ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಮಿಸ್ಟ್ರಿಯಲ್ಲಿ ವಿಶ್ವಮನ್ನಣೆ ಗಳಿಸಿದ ಹುಬ್ಬಳ್ಳಿಯ ಯುವ ವಿಜ್ಞಾನಿ

Last Updated 22 ಡಿಸೆಂಬರ್ 2018, 6:18 IST
ಅಕ್ಷರ ಗಾತ್ರ

ಬೆಂಗಳೂರು:ಕನಸನ್ನು ಪ್ರತಿಯೊಬ್ಬರು ಕಾಣುತ್ತಾರೆ. ಅದರ ಬೆನ್ನಟ್ಟಿ ಸಾಧಿಸಿ ಜಯಗಳಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರವೇ. ಹುಬ್ಬಳ್ಳಿಯ ಡಾ. ಜ್ಯೋತಿ ಚನ್ನಪ್ಪ ಅಬ್ಬಾರ ಕನಸಿನ ಹಾದಿಯಲ್ಲಿ ಎದುರಾದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಜನಮನ್ನಣೆ ಗಳಿಸಿದ್ದಾರೆ. ಇವರು ನಡೆಸುತ್ತಿರುವ ಸಂಶೋಧನೆಗಳು, ಸಂಶೋಧನಾ ಪ್ರಬಂಧಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ‌ರಾಷ್ಟ್ರಮಟ್ಟದಲ್ಲಿ ನಾಲ್ಕು ಪ್ರಶಸ್ತಿಗಳು ಇವರಿಗೆ ಒಲಿದಿವೆ.

ಇತ್ತೀಚಿಗೆ ಸುರತ್ಕಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ರಸಾಯನಶಾಸ್ತ್ರ ವಿಭಾಗದ ವಿಜ್ಞಾನಿಗಳ ಮತ್ತು ಸಂಶೋಧಕರ 37ನೇ ವಾರ್ಷಿಕ ಸಮ್ಮೇಳನದಲ್ಲಿಇವರುಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪ್ರತಿಷ್ಠಿತ ಇಂಡಿಯನ್‌ ಕೌನ್ಸಿಲ್‌ ಆಫ್‌ ಕೆಮಿಸ್ಟ್ಸ್ಸಂಸ್ಥೆ ನೀಡುವ ಡಾ. ರಂಜಿತ್ ಕುಮಾರ್‌ ಯುವ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.

ಈ ಸಮ್ಮೇಳನದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಸಂಶೋಧನಾ ವಿದ್ಯಾರ್ಥಿಗಳು, ವಿಜ್ಞಾನಿಗಳು ಸೇರಿದಂತೆ 250 ಜನ ಭಾಗವಹಿಸಿದ್ದರು.ರಸಾಯನಶಾಸ್ತ್ರದಲ್ಲಿ ಉತ್ತಮ ಸಂಶೋಧನೆ ಮಾಡಿರುವ ಯುವ ವಿಜ್ಞಾನಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಮೊದಲ ವರ್ಷದ ಪ್ರಶಸ್ತಿ ಜ್ಯೋತಿ ಅವರಿಗೆ ಒಲಿದಿದೆ. ಹುಬ್ಬಳ್ಳಿಯ ವಿದ್ಯಾನಗರದವರಾದಜ್ಯೋತಿ ಅವರು ಪ್ರಸ್ತುತ ಬೆಂಗಳೂರಿನ ‘ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌‘ನ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2010ರಲ್ಲಿ ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ನಡೆದ ಇಂಡಿಯನ್‌ ಕೌನ್ಸಿಲ್‌ ಆಫ್‌ ಕೆಮಿಸ್ಟ್ರಿ ರಾಷ್ಟ್ರೀಯ ಸಮ್ಮೇಳನದಲ್ಲಿ ಭೌತರಸಾಯನ ಶಾಸ್ತ್ರ ಮತ್ತು2012ರಲ್ಲಿ ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನಾ ಸಮ್ಮೇಳನದಲ್ಲಿ ಇವರು ಮಂಡಿಸಿದ ವಿಶ್ಲೇಷಣಾತ್ಮಕ ಪರಿಸರ ರಸಾಯನಶಾಸ್ತ್ರ ಸಂಶೋಧನಾ ಪ್ರಬಂಧಕ್ಕೆ ‘ಯುವ ವಿಜ್ಞಾನಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.2017ರಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ವಿಶ್ವವಿದ್ಯಾಲಯದಲ್ಲಿ ನಡೆದ ಸಮ್ಮೇಳನದಲ್ಲಿ ಭೌತರಸಾಯನ ಶಾಸ್ತ್ರದಲ್ಲಿ ಮಂಡಿಸಿದ ಪ್ರಬಂಧಕ್ಕೆ ಎಚ್‌.ಜೆ. ಅರ್ನಿಕರ್ ಪ್ರಶಸ್ತಿಯೂ ಒಲಿದಿದೆ.

ಈವರೆಗೆ ಇವರ 21 ಸಂಶೋಧನಾ ಪ್ರಬಂಧಗಳು ಅಂತರರಾಷ್ಟ್ರೀಯ ನಿಯತಕಾಲಿಕೆಗಳಾದಎಲ್ಸೆವಿಯರ್,ಸ್ಪ್ರಿಂಗರ್, ಎಸಿಎಸ್‌ಗಳಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ ಏಳು ಪ್ರಬಂಧಗಳು ಎಚ್ ಇಂಡೆಕ್ಸ್‌ ಆಗಿದೆ (ಏಳು ಬಾರಿ ಉಲ್ಲೇಖಗೊಂಡಿವೆ).

ವಿದ್ಯಾಭ್ಯಾಸ:ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನುಹುಬ್ಬಳಿಯಲ್ಲಿ ಮುಗಿಸಿದ ಜ್ಯೋತಿ ಧಾರವಾಡದ ಜೆಎಸ್‌ಎಸ್‌ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡರು. ಪದವಿಯಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರಸಾಯನಶಾಸ್ತ್ರ ಎಂ.ಎಸ್‌ಸಿ ಮಾಡಿದ್ದು, ಭೌತರಸಾಯನಶಾಸ್ತ್ರದಲ್ಲಿ ಮೂರನೇ ಸ್ಥಾನಗಳಿಸಿದ್ದಾರೆ.

ಪ್ರೊಪೆಸರ್‌ ಫಾರ್‌ಲೈಫ್‌ ಎಂದುಕರ್ನಾಟಕ ವಿಶ್ವವಿದ್ಯಾಲಯದಿಂದ ಗುರುತಿಸಿರುವ (ನಿವೃತ್ತಿ ನಂತರವು ಸಂಶೋಧನೆ ಮಾಡುವ ಅವಕಾಶ) ಹೊಂದಿರುವಪ್ರೊ. ಶರಣಪ್ಪ ನಂದಿಬೇವೂರ್‌ ಅವರ ಮಾರ್ಗದರ್ಶನದಲ್ಲಿ 2012ರಲ್ಲಿ ಭೌತರಸಾಯನಶಾಸ್ತ್ರ ಮತ್ತು ವಿಶ್ಲೇಷಣಾತ್ಮಕ ರಸಾಯನಶಾಸ್ತ್ರದಲ್ಲಿ ಪಿ.ಎಚ್‌ಡಿ ಮಾಡಿದ್ದಾರೆ. ಡಾಕ್ಟರೇಟ್‌ ಮಾಡುವ ಸಮಯದಲ್ಲಿ ಯುಜಿಸಿಯಿಂದ ರಿಸರ್ಚ್‌ ಫಾಲೋ ಶಿಪ್ ಸಹ ಗಳಿಸಿದ್ದರು.

ಬೆಳ‌ಗಾವಿಯಲ್ಲಿ ಗೋಗಟೆ ಇನ್‌ಸ್ಟಿಟಿಟ್ಯೂಟ್‌ ಆಫ್‌ ಟೆಕ್ನಾಲಜಿನಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಮೂರು ವರ್ಷ ಕೆಲಸ ಮಾಡಿದ ಅನುಭವವು ಇವರಿಗಿದೆ.ಸೆಲ್ ಫೋನ್‌, ಲ್ಯಾಪ್‌ಟಾಪ್, ಕಂಪ್ಯೂಟರ್‌ ಮುಂತಾದ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸಬಹುದಾದ ಬ್ಯಾಟರಿಗಳ ಬಗ್ಗೆ ಸಹ ಇವರು ಸಂಶೋಧನೆ ನಡೆಸುತ್ತಿದ್ದಾರೆ.

ನ್ಯಾನೊ ಪದಾರ್ಥಗಳ ಬಳಕೆಯಿಂದ ಬಯೋ ಸೆನ್ಸ್‌ರ್‌ಗಳನ್ನು ತಯಾರಿಸಿಕೊಂಡು, ಅವುಗಳ ಸಹಾಯದಿಂದ ಜೈವಿಕ ಅಣುಗಳ ಮೇಲೆ ವಿದ್ಯುದ್ರಾಸಾಯನಿಕ ಅಧ್ಯಯನ ಮಾಡಿ, ಜೈವಿಕ ದ್ರವಗಳಲ್ಲಿ ಜೈವಿಕ ಅಣುಗಳ ಪತ್ತೆಹಚ್ಚುವಿಕೆ, ಅದರ ಪರಿಣಾಮಗಳ ಸಂಶೋಧನೆಯಲ್ಲಿ ಸಹ ಸಕ್ರಿಯರಾಗಿದ್ದಾರೆ.

ಇಷ್ಟೆಲ್ಲ ಸಾಧನೆಗೆ ಪ್ರೇರಣೆ ಎನು ಎಂದು ಜ್ಯೋತಿಯವರನ್ನು ಪ್ರಶ್ನಿಸಿದರೆ ಅವರು ಉತ್ತರಿಸುವುದು ಹೀಗೆ, ‘ಈ ಕ್ಷೇತ್ರದಲ್ಲಿರುವ ಅಪಾರ ನಿರೀಕ್ಷೆಯೇ ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಿದೆ. ಸಂಶೋಧನಾ ಕ್ಷೇತ್ರ ಎಷ್ಟು ನಿರೀಕ್ಷೆ ಮಾಡುತ್ತದೆಯೊ ಅದಕ್ಕಿಂತ ಹೆಚ್ಚು ನೀಡಬೇಕು ಎನ್ನುವುದು ನನ್ನ ಅಪೇಕ್ಷೆ’ ಎನ್ನುತ್ತಾರೆ.

ಬೆಂಗಳೂರಿನ ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆಡಳಿತ ಮಂಡಳಿಯು ಸೆಂಟರ್‌ ಫರ್‌ ಕ್ಯೂರೈಡ್ಸ್‌ (QRIDES) ಎನ್ನುವ ವಿಭಾಗ ಆರಂಭಿಸಿದೆ. ಕ್ಯೂರೈಡ್ಸ್‌ನಲ್ಲಿ ವಿವಿಧ ವಿಭಾಗದ 18 ಸಂಶೋಧಕರು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಇದರ ಮುಖ್ಯ ಉದ್ದೇಶ ಕೇವಲ ಸಂಶೋಧನೆಗೆ ಸೀಮಿತವಾಗದೆ, ಸಮಾಜಕ್ಕೆ ಉಪಯೋಗವಾಗಬೇಕು ಮತ್ತು ಕಾರ್ಯರೂಪಕ್ಕೆ ತರುವ ಉದ್ದೇಶವನ್ನು ಹೊಂದಿದೆ.

ಸ್ಮಾರ್ಟ್‌ ಟ್ವಿನ್‌ ಬಿನ್‌

ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ಒಂದು ಕಡೆ ಹಾಕಿದರೆ, ಹಸಿ ತ್ಯಾಜ್ಯ ಒಂದು ಡಬ್ಬಿಗೆ ಒಣ ತ್ಯಾಜ್ಯ ಒಂದು ಡಬ್ಬಿಗೆ ಬೀಳುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದು, ಈ ಸಂಶೋಧನೆ ಒಂದು ಹಂತಕ್ಕೆ ಯಶಸ್ವಿಯಾಗಿದೆ. ಹಸಿ ಮತ್ತು ಒಣ ತ್ಯಾಜ್ಯವನ್ನು ಈ ಯಂತ್ರ ಗುರುತಿಸಿ ಬೇರೆ, ಬೇರೆ ಡಬ್ಬಿಗೆ ಹಾಕುತ್ತದೆ. ಆದರೆ, ಹಸಿ ಮತ್ತು ಒಣ ತ್ಯಾಜ್ಯವನ್ನು ಒಟ್ಟಿಗೆ ಹಾಕಿದರೆ ಇದು ಬೇರ್ಪಡಿಸುವುದಿಲ್ಲ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯುತ್ತಿದೆ ಎನ್ನುತ್ತಾರೆ ಜ್ಯೋತಿ.

ಕ್ಯೂರೈಡ್ಸ್‌ ತಂಡದಲ್ಲಿರುವ ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರೊ. ಸೂರಜ್‌, ಮೆಕ್ಯಾನಿಕ್ಸ್‌ ವಿಭಾಗದ ಪ್ರೊ. ಮುರಳಿ ಮತ್ತು ವಿಜ್ಞಾನ ವಿಭಾಗದಿಂದ ಜ್ಯೋತಿ ಮೂವರು ಸೇರಿ ಈ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಂಶೋಧನೆಗೆ ಪೇಟೆಂಟ್‌ ಸಹ ಸಿಕ್ಕಿದೆ.

‘ಈ ಸಂಶೋಧನೆಗೆ ಉಪಪ್ರಾಂಶುಪಾಲರು ಮತ್ತುಸೆಂಟರ್‌ ಫರ್‌ ಕ್ಯೂರೈಡ್ಸ್‌ನ ಮುಖ್ಯಸ್ಥರಾಗಿರುವ ಡಾ. ನಾಗೇಶ್ವರ್‌ ಗುಪ್ತಾ ಅವರ ಅಪಾರ ಬೆಂಬಲವೇ ಕಾರಣ ಪೂರ್ಣ ಪ್ರಮಾಣದಲ್ಲಿ ಇದು ಯಶಸ್ವಿಯಾದರೆ ಕಸಸ ಸಮಸ್ಯಗೆ ದೊಡ್ಡ ಮಟ್ಟದಲ್ಲಿ ಪರಿಹಾರ ಸಿಗಲಿದೆ’ ಎನ್ನುತ್ತಾರೆ ಜ್ಯೋತಿ.

‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ನಲ್ಲಿ ಎಸ್‌ಎಸ್‌ಸಿಯು ಯೂನಿಟ್‌ನ ಮುಖ್ಯಸ್ಥ ಮತ್ತು ಪ್ರೊಪೆಸರ್‌ ಆಗಿರುವ ಡಾ. ಅನಿಂದಾ ಜೆ ಭಟ್ಟಾಚಾರ್ಯ ಅವರ ಮಾರ್ಗದರ್ಶನದಲ್ಲಿ ಬ್ಯಾಟರಿಯಲ್ಲಿ ಬಳಸುವ ಲಿಥಿಯಂಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುವ ರಾಸಾಯಿನಿಕದ ಬಗ್ಗೆ ಸಂಶೋಧನೆ ಮಾಡಲು ಸಹ ಅವಕಾಶ ಸಿಕ್ಕದೆ’ ಎಂದು ಸಂತೋಷ ಹಂಚಿಕೊಳ್ಳುತ್ತಾರೆ.

‘ಈ ಕ್ಷೇತ್ರದಲ್ಲಿ ಇಷ್ಟು ದೂರ ಕ್ರಮಿಸಿರುವುದಕ್ಕೆ ನನ್ನ ತಂದೆಚನಪ್ಪ ಬಾಳಪ್ಪ ಅಬ್ಬಾರ, ತಾಯಿ ನಾಗರತ್ನ ಚನಪ್ಪ ಅಬ್ಬಾರ ಮತ್ತು ಪತಿ ಕುಮಾರ್‌ ಗೌಡ ಚಾಗಿ ಅವರ ಬೆಂಬಲ ಹಾಗೇ ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಶಿಧರ್ ಮುನಿಯಪ್ಪ, ಪ್ರಾಂಶುಪಾಲರಾದಡಾ. ಸುರೇಶ ಅವರ ಅಪಾರ ಸಹಕಾರವೇ ಕಾರಣ’ ಎಂದು ಸ್ಮರಿಸುತ್ತಾರೆ ಯುವ ವಿಜ್ಞಾನಿ ಜ್ಯೋತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT