ಚಾಲಕನ ಸಮಯ ಪ್ರಜ್ಞೆ:ತ‍‍ಪ್ಪಿದ ಅನಾಹುತ

7
ಪ್ರಯೋಗಾರ್ಥ ಸಂಚಾರ ನಡೆಸುತ್ತಿದ್ದ ಅಪಘಾತ ನಿರ್ವಹಣಾ ರೈಲು

ಚಾಲಕನ ಸಮಯ ಪ್ರಜ್ಞೆ:ತ‍‍ಪ್ಪಿದ ಅನಾಹುತ

Published:
Updated:
Prajavani

ಧಾರವಾಡ: ಲೆವೆಲ್ ಕ್ರಾಸಿಂಗ್ ಬಳಿ ದಾಟುತ್ತಿದ್ದ ಬಸ್ಸಿಗೆ ರೈಲು ಡಿಕ್ಕಿಯಾಗುವುದು ಕೂದಲೆಳೆ ಅಂತರದಿಂದ ಗುರುವಾರ ತಪ್ಪಿದೆ. ಇದರಿಂದಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 30ಕ್ಕೂ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ಶ್ರೀನಗರದ ಲೆವೆಲ್ ಕ್ರಾಸಿಂಗ್‌ (ಸಂಖ್ಯೆ ಎಲ್‌ಸಿ–299) ಬಳಿ ರೈಲ್ವೆ ಗೇಟ್‌ ಹಾಕಿರಲಿಲ್ಲ. ಈ ಕಾರಣದಿಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕ ಮಾಮೂಲಿಯಾಗಿಯೇ ಬಸ್‌ ಓಡಿಸಿಕೊಂಡು ಹೋಗಿದ್ದಾರೆ. ಆದರೆ. ಅದೇ ಸಮಯಕ್ಕೆ ಅಪಘಾತ ನಿರ್ವಹಣಾ ರೈಲು ಬರುತ್ತಿರುವುದು ಅವರ ಕಣ್ಣಿಗೆ ಬಿದ್ದಿದೆ.

ತಕ್ಷಣ ಎಚ್ಚೆತ್ತ ಚಾಲಕ ಬಸ್ ಅನ್ನು ವೇಗವಾಗಿ ಓಡಿಸಿ, ಹಳಿ ದಾಟಿಸಿದ್ದಾರೆ. ತಮ್ಮತ್ತ ಧಾವಿಸುತ್ತಿದ್ದ ರೈಲನ್ನು ಕಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಚೀರಿದರು. ಬಸ್‌ ನೋಡಿದ ಲೊಕೊಪೈಲೆಟ್ ಕೂಡ ಬ್ರೇಕ್ ಹಾಕಿದ್ದರಿಂದ ಭಾರಿ ಶಬ್ದದೊಂದಿಗೆ ರೈಲು ನಿಂತಿತು. ರೈಲು ಡಿಕ್ಕಿಯಿಂದ ಪಾರಾದ ಪ್ರಯಾಣಿಕರು ನಂತರ ನಿಟ್ಟುಸಿರುಬಿಟ್ಟರು.

ನಿಂತ ರೈಲಿನ ಬಳಿ ಧಾವಿಸಿದ ಪ್ರಯಾಣಿಕರು ಲೊಕೊಪೈಲೆಟ್‌ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಂತರ ನೈರುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು.


ಧಾರವಾಡದ ಶ್ರೀನಗರ ವೃತ್ತದ ಬಳಿ ರೈಲು ಡಿಕ್ಕಿಯಿಂದ ಪಾರು ಮಾಡಿದ ಬಸ್ಸಿನ ಚಾಲಕ ಶಬ್ಬೀರ್ ಅವರನ್ನು ಸನ್ಮಾನಿಸಲಾಯಿತು. ನಿರ್ವಾಹಕಿ ದಾಕ್ಷಾಯಿಣಿ ಇದ್ದಾರೆ

ಈ ಕುರಿತು ಶ್ರೀನಗರ ಲೆವೆಲ್ ಕ್ರಾಸಿಂಗ್ ನಿರ್ವಾಹಕ ಮೆಹಬೂಬ್ ಅವರನ್ನು ವಿಚಾರಿಸಿದಾಗ, ರೈಲು ಬರುವ ಯಾವುದೇ ಸೂಚನೆ ಸ್ಟೇಷನ್‌ನಿಂದ ತಮಗೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು. 

ಈ ಕುರಿತಂತೆ ವಿವರಣೆ ನೀಡಿರುವ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ, ‘ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ವರದಿ ನಂತರ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.

ಸಮಯ ಪ್ರಜ್ಞೆಯಿಂದ ಎಲ್ಲರನ್ನೂ ಪಾರು ಮಾಡಿದ ಬಸ್‌ ಚಾಲಕ ಶಬ್ಬೀರ್‌ ಮತ್ತು ನಿರ್ವಾಹಕಿ ದಾಕ್ಷಾಯಿಣಿ ಅವರನ್ನು ಪ್ರಯಾಣಿಕರು ಸನ್ಮಾನಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !