ಸ್ವಾಮಿ ಅಮಾನತು; ಮುಂದುವರಿದ ಶೋಧ

7
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎಸಿಬಿ ಪತ್ರ

ಸ್ವಾಮಿ ಅಮಾನತು; ಮುಂದುವರಿದ ಶೋಧ

Published:
Updated:

ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಆರೋಪಕ್ಕೆ ಒಳಗಾಗಿರುವ ಕೆಎಐಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಬಿಡಿಎ ಎಂಜಿನಿಯರ್‌ ಆಫೀಸರ್‌ ಎನ್‌.ಜಿ. ಗೌಡಯ್ಯ ಅವರೂ ಸಸ್ಪೆಂಡ್‌ ಆಗುವ ಸಾಧ್ಯತೆ ಇದೆ.

ಸ್ವಾಮಿ ಮತ್ತು ಗೌಡಯ್ಯ ಅವರ ಮನೆ, ಕಚೇರಿಗಳು ಸೇರಿದಂತೆ ಎಂಟು ಸ್ಥಳಗಳ ಮೇಲೆ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು, ಭಾರಿ ಪ್ರಮಾಣದ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದರು. ಇದರ ಬೆನ್ನಲ್ಲೇ ಇಬ್ಬರೂ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು.

ಶಿಫಾರಸು ಆಧರಿಸಿ ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ತಿಳಿಸಿದರು. ಆದರೆ, ಗೌಡಯ್ಯ ಅಮಾನತಿಗೆ ಸಂಬಂಧಿಸಿದಂತೆ ಇನ್ನೂ ಎಸಿಬಿಯಿಂದ ಪತ್ರ ಬಂದಿಲ್ಲ. ಶಿಫಾರಸು ಬಂದ ತಕ್ಷಣ ಪ್ರಕ್ರಿಯೆ ನಡೆಯಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಹೇಳಿದರು.

ಸ್ವಾಮಿ, ಗೌಡಯ್ಯ ಅವರ ಒಟ್ಟು ಸಂಬಳ ಹಾಗೂ ಖರ್ಚುಗಳನ್ನು ಲೆಕ್ಕಹಾಕಿದರೆ ತಲಾ 2 ಕೋಟಿ ಮೊತ್ತದ ಆಸ್ತಿ ಇರಬೇಕಿತ್ತು. ಕ್ರಮವಾಗಿ 11 ಕೋಟಿ ಹಾಗೂ 13 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಮೇಲ್ನೋಟಕ್ಕೆ ಕಾಣುವಂತಿದ್ದು, ಇಬ್ಬರನ್ನೂ ಸಸ್ಪೆಂಡ್‌ ಮಾಡದಿದ್ದರೆ ಸಾಕ್ಷ್ಯಾಧಾರ ನಾಶಪಡಿಸುವ ಸಾಧ್ಯತೆಯಿದೆ ಎಂದು ಎಸಿಬಿ ಪತ್ರದಲ್ಲಿ ವಿವರಿಸಿರುವುದಾಗಿ ಸಚಿವಾಲಯದ ಮೂಲಗಳು ತಿಳಿಸಿವೆ. 

ಇದಲ್ಲದೆ, ಇಬ್ಬರೂ ಅಧಿಕಾರಿಗಳ ಬಳಿ ಇರಬಹುದಾದ ಬೇನಾಮಿ ಆಸ್ತಿಪಾಸ್ತಿಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದ್ದು, ಅದು ಸಾಬೀತಾದರೆ ಮೌಲ್ಯ ದ್ವಿಗುಣಗೊಳ್ಳಬಹುದು ಎಂದು ಪತ್ರದಲ್ಲಿ ಹೇಳಿರುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ.

ಮುಂದುವರಿದ ಶೋಧ: ಈ ಮಧ್ಯೆ, ಎಸಿಬಿ ಪೊಲೀಸರ ತಂಡ ಮಂಗಳವಾರವೂ ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ಮುಂದುವರಿಸಿತು. ಕೆಐಎಡಿಬಿ ಮತ್ತು ಬಿಡಿಎ ಕಚೇರಿಗಳನ್ನು ಜಾಲಾಡಿತು. ಬ್ಯಾಂಕ್‌ ಖಾತೆಗಳ ತಪಾಸಣೆ ನಡೆಸಿತು. ಇಬ್ಬರೂ ಭಾರಿ ವಹಿವಾಟು ನಡೆಸಿದ್ದು, ಈ ಸಂಬಂಧ ಅನೇಕರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಆಸ್ಪತ್ರೆ ಸೇರಿದ ಅಧಿಕಾರಿ

ಎಸಿಬಿ ದಾಳಿಯಿಂದ ಆಘಾತಕ್ಕೊಳಗಾಗಿರುವ ಸ್ವಾಮಿ ಆಸ್ಪತ್ರೆ ಸೇರಿದ್ದಾರೆ.

ಸ್ವಾಮಿ, ಎಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗ ಬೇಕಿತ್ತು. ಆಸ್ಪತ್ರೆ ಸೇರಿರುವುದರಿಂದ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂಬ 
ಸಂದೇಶ ಕಳುಹಿಸಿದ್ದಾರೆ. ಗೌಡಯ್ಯ ವಿಚಾರಣೆಗೆ ಹಾಜರಾಗಿದ್ದರು. ಶನಿವಾರ ಆರಂಭವಾದ ಅವರ ವಿಚಾರಣೆ ಇಂದೂ ಮುಂದುವರಿಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !