್ಲಿ ರೂಪಿಸಲಾಗಿದ್ದು, 2000ರಲ್ಲಿ ನಿಯಮಗಳನ್ನು ರಚಿಸಿಕೊಳ್ಳಲಾಗಿದೆ. ಆದರೆ, 20 ವರ್ಷಗಳಿಂದ ಅನ್ವಯಿಸಲಾಗದ ನಿಯಮಗಳನ್ನು ಈಗ ಜಾರಿ ಮಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಗುತ್ತಿಗೆ ಕಾರ್ಮಿಕ ಕಾಯ್ದೆ 1970ರ ಪ್ರಕಾರ ಕಾಯಂ ಸ್ವರೂಪದ ಕೆಲಸಗಳಿಗೆ ಗುತ್ತಿಗೆ ಕಾರ್ಮಿಕ ಪದ್ಧತಿ ಅನ್ವಯಿಸಬಾರದು ಎಂಬ ಕಾರಣದಿಂದ ಪೌರಕಾರ್ಮಿಕ ವಲಯದಲ್ಲಿ ಇಲಾಖೆಯ ಅಡಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಅವರಂತೆ ತುಂಗಭದ್ರಾ ಕಾರ್ಮಿಕರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿ ಮಾಡಿಲ್ಲ. ಕಾರ್ಮಿಕರು ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಿದೆ. ಕೂಡಲೇ ವೇತನ ಪಾವತಿ ಮಾಡಬೇಕು. ಸೇವಾ ಹಿರಿತನ ಹಾಗೂ ಉದ್ಯೋಗ ಭದ್ರತೆ ಕಾಪಾಡಬೇಕು. ವರ್ಷಪೂರ್ತಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಆರ್.ಮಾನಸಯ್ಯ, ಜಿ.ಅಡವಿರಾವ್, ಜಿ.ಅಮರೇಶ, ವಾದಿರಾಜ, ರಮೇಶ ಕೊಟ್ನೆಕಲ್, ಸಿದ್ದಪ್ಪಗೌಡ, ರಾಮಣ್ಣ, ಗ್ಯಾನಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !