ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್ ಹತ್ಯೆ ನನ್ನನ್ನು ರಾಜಕಾರಣಕ್ಕೆ ಬರುವಂತೆ ಮಾಡಿದೆ: ಪ್ರಕಾಶ್ ರೈ

Last Updated 18 ಜನವರಿ 2019, 8:16 IST
ಅಕ್ಷರ ಗಾತ್ರ

ಬೆಂಗಳೂರು: ‘ಬೇಕಿದ್ದರೆ ಕಾಂಗ್ರೆಸ್‌ ನನಗೆ ಬೆಂಬಲ ಘೋಷಿಸಲಿ.ನನಗಂತೂ ಯಾವ ಪಕ್ಷದಿಂದಲೂಸ್ಪರ್ಧಿಸುವ ಬಯಕೆ ಇಲ್ಲ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ (ರೈ) ಹೇಳಿದರು.

‘ನನ್ನ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ ಸೇರಿದಂತೆ ನನ್ನ ಬದುಕಿನ ಬೇರುಗಳೆಲ್ಲಾ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಇವೆ. ಹೀಗಾಗಿಇಲ್ಲಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’ ಎಂದು ಪ್ರಕಟಿಸಿದರು.

ಈ ಕುರಿತಂತೆ ತಮ್ಮ ಮುಂದಿನ ಕಾರ್ಯ ಯೋಜನೆಗಳು, ಸ್ಪರ್ಧಿಸುತ್ತಿರುವುದು ಏಕೆ ಎಂಬ ವಿವರಗಳನ್ನು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು.

‘ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ವಾಸ್ತವ ಏನು ಎಂಬುದನ್ನು ಸ್ಪಷ್ಟವಾಗಿ ತಿಳಿದೇ ಹೆಜ್ಜೆ ಇರಿಸುತ್ತಿದ್ದೇನೆ. ಮುಂದಿನ ಹದಿನೈದು ದಿನಗಳಲ್ಲಿ ಜಬರ್‌ದಸ್ತ್ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇನೆ. ಇದೇ 20ರಿಂದ ಕ್ಷೇತ್ರದಲ್ಲಿ ಅಭಿಯಾನ ಶುರು ಮಾಡಲಿದ್ದೇನೆ’ ಎಂದೂ ಅವರು ತಿಳಿಸಿದರು.

‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನನ್ನನ್ನು ರಾಜಕಾರಣಕ್ಕೆ ಪ್ರವೇಶಿಸುವಂತೆ ಮಾಡಿದೆ.ದೇಶದಲ್ಲಿ ಈಗ ಮತೀಯ ರಾಜಕಾರಣದ ಆತಂಕ ಕಾಣಿಸಿದೆ. ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಏನಾಗುತ್ತಿದೆ ಎಂಬುದೇ ಗೊತ್ತಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಬೆಂಗಳೂರು ಕೇಂದ್ರ ಕ್ಷೇತ್ರ ಅಲ್ಪಸಂಖ್ಯಾತರ ಮತಗಳು ಹೆಚ್ಚಿರುವ ಕ್ಷೇತ್ರ. ಇಲ್ಲಿ ನಿಮ್ಮ ಸ್ಪರ್ಧೆಯಿಂದ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿಗೆ ಲಾಭ ಮಾಡಿಕೊಡುತ್ತದೆಯಲ್ಲವೇ’ ಎಂಬ ಪ್ರಶ್ನೆಗೆ, ‘ಹಾಗೇನೂ ಇಲ್ಲ. ಬೇಕಿದ್ದರೆ ಕಾಂಗ್ರೆಸ್‌ನವರು ಬಂದು ಸಪೋರ್ಟ್ ಮಾಡಲಿ’ ಎಂದರು‌.

‘ಚುನಾವಣೆಯಲ್ಲಿ ಗೆದ್ದರೆ ಬಿಜೆಪಿ ವಿರೋಧದ ಮಹಾಘಟಬಂಧನ್ ಭಾಗವಾಗುತ್ತೀರ’ ಎಂಬ ಪ್ರಶ್ನೆಗೆ, ‘ನಾನ್ಯಾಕೆ ಪಕ್ಷ ಸೇರಬೇಕು, ಸ್ವತಂತ್ರವಾಗಿಯೇ ಇರುತ್ತೇನೆ. ನನ್ನ ಸ್ವಂತಿಕೆ ಬಿಟ್ಟು ಕೊಡುವುದಿಲ್ಲ. ಪ್ರಯಾಣ ಶುರು ಮಾಡಿದ್ದೇನೆ. ಎಲ್ಲಿಗೆ ಹೋಗುತ್ತೊ ಗೊತ್ತಿಲ್ಲ’ ಎಂದರು.

‘ದುಡ್ಡು, ಜಾತಿ ಲೆಕ್ಕಾಚಾರದ ಮೇಲೆ ಎಷ್ಟು ದಿವಸ ರಾಜಕಾರಣ‌ ಮಾಡುತ್ತೀರ’ ಎಂದು ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಒಬ್ಬ ಸಂಸದ ₹ 50-60 ಕೋಟಿ ಖರ್ಚು ಮಾಡಿ ಚುನಾವಣೆ ಗೆಲ್ಲುತ್ತಾನೆ ಎಂದರೆ ಏನರ್ಥ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಹೇಗಿವೆ, ಕೊಳಚೆ ಪ್ರದೇಶದ ನಿವಾಸಿಗಳು ಹೇಗೆ ಬದುಕುತ್ತಿದ್ದಾರೆ ಎಂದು ಇಲ್ಲಿನ ಸಂಸದ ಎಂದಾದರೂ ಗಮನಿಸಿದ್ದಾರೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ನಾನು ಹಿಂದೂ ವಿರೋಧಿ ಅಲ್ಲ, ಮುಸ್ಲಿಂ ವಿರೋಧಿ ಅಲ್ಲ, ಕ್ರಿಶ್ಚಿಯನ್ ವಿರೋಧಿ ಅಲ್ಲ. ಯಾವ ಪಕ್ಷವೇ ಅಗಲಿ ಮತೀಯ ಹೆಸರಿನಲ್ಲಿ ರಾಜಕಾರಣ ಮಾಡುವುದು ತಪ್ಪು. ಈ ರೀತಿ ಮತೀಯವಾದದ ಹೆಸರಿನಲ್ಲಿ ರಾಜಕಾರಣ ಮಾಡುವವರ ಮತ್ತು ಕೋಮುವಾದದ ವಿರೋಧಿ ನಾನು’ ಎಂದು ಅವರು ಸ್ಪಷ್ಟಪಡಿಸಿದರು.

‘ಇದು ಮತ್ತೊಬ್ಬರನ್ನು ಬೈದು ರಾಜಕಾರಣ ಮಾಡುವ ಸಮಯವಲ್ಲ. ಈ ದೇಶದಲ್ಲಿ ಎಲ್ಲರೂ ಕಳ್ಳರು ಸುಳ್ಳರಾಗಿದ್ದಾರೆ. ನನಗೆ ಪಕ್ಷದ ದೃಷ್ಟಿಯಿಲ್ಲ. ಪ್ರಜೆಗಳ ದೃಷ್ಟಿಯಿಂದ ರಾಜಕಾರಣ ಮಾಡಲು ಇಚ್ಛಿಸಿದ್ದೇನೆ’ ಎಂದರು.

ದೊಂಬರಾಟ: ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಆಪರೇಷನ್ ಕಮಲ ಒಂದು ದೊಂಬರಾಟವಾಗಿದೆ. ಇವರಿಗೆಲ್ಲಾ ನಾಚಿಕೆ ಅಗಬೇಕು. ಮಾನ ಮರ್ಯಾದೆ ಬೇಡ್ವಾ’ ಎಂದು ಕಿಡಿಕಾರಿದರು.

‘ಇವರಿಗೂ ಬುದ್ದಿ ಇಲ್ಲ, ಅವರಿಗೂ ಬುದ್ದಿ ಇಲ್ಲ. ಜನರ ಕೆಲಸ ಮಾಡೋದು ಬಿಟ್ಟು ಇಂತಹ ದೊಂಬರಾಟದಲ್ಲಿ ತೊಡಗಿದ್ದಾರೆ. ಎಲ್ಲೀವರೆಗೂ ನಡೆಯುತ್ತೊ ನೋಡೋಣ’ ಎಂದರು.

‘ಗೋ ಮಾತೆ, ಗೋ ಮಾತೆ ಎಂದು ಬೊಬ್ಬಿರಿಯುವ ಬಿಜೆಪಿಯವರು, ಸಂಕ್ರಾಂತಿ ದಿನ ಗೋ ಪೂಜೆ ಮಾಡುವುದನ್ನು ಬಿಟ್ಟು ಪಂಚತಾರಾ ರೆಸಾರ್ಟ್‌ನಲ್ಲಿ ಬಿಡಾರ ಹೂಡಿದ್ದರು. ಇದೇನಾ ಇವರ ಗೋ ಕಾಳಜಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT