ಯುವತಿಯರಿಗೆ ಕಾರು ಡಿಕ್ಕಿ: ಗೋವಾದ ಶಾಸಕ ಪುತ್ರನ ಬಂಧನ, ಬಿಡುಗಡೆ

7

ಯುವತಿಯರಿಗೆ ಕಾರು ಡಿಕ್ಕಿ: ಗೋವಾದ ಶಾಸಕ ಪುತ್ರನ ಬಂಧನ, ಬಿಡುಗಡೆ

Published:
Updated:

ಬೆಳಗಾವಿ: ಇಲ್ಲಿನ ಗಾಂಧಿನಗರ ಬಳಿ ಹಣ್ಣಿನ ಮಾರುಕಟ್ಟೆ ಎದುರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಯುವತಿಯರಿಗೆ ಕಾರು ಡಿಕ್ಕಿ ಮಾಡಿದ ಆರೋಪದ ಮೇಲೆ, ಗೋವಾದ ಶಾಸಕ ಗಿಲೆನ್ ಟಿಕಲೊ ಪುತ್ರ ಕೈಲ್‌ ಟಿಕ್ಲೊ ಅವರನ್ನು ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ.

‘ಅವರ ವಿರುದ್ಧ ಸೆಕ್ಷನ್ 304 ‘ಎ’ (ಅಜಾಗರೂಕತೆಯಿಂದ ಚಾಲನೆ, ನಿರ್ಲಕ್ಷ್ಯದಿಂದ ಸಾವು) ಪ್ರಕರಣ ದಾಖಲಾಗಿದೆ. ಇದು ಜಾಮೀನುಸಹಿತ ಅಪರಾಧವಾದ್ದರಿಂದ ಠಾಣೆಯಲ್ಲಿಯೇ ಪ್ರಕ್ರಿಯೆ ಪೂರ್ಣಗೊಳಿಸಿ ಬಿಡುಗಡೆ ಮಾಡಲಾಗಿದೆ’ ಎಂದು ಉತ್ತರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಆರ್.ಆರ್. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಅಪಘಾತದಲ್ಲಿ ಯುವತಿ ಮೃತಪಟ್ಟಿದ್ದರು. ಮೂವರು ಯುವತಿಯರು ಗಾಯಗೊಂಡಿದ್ದರು. ರೊಚ್ಚಿಗೆದ್ದ ಸ್ಥಳೀಯರು ಕಾರನ್ನು (ಬಿಎಂಡಬ್ಲ್ಯು) ಕಲ್ಲಿನಿಂದ ಒಡೆದು ಜಖಂಗೊಳಿಸಿದ್ದರು ಹಾಗೂ ಬೆಂಕಿ ಹಚ್ಚಿದ್ದರು. ಕಾರು ಜಖಂಗೊಳಿಸಿದ ಹಾಗೂ ಚಾಲಕ ಟಿಕ್ಲೊ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 15 ಮಂದಿ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳವಾರ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ತೌಫಿಕ್ ಅಬ್ದುಲ್ ಮಜೀದ್ ಸೌದಾಗಾರ, ಮಜರ್‌ ಅಬ್ದುಲ್ ಅಜೀಜ್ ಮಕಾನದಾರ, ಅಬ್ರಾರ್ ಅಹಮದ್ ನದಾಫ್, ಸೈಲಾನ್ ಮಹಮದ್ ಆರೀಫ್ ಬಾಗೇವಾಡಿ, ಅಂಜಲ್ ಫಯಾಜ್ ಇನಾಮದಾರ, ಮಹಮದ್ ಕೈಫ್ ಬಾಗವಾನ್ ಹಾಗೂ ಅಫ್ಜಲ್ ಬಂಧಿತ ಆರೋಪಿಗಳು. ಇವರೆಲ್ಲರೂ ಉಜ್ವಲ ನಗರ ಮತ್ತು ಆಜಾದ್ ನಗರ ನಿವಾಸಿಗಳು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದ್ದಾರೆ.

* ಇದನ್ನೂ ಓದಿ...

ಯುವತಿಯರಿಗೆ ಡಿಕ್ಕಿಯಾಗಿದ್ದಕ್ಕೆ ಆಕ್ರೋಶ: ಬಿಎಂಡಬ್ಲ್ಯು ಕಾರಿಗೆ ಬೆಂಕಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !