ಶನಿವಾರ, ಅಕ್ಟೋಬರ್ 19, 2019
28 °C

ಎಇಇಗೆ ಸೇರಿದ ಐದು ಕಡೆಗಳ ಮೇಲೆ ಎ.ಸಿ.ಬಿ. ದಾಳಿ

Published:
Updated:
Prajavani

ಹೊಸಪೇಟೆ: ಹೂವಿನಹಡಗಲಿಯ ಪಂಚಾಯತ್‌ ರಾಜ್‌ ಮತ್ತು ಎಂಜಿನಿಯರಿಂಗ್‌ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹನುಮಂತಪ್ಪ ಕಾನಹಳ್ಳಿ ಅವರಿಗೆ ಸೇರಿದ ನಗರದಲ್ಲಿನ ಮನೆ ಸೇರಿದಂತೆ ಐದು ಕಡೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎ.ಸಿ.ಬಿ.) ಅಧಿಕಾರಿಗಳು ಬುಧವಾರ ತಡರಾತ್ರಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಗುರುವಾರ ದಿನವಿಡೀ ದಾಖಲೆಗಳನ್ನು ಪರಿಶೀಲಿಸಿದರು.

ಇಲ್ಲಿನ ಎಂ.ಜೆ. ನಗರದ ಆರನೇ ಕ್ರಾಸ್‌ನಲ್ಲಿರುವ ಮನೆ, ಹೂವಿನಹಡಗಲಿಯ ಅವರ ಕಚೇರಿ, ತಾಲ್ಲೂಕಿನ ನಾಗತಿಬಸಾಪುರದ ಗ್ರಾಮದಲ್ಲಿನ ಅವರ ಮನೆ, ಅದೇ ಗ್ರಾಮದಲ್ಲಿ ಅವರಿಗೆ ಸೇರಿದ ಎಸ್‌.ಕೆ.ಆರ್‌.ಎಚ್‌. ಶಾಲೆ ಮತ್ತು ಸುಮಾ ಕೋ ಆಪರೇಟಿವ್‌ ಬ್ಯಾಂಕಿನ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ, ಪತ್ರಗಳನ್ನು ಪರಿಶೀಲನೆ ನಡೆಸಿದರು.

‘ಎರಡು ಕಡೆ ಮನೆ, ಶಾಲೆ, ಕೋ ಆಪರೇಟಿವ್‌ ಬ್ಯಾಂಕ್‌ ನಡೆಸುತ್ತಿರುವ ಹನುಮಂತಪ್ಪನವರು ನಾಗತಿಬಸಾಪುರದಲ್ಲಿ 40 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಎಂಜಿನಿಯರ್‌ ಆಗಿದ್ದುಕೊಂಡು ಕೋಟ್ಯಂತರ ರೂಪಾಯಿ ಆಸ್ತಿ ಗಳಿಸಿದ್ದಾರೆ. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಕಂಡು ಬಂದಿದೆ. ಸ್ಥಿರಾಸ್ತಿಯ ಲೆಕ್ಕ ಪೂರ್ಣಗೊಂಡಿದೆ. ಚರಾಸ್ಥಿ ವಿವರ ಕಲೆ ಹಾಕಲಾಗುತ್ತಿದೆ’ ಎಂದು ಎ.ಸಿ.ಬಿ. ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಎ.ಸಿ.ಬಿ. ಎಸ್ಪಿ ಜ್ಯೋತಿ ವೈಜನಾಥ, ಡಿ.ವೈ.ಎಸ್ಪಿ. ಚಂದ್ರಕಾಂತ ಪೂಜಾರಿ, ಇನ್‌ಸ್ಪೆಕ್ಟರ್‌ಗಳಾದ ಪ್ರಭುಲಿಂಗಯ್ಯ ಹಿರೇಮಠ, ರವಿಕುಮಾರ ನೇತೃತ್ವದ 20ಕ್ಕೂ ಅಧಿಕ ಸಿಬ್ಬಂದಿ ಒಳಗೊಂಡ ತಂಡ ದಾಳಿಯಲ್ಲಿ ಪಾಲ್ಗೊಂಡಿತು.

Post Comments (+)