ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ದಾಳಿ

ಭೂಮಿ ಕಳೆದುಕೊಂಡ ರೈತರಿಂದ ಕಮಿಷನ್ ಪಡೆದು ಪರಿಹಾರ ವಿತರಿಸಿದ ಪ್ರಕರಣ
Last Updated 25 ಅಕ್ಟೋಬರ್ 2019, 18:07 IST
ಅಕ್ಷರ ಗಾತ್ರ

ಬೆಂಗಳೂರು: ದಾಬಸ್‌ಪೇಟೆ ಸಮೀಪದ ಸೋಂಪುರ ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಲು ಶೇ 10ರಷ್ಟು ಕಮಿಷನ್‌ ಪಡೆಯಲಾಗಿದೆ ಎನ್ನಲಾದ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮೂವರು ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಕಮಿಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಂಗಳವಾರ ರೇಸ್‌ಕೋರ್ಸ್‌ ರಸ್ತೆಯ ಖನಿಜ ಭವನದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಎಐಡಿಬಿ) ವಿಶೇಷ ಭೂಸ್ವಾಧೀನ ಅಧಿಕಾರಿ– 2 ಅವರ ಕಚೇರಿ ಮೇಲೆ ದಾಳಿ ನಡೆದಿತ್ತು. ಕಚೇರಿ ಸಹಾಯಕ ಸೇರಿದಂತೆ ಏಳು ಮಂದಿಯನ್ನು ಬಂಧಿಸಿ, ₹ 13 ಲಕ್ಷ ನಗದು ಹಾಗೂ ಖಾಲಿ ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಶುಕ್ರವಾರ ದಾಳಿ ಮುಂದಿವರಿಸಿದ ಎಸಿಬಿ ಎಸ್‌.ಪಿ. ಜಿನೇಂದ್ರ ಖನಗಾವಿ ನೇತೃತ್ವದ ಅಧಿಕಾರಿಗಳ ತಂಡ ಏಕಕಾಲಕ್ಕೆ ಪ್ರಕರಣದ ಮಧ್ಯವರ್ತಿಗಳಾದ ಸಿದ್ದಲಿಂಗಪ್ಪನವರ ನೆಲಮಂಗಲ ತಾಲ್ಲೂಕಿನ ಹೊನ್ನೇನಹಳ್ಳಿ ಮನೆ, ರೇಣುಕೇಶ್ವರ ಅವರ ಯಡೇಹಳ್ಳಿಯ ಮನೆ
ಹಾಗೂ ದರ್ಶನ್‌ ಅವರ ದಾಬಸ್‌ಪೇಟೆಯ ಮನೆಗಳನ್ನು ಶೋಧಿಸಿತು.

ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ಕಳೆದುಕೊಂಡಿರುವ ರೈತರು ಪರಿಹಾರಕ್ಕೆ ಕೆಎಐಡಿಬಿಗೆ ಸಲ್ಲಿಸಿರುವ ಅರ್ಜಿಗಳು, ಜಮೀನಿಗೆ ಸಂಬಂಧಿಸಿದ ದಾಖಲೆಗಳು, ಪತ್ರ ವ್ಯವಹಾರಗಳು, ಕಂದಾಯ ನಿರೀಕ್ಷಕರ ವರದಿ, ಖಾಲಿ ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.

ಸೋಂಪುರ ಕೈಗಾರಿಕಾ ಪ್ರದೇಶದ ಜಮೀನುಗಳಿಗೆ ಸಂಬಂಧಿಸಿದಂತೆ ನಡೆದಿರುವ ಹಣಕಾಸು ವ್ಯವಹಾರ ಕುರಿತು ಮಾಹಿತಿ ನೀಡುವಂತೆ ಎಸಿಬಿ ಅಧಿಕಾರಿಗಳು ಬ್ಯಾಂಕಿನ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT