ಸೋಮವಾರ, ಜುಲೈ 26, 2021
21 °C

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ: ಮೂವರು ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಒಳಗಾಗಿರುವ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು, ಮಂಗಳವಾರ ಬೆಳಿಗ್ಗೆ ಮೂವರು ಅಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಶೋಧಿಸಿದ್ದಾರೆ.

ಬೆಳಗಾವಿ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಕಚೇರಿ ತನಿಖಾ ದಳ– 3ರ ಸಹಾಯಕ ನಿಯಂತ್ರಕ ಸುಭಾಷ ಸುರೇಂದ್ರ ಉಪ್ಪಾರ, ಬಾಗಲಕೋಟೆ ಭೂ ದಾಖಲೆಗಳ ಉಪನಿರ್ದೇಶಕ ಗೋಪಾಲ ಮಾಲಗತ್ತಿ ಹಾಗೂ ಕಲಬುರ್ಗಿ ಮತ್ತು ಯಾದಗಿರಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ಅವರ ಮನೆ ಮತ್ತು ಕಚೇರಿಗಳನ್ನು ಜಾಲಾಡಲಾಗಿದೆ.

ಬೆಳಗಾವಿ ರುಕ್ಮಿಣಿ ನಗರದ ಉಪ್ಪಾರ ಅವರ ಮನೆ, ಬೆಳಗಾವಿ ಜಿಲ್ಲೆಯ ಬಸವನ ಕುಡಚಿಯಲ್ಲಿರುವ ಸಹೋದರನ ಮನೆ, ಇದೇ ಗ್ರಾಮದಲ್ಲಿರುವ ಅಳಿಯನ ಮನೆ ಹಾಗೂ ಬೆಳಗಾವಿ ಮಾಪನ ಭವನದಲ್ಲಿರುವ ಇವರ ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳು ಹಣ, ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಾಗಿ ಹುಡುಕಾಡಿದ್ದಾರೆ.

ಕೊಪ್ಪಳದ ಜೆ.ಎಚ್‌. ಪಟೇಲ್‌ ನಗರದಲ್ಲಿರುವ ಮಾಲಗತ್ತಿ ಅವರ ಮನೆ, ಬಾಗಲಕೋಟೆ ಅಧಿಕೃತ ವಸತಿ ಗೃಹ, ಬಾಗಲಕೋಟೆ ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿ, ಮಾಲಗತ್ತಿ, ವಿಜಯಪುರ ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿಯ ಪ್ರಭಾರ ಅಧಿಕಾರ ಹೊಂದಿದ್ದು ಅಲ್ಲೂ ತಡಕಾಡಲಾಗಿದೆ.

ಜಗದೇವಪ್ಪ ಅವರ ಕಲಬುರ್ಗಿ ಮತ್ತು ಯಾದಗಿರಿಯ ಕಚೇರಿ, ಕಲಬುರ್ಗಿ ಪೂಜಾ ಕಾಲೋನಿಯ ಮನೆ ಮತ್ತು ಸಿಟಿ ಸ್ಕ್ವೇರ್‌ ಕಾಂಪ್ಲೆಕ್ಸ್‌ನಲ್ಲಿರುವ ಅಂಗಡಿಯನ್ನು ಶೋಧಿಸಲಾಗಿದೆ. ಎಸಿಬಿ ಅಧಿಕಾರಿಗಳನ್ನೊಳಗೊಂಡ ವಿವಿಧ ತಂಡಗಳು ಏಕಕಾಲಕ್ಕೆ ಈ ದಾಳಿ ನಡೆಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು