ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ- ಬರಹಗಾರ ಬದುಕಿನ ಅವಿನಾಭಾವ ಸಂಬಂಧ!

Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ಧಾರವಾಡದ ಡಾ.ಗಿರಡ್ಡಿ ಗೋವಿಂದರಾಜ (1938- 2018) ನಿಧನರಾಗಿದ್ದು, ಕನ್ನಡ ಸಾರಸ್ವತ ಲೋಕಕ್ಕೆ ಅಗಾಧ ನೋವನ್ನುಂಟುಮಾಡಿದೆ. ಕನ್ನಡದ ಶ್ರೇಷ್ಠ ವಿದ್ವಾಂಸ- ಶಿಕ್ಷಕರ ಸಾಲಿಗೆ ಸೇರಿರುವ ಗಿರಡ್ಡಿಯವರು ನೇರ ನುಡಿಯ ವಿಮರ್ಶಕನಾಗಿ, ಸಂಕ್ರಮಣ ಪತ್ರಿಕೆಯ ಬೌದ್ಧಿಕ ಪಾಲುದಾರನಾಗಿ, ಧಾರವಾಡ ಸಾಹಿತ್ಯ ಸಂಭ್ರಮದ ರೂವಾರಿಯಾಗಿ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಸಂಸ್ಕೃತಿಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಇಂತಹ ವ್ಯಕ್ತಿಗೆ ಸಾರ್ವಜನಿಕ ಭಾಷಣ ಮತ್ತು ಬರವಣಿಗೆಗಳ ಮೂಲಕ ನಮ್ಮ ಅಕ್ಷರಲೋಕ ತನ್ನ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

ಗಿರಡ್ಡಿಯವರ ಸಾಧನೆಗಳನ್ನು ಗುರುತಿಸಿ, ಗೌರವ ಸೂಚಿಸುವ ಶ್ರದ್ಧಾಂಜಲಿಗಳು ಅವರನ್ನು ಕೇವಲ ಒಬ್ಬ ಲೇಖಕ, ಸಾಂಸ್ಕೃತಿಕ ವೇದಿಕೆಗಳ ಸಂಘಟಕ ಅಥವಾ ತಮ್ಮ ಜೊತೆ ಒಡನಾಟವಿಟ್ಟುಕೊಂಡ ಸಾಹಿತಿಯನ್ನಾಗಿ ಚಿತ್ರಿಸುತ್ತವೆ. ಇದು ಸಹಜವೂ ಮತ್ತು ಸಮಂಜಸವೂ ಇರಬಹುದು. ಆದರೆ, ಗಿರಡ್ಡಿ ಒಬ್ಬ ಮಾಸ್ತರರಾಗಿ ಹಲವು ಪೀಳಿಗೆಗಳ ಮೇಲೆ ಬೀರಿದ ಪ್ರಭಾವವನ್ನು ಈ ನಿರೂಪಣೆಗಳು ಗುರುತಿಸುವುದಿಲ್ಲ. ಇದು ಸಾಮಾನ್ಯವಾಗಿ ಇನ್ನುಳಿದ ಶಿಕ್ಷಕ- ಬರಹಗಾರ ವಿಷಯದಲ್ಲಿಯೂ ಹಾಗೆಯೇ.

ಇವರ ಬರವಣಿಗೆಗಳೇ ಸಾರ್ವಜನಿಕ ಬದುಕಿನಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಮಾಡಿರುವುದು ನಿಜ. ಆದರೆ, ಇಂಥವರ ಶೈಕ್ಷಣಿಕ ವೃತ್ತಿ ಅವರ ಬರವಣಿಗೆಯನ್ನೂ, ಮತ್ತೆ ಇತರ ತಲೆಮಾರುಗಳನ್ನೂ ರೂಪಿಸಿರುತ್ತದೆಂಬುದನ್ನು ಮರೆಯುವಂತಿಲ್ಲ. ಹಾಗಾಗಿ ನಾನಿಲ್ಲಿ ಗಿರಡ್ಡಿ ಗೋವಿಂದರಾಜರನ್ನು ಒಬ್ಬ ಮಾಸ್ತರರನ್ನಾಗಿ ನೋಡುತ್ತೇನೆ. ಇದು ಅವರ ಅಧ್ಯಾಪನ ವೃತ್ತಿ ಮತ್ತು ಅವರ ಬರವಣಿಗೆಯ ಬದುಕಿಗೂ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಸಣ್ಣ ಪ್ರಯತ್ನವೂ ಹೌದು.

ವಿಶ್ವವಿದ್ಯಾಲಯದಲ್ಲಿ, ಅದರಲ್ಲೂ ಮಾನವಿಕ ಶಿಸ್ತುಗಳಲ್ಲಿ ಪ್ರಾಮುಖ್ಯ ಪಡೆದಿರುವ ಇಂಗ್ಲಿಷ್ ಅಧ್ಯಯನದ ಮಾಸ್ತರರಾಗಿ ಗಿರಡ್ಡಿಯವರ ಶೈಕ್ಷಣಿಕ ಬದುಕಿಗೆ ದೊಡ್ಡ ಪರಂಪರೆಯ ಹಿನ್ನೆಲೆಯೇ ಇದೆ. ಅದು ಆಧುನಿಕ ಕನ್ನಡ ಬೌದ್ಧಿಕ ಜಗತ್ತನ್ನು ನಿರ್ಮಿಸಿದ ಇಂಗ್ಲಿಷ್ ಅಧ್ಯಾಪಕರ ಪಡೆ. ಇಂಗ್ಲಿಷ್ ಪ್ರಾಧ್ಯಾಪಕರಾದ ವಿಜಯಪುರದ ಜಿ.ಬಿ. ಸಜ್ಜನರ ಅಭಿನಂದನ ಗ್ರಂಥವಾದ ‘ಹೆಜ್ಜೇನು’ ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್ ಪ್ರಾಧ್ಯಾಪಕರ ಕೊಡುಗೆಯನ್ನು ದಾಖಲಿಸುತ್ತದೆ.

ಬಿ.ಎಂ.ಶ್ರೀ ಅವರಿಂದ ಪ್ರಾರಂಭವಾಗುವ ಈ ಪರಂಪರೆಯಲ್ಲಿ ಎಸ್.ವಿ. ರಂಗಣ್ಣ, ವಿ.ಕೃ. ಗೋಕಾಕ, ಯು.ಆರ್‌. ಅನಂತಮೂರ್ತಿ, ಪಿ. ಲಂಕೇಶ, ಜಿ.ಎಸ್‌. ಆಮೂರ, ಕೀರ್ತಿನಾಥ ಕುರ್ತಕೋಟಿ, ಸಿ.ಎನ್‌.ಆರ್, ಚಂಪಾ, ಚೆನ್ನಿ, ಓ.ಎಲ್‌.ಎನ್ ಮುಂತಾದವರನ್ನೊಳಗೊಂಡಂತೆ ಸುಮಾರು 30ಕ್ಕೂ ಹೆಚ್ಚಿನ ಹೆಸರುಗಳಿವೆ.

‘ಹೆಜ್ಜೇನು’ ಗ್ರಂಥದ ಮೊದಲ ಲೇಖನ

ಬಿ.ಎಂ.ಶ್ರೀ ಅವರನ್ನು ಕುರಿತು ಗಿರಡ್ಡಿಯವರೇ ಬರೆದಿದ್ದಾರೆ. ಪಶ್ಚಿಮ ವಿಚಾರಧಾರೆಯಿಂದ ಕನ್ನಡವನ್ನು ಕಟ್ಟಲು ಪ್ರಯತ್ನಿಸಿದ ಈ ಕುಲಪುರೋಹಿತರ ಕೆಲಸದ ಮಿತಿಗಳು ಏನೇ ಇರಬಹುದು. ಇವರು ನಮ್ಮ ಬೌದ್ಧಿಕ ಪ್ರಜ್ಞೆಯನ್ನು ರೂಪಿಸುವಲ್ಲಿ ಮೀಸಲಿಟ್ಟ ಶ್ರಮವನ್ನು ಅಲ್ಲಗಳೆಯುವಂತಿಲ್ಲ! ಇನ್ನುಳಿದ ಜ್ಞಾನ ಶಿಸ್ತುಗಳಲ್ಲಿ ಕಾಣಲಾಗದ ಈ ಅಪರೂಪದ ಪ್ರಜ್ಞೆ ಇಂಗ್ಲಿಷ್ ಶಿಕ್ಷಕರಲ್ಲಿ ಕಾಣುತ್ತೇವೆ.

ಈ ವಿದ್ಯಮಾನದಲ್ಲಿ ಗುರುತಿಸಬಹುದಾದ ಇನ್ನೊಂದು ಅಂಶವೆಂದರೆ ಇಲ್ಲಿಯ ಬರಹಗಾರರ ಶಿಕ್ಷಕ ವೃತ್ತಿ, ಅವರ ಸಾಹಿತ್ಯ ಬರವಣಿಗೆಯನ್ನು ರೂಪಿಸಿದ್ದು ಮತ್ತು ಅವರ ಸಾಹಿತ್ಯ ಕೃಷಿ ಅವರ ಶೈಕ್ಷಣಿಕ ವೃತ್ತಿಯನ್ನು ಪ್ರಭಾವಿಸಿದ್ದು. ಈ ನಿಟ್ಟಿನಲ್ಲಿ ಬರವಣಿಗೆಯ ಬದುಕು ಮತ್ತು ಶಿಕ್ಷಕ ವೃತ್ತಿಯ ಕೊಡುಕೊಳ್ಳುವಿಕೆಯ ಕುರಿತು ಆಳವಾದ ಅಧ್ಯಯನಗಳು ಇನ್ನೂ ನಡೆಯಬೇಕಾಗಿವೆ. ಗಿರಡ್ಡಿಯವರ ಕುರಿತು ಈಗ ಬರೆಯುವುದೆಂದರೆ ಈ ವಿಷಯದ ಕುರಿತು ಯೋಚಿಸುವುದು ಎಂದು ಭಾವಿಸುವೆ.

ಇದಕ್ಕೆ ಒಂದು ಮುನ್ನೆಲೆಯೂ ಇದೆ. ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಲೋಕಗಳು ಇಂದಿನ ವಾಟ್ಸ್‌ಆ್ಯಪ್‌ ಯುಗದಲ್ಲಿ ಎದುರಿಸುತ್ತಿರುವ ಬಿಕ್ಕಟ್ಟುಗಳ ಮಧ್ಯೆ ಈಗಿನ ಶಿಕ್ಷಕ ಪೀಳಿಗೆ, ವಿಶೇಷವಾಗಿ ಸಾಹಿತ್ಯ ಮತ್ತು ಭಾಷಾ ಶಿಕ್ಷಕರ ಪಡೆ, ತಮ್ಮ ಬೌದ್ಧಿಕ ಜಗತ್ತನ್ನು ಹೇಗೆ ನಿರ್ಮಿಸಿಕೊಳ್ಳಬೇಕು ಎಂಬುದು ಒಂದು ದೊಡ್ಡ ಸವಾಲು. ಇಂತಹ ಸಂದರ್ಭದಲ್ಲಿ ಗಿರಡ್ಡಿ ಮಾದರಿ ಮತ್ತು ಈ ಮೇಲೆ ವಿಶದೀಕರಿಸಿದ ಶಿಕ್ಷಕ- ಬರಹಗಾರರ ಪರಂಪರೆಯನ್ನು ಪುನರ್‌ಮೌಲ್ಯೀಕರಣ ಮಾಡುವುದರಿಂದ ನಾವು ಕಲಿಯುವುದು ಸಾಕಷ್ಟಿದೆ ಎನಿಸುತ್ತದೆ.

ಗಿರಡ್ಡಿಯಂಥವರನ್ನು ಯಥಾವತ್ತಾಗಿ ನಕಲು ಮಾಡುವುದಲ್ಲ! ಈಗಾಗಲೇ, ಘಟಿಸಿದ ಈ ಶೈಕ್ಷಣಿಕ ಪರಂಪರೆಯೆ ಹಿರಿಮೆ ಮತ್ತು ಮಿತಿಗಳನ್ನು ಗುರುತಿಸಿ ಈ ಪರಂಪರೆಗೆ ಹೊಸ ನೀರನ್ನು ಸೇರಿಸುವುದು. ನನ್ನ ವಿದ್ಯಾ ಗುರುಗಳಿಗೆ ಶ್ರದ್ಧಾಂಜಲಿಯ ನುಡಿನಮನ ಸಲ್ಲಿಸುವುದೆಂದರೆ ಸೌಜನ್ಯಕ್ಕೆ ಅವರ ಸಾಧನೆಗಳನ್ನು ಹೊಗಳುವುದಲ್ಲ, ವ್ಯಕ್ತಿ ಪೂಜೆ ಮಾಡುವುದಲ್ಲ! ಅವರಲ್ಲಿದ್ದ ಬದ್ಧತೆಯ ಶಿಕ್ಷಕ ಮತ್ತು ಬರಹಗಾರನನ್ನು ನೆನಪಿಸಿಕೊಳ್ಳುತ್ತ, ಕನ್ನಡದ ಬೌದ್ಧಿಕ ಜಗತ್ತನ್ನು ಕಟ್ಟುವಲ್ಲಿ ಈ ಮಾದರಿಗಳು ಹೇಗೆ ಸಹಾಯಕ ಆಗಬಹುದು ಎಂಬುದನ್ನು ಅರಿತುಕೊಳ್ಳುವುದು.

ಅತ್ತ ಅಖಿಲ ಕರ್ನಾಟಕ ಮಟ್ಟದಲ್ಲಿ ತಮ್ಮ ಶೈಕ್ಷಣಿಕ ವೃತ್ತಿಯ ಮೂಲಕ ಕನ್ನಡದ ಲೋಕ ಜ್ಞಾನವನ್ನು ಕಟ್ಟುವ ಪರಂಪರೆಯ ಭದ್ರ ಬುನಾದಿ ತಯಾರಾಗಿತ್ತು. ಇತ್ತ ಧಾರವಾಡದಲ್ಲಿಯೂ ಶಿಕ್ಷಕ- ಬರಹಗಾರ ವೃತ್ತಿಯು ಪ್ರವರ್ಧಮಾನಕ್ಕೆ ಬಂದಿತ್ತು. ಆಗಿನ ಧಾರವಾಡ ಹೇಳಿ ಕೇಳಿ ಬೇಂದ್ರೆ ಮಾಸ್ತರರ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಿರಡ್ಡಿಯವರ ಗುರುಗಳಾದ ಆರ್‌ಮ್ಯಾಂಡೋ ಮೆನೇಜೆಸ್, ಎಮ್.ಕೆ. ನಾಯ್ಕ್, ವಿ.ಕೃ. ಗೋಕಾಕ ಮುಂತಾದವರು ಈ ಹಾದಿಯನ್ನು ತುಳಿದಿದ್ದರು.

ಮೆನೇಜೆಸ್ ಮತ್ತು ನಾಯ್ಕ್‌ ಅವರ ಇಂಗ್ಲಿಷ್ ವಿದ್ವತ್‌ ಗಿರಡ್ಡಿಯವರ ಮನಸ್ಸನ್ನು ಸೆಳೆಯಲಿಲ್ಲ. ಇಂಗ್ಲಿಷ್‌ನಲ್ಲಿರುವ ವಿದ್ವತ್ ಸಂಪಾದಿಸಿ ಕನ್ನಡದಲ್ಲಿ ಕೃಷಿ ಮಾಡುವ ಗೋಕಾಕರ ಮಾದರಿಯನ್ನು ಗಿರಡ್ಡಿಯವರು ಆಯ್ಕೆ ಮಾಡಿಕೊಂಡರು. ಸಂಕ್ರಮಣ ಪತ್ರಿಕೆಯ ಗೆಳೆಯರ ಗುಂಪಿನಲ್ಲಿ ಇವರ ಒಡನಾಟಕ್ಕೆ ಸಿಕ್ಕ ಚಂದ್ರಶೇಖರ ಪಾಟೀಲ (ಚಂಪಾ) ಹಾಗೂ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರೂ ಮೂಲತಃ ಶಿಕ್ಷಕ- ಬರಹಗಾರರು. ಧಾರವಾಡದ ಸಾಹಿತ್ಯ ಚಟುವಟಿಕೆಗಳು ಈ ಶಿಕ್ಷಕರನ್ನು ರೂಪಿಸಿದ್ದು, ಈ ಶಿಕ್ಷಕರು ಧಾರವಾಡದ ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸಿದ್ದನ್ನು ಗಮನಿಸಲೇಬೇಕು.

1963ರಲ್ಲಿ ರಾಣೇಬೆನ್ನೂರು ಹತ್ತಿರದ ಹನುಮನಮಟ್ಟಿ ಎಂಬ ಸಣ್ಣ ಊರಿನಲ್ಲಿದ್ದ ಗ್ರಾಮೀಣ ಮಹಾವಿದ್ಯಾಲಯದಲ್ಲಿ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿದ ಗಿರಡ್ಡಿಯವರು, ನಂತರದಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅರ್ಧ ದಶಕದವರೆಗೆ ಕೆಲಸ ಮಾಡಿದರು. ಮುಂದೆ 1970ರಿಂದ ಗುಲ್ಬರ್ಗ ವಿಶ್ವವಿದ್ಯಾಲಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಕೆಲವು ವರ್ಷಗಳ ನಂತರ ಮರಳಿ ಬಂದ ಗಿರಡ್ಡಿಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿವೃತ್ತಿಯಾಗುವವರೆಗೆ ಅಧ್ಯಾಪನ ಮಾಡಿದರು.

ವಿದ್ಯಾರ್ಥಿಗಳ ಜೊತೆ ನಡೆಸುತ್ತಿದ್ದ ಸಣ್ಣಪುಟ್ಟ ಮಾತುಕತೆಯ ಸಂದರ್ಭದಲ್ಲಿ, ಕ್ಲಾಸಿನಲ್ಲಿ ಅಷ್ಟು ಕಷ್ಟ ಕೊಡದ ವಿದ್ಯಾರ್ಥಿ ಸಮೂಹ, ಈಗಿನಂತೆ ಆಡಳಿತದ ಬಾಧೆ ಇರದ ವಿಶ್ವವಿದ್ಯಾಲಯದ ವೃತ್ತಿಜೀವನ ಹೆಚ್ಚು (ಫ್ರೀಟೈಮ್) ವಿಶ್ರಾಂತಿಯನ್ನು ಒದಗಿಸುತ್ತಿದ್ದುದರಿಂದ, ಸಾಯಂಕಾಲ ಅವರು ಸಾಹಿತ್ಯಿಕ ಚಟುವಟಿಕೆಗಳಲ್ಲಿ, ವಿಶೇಷವಾಗಿ ರಂಗಭೂಮಿಯ ಜೊತೆ ತೊಡಗಿಸಿಕೊಳ್ಳಲು ಅನುವಾಯಿತು ಎಂದು ಹೇಳುತ್ತಿದ್ದರು.

ಅವರು ಕ್ಲಾಸಿನಲ್ಲಿ ಕಲಿಸಿದ ನಾಟಕ ಪಠ್ಯಗಳ ಅರ್ಥೈಸುವಿಕೆ, ಕನ್ನಡ ರಂಗಭೂಮಿಯ ಒಡನಾಟ ಮತ್ತು ಅವರು ಬರೆದ ‘ಇಂಗ್ಲೆಂಡಿನ ರಂಗಭೂಮಿ’ (1983), ‘ನಾಟಕ ಸಾಹಿತ್ಯ ಮತ್ತು ರಂಗಭೂಮಿ’(1989) ಹಾಗೂ ಅವರು ಸಂಪಾದಿಸಿದ ‘ಹವ್ಯಾಸಿ ರಂಗಭೂಮಿಯ ಸಮಸ್ಯೆಗಳು’ (1980) ಅವರ ಶೈಕ್ಷಣಿಕ ವೃತ್ತಿ ಮತ್ತು ಬರವಣಿಗೆಗಳ ಕೊಡುಕೊಳ್ಳುವಿಕೆಯನ್ನೇ ಸೂಚಿಸುತ್ತವೆ.

ಸಣ್ಣಕತೆ ಪ್ರಕಾರದಲ್ಲಿ ಹೆಚ್ಚು ಕೆಲಸ ಮಾಡಿದ ಗಿರಡ್ಡಿಯವರು ಪಶ್ಚಿಮದ ನಿರೂಪಣೆಯಿಂದ ಹೇರಳವಾಗಿ ಪಡೆದಿದ್ದು ಅವರ ಅಧ್ಯಾಪನ ಬದುಕಿನ ಭಾಗವಾಗಿಯೇ. ಅವರ ಪ್ರಮುಖ ವಿಮರ್ಶಾ ಗ್ರಂಥಗಳಾದ ‘ನವ್ಯ ವಿಮರ್ಶೆ’(1975), ಕಾದಂಬರಿ: ‘ವಸ್ತು ಮತ್ತು ತಂತ್ರ’(1976), ‘ಸಾಹಿತ್ಯ ಮತ್ತು ಪರಂಪರೆ’(1981) ಹಾಗೂ ‘ಸಾತತ್ಯ’(1992) ಇತ್ಯಾದಿಗಳನ್ನು ಗಿರಡ್ಡಿಯವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನುಭವಗಳ ಹಿನ್ನೆಲೆಯಲ್ಲಿಯೇ ರಚಿಸಿ, ಕನ್ನಡದ ನವ್ಯ ವಿಮರ್ಶೆಯ ನುಡಿಗಟ್ಟನ್ನು ಕಟ್ಟಿದ್ದಾರೆ.

ಇಂಗ್ಲಿಷ್‌ ಸಾಹಿತ್ಯದ ಆಧುನಿಕತೆ ಗಿರಡ್ಡಿಯವರ ತಲೆಮಾರನ್ನು ಪ್ರಭಾವಿಸಿದ್ದು ನಮಗೆಲ್ಲರಿಗೆ ಗೊತ್ತಿದ್ದ ವಿಷಯ. ನಮ್ಮ ಮೊದಲ ವರ್ಷದ ಎಂ.ಎ ಕ್ಲಾಸಿನಲ್ಲಿ ಭಾಷಾಶಾಸ್ತ್ರವನ್ನು ಬಹಳ ಶುಷ್ಕವಾಗಿ ಕಲಿಸಿದ್ದ ಅವರು, ನಂತರದ ವರ್ಷದಲ್ಲಿ ಟಿ.ಎಸ್‌. ಏಲಿಯಟ್ ಹಾಗೂ ಡಬ್ಲೂ.ಬಿ. ಯೇಟ್ಸ್‌ನನ್ನು ಬಹಳ ಲವಲವಿಕೆಯಿಂದ ಕಲಿಸಿದರು. ಆಗ ನಮ್ಮ ಮೇಲೆ ಏಲಿಯಟ್‌ ಮತ್ತು ಯೇಟ್ಸ್ ಇವರುಗಳ ಹೆಚ್ಚಿನ ಪ್ರಭಾವವಾಗಿದ್ದು ಗಿರಡ್ಡಿಯವರು ವರ್ಷಪೂರ್ಣ ಇವರಿಬ್ಬರನ್ನೇ ಆಳವಾಗಿ ಕಲಿಸಿದ್ದಕ್ಕಾಗಿಯೇ ಏನೋ! ಅದರಲ್ಲೂ ವಿಶೇಷವಾಗಿ ಏಲಿಯಟ್‌ನ ‘ದ ವೇಸ್ಟ್ ಲ್ಯಾಂಡ್‌’ನದ್ದು ಸಿಂಹಪಾಲು.

ಅವರ ಜೊತೆ ಏಲಿಯಟ್‌ನನ್ನು ಓದಿದ್ದು ನಮಗೆ ಮರೆಯಲಾಗದ ಅನುಭವ. ಅಂದಿನಿಂದ ಟೈರಿಸಿಯಸ್ ನಮ್ಮನ್ನು ಕಾಡಲು ಪ್ರಾರಂಭಿಸಿದ. ಏಲಿಯಟ್‌ನ ಗದ್ಯದ ರಸಗ್ರಹಣ ಮಾಡಲು ಗಿರಡ್ಡಿಯವರ ಪಾಠವೇ ಕಾರಣ. ಅವನ ಗದ್ಯದಲ್ಲಿ ಕಾವ್ಯವನ್ನು ಕಾಣಿಸಿದ್ದು ಗಿರಡ್ಡಿಯವರೇ. ನಾವು ವಿದ್ಯಾರ್ಥಿಗಳಾಗಿದ್ದಾಗ ಅವರ ಏಲಿಯಟ್ ಮೇಲಿನ ಮೋಹವನ್ನು ಕಂಡು, ‘Giraddi Sir is not a Professor of English, but a Professor of T S Eliot’ ಎಂದು ಆಡಿಕೊಂಡಿದ್ದುಂಟು.

ಇಂಗ್ಲಿಷ್ ಅಧ್ಯಯನದಲ್ಲಿ ತೊಡಗಿಸಿಕೊಂಡು ಕನ್ನಡಕ್ಕಾಗಿ ದುಡಿಯಬೇಕು ಎಂಬ ಅವರ ತಾತ್ವಿಕ ನಿಲುವು ಕೇವಲ ಇಂಗ್ಲಿಷ್ ಪ್ರಾಧ್ಯಾಪಕರಿಗಷ್ಟೇ ಅಲ್ಲ. ವಿಜ್ಞಾನ ಹಾಗೂ ವಿಶೇಷವಾಗಿ ಸಮಾಜ ವಿಜ್ಞಾನದ ಶಿಕ್ಷಕರಿಗೂ ಅನುಕರಣೀಯ. ನನ್ನ ವೃತ್ತಿಜೀವನ ಆರಂಭಿಸಿದ ಸಮಯದಲ್ಲಿ ಯು.ಜಿ.ಸಿಯ ಎ.ಪಿ.ಐ ಸ್ಕೋರಿಗಾಗಿ ಇಂಗ್ಲಿಷ್‌ನಲ್ಲಿ ಪ್ರಕಟಿಸಲು ಸೆಣಸಾಡುತ್ತಿದ್ದಾಗ ಅವರು ನನಗೆ ಹೇಳಿದ್ದೇನೆಂದರೆ- ‘ವೃತ್ತಿಗಾಗಿ ಇಂಗ್ಲಿಷ್‌ನಲ್ಲಿ ಎಷ್ಟು ಮಾಡ್ಬೇಕೋ ಅಷ್ಟು ಮಾಡು. ಕೊನೆಗೂ ನಮ್‌ ಕೆಲ್ಸಾ ಕನ್ನಡಕ್ಕಾಗಿಯೇ ಮಾಡ್ಬೇಕಪಾ!’ ಅವರ ಇಂಥ ನಿಲುವಿನಿಂದಾಗಿ ಕೆಲವು ಇಂಗ್ಲಿಷ್‌ ಸಹೋದ್ಯೋಗಿಗಳು ಅವರನ್ನು ಟೀಕಿಸಿದ್ದುಂಟು. ಇಂಗ್ಲಿಷ್‌ನಲ್ಲಿ ಬರೆಯದೇ ಇದ್ದ ಗಿರಡ್ಡಿಯವರ ಸಾಮರ್ಥ್ಯ, ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ತಮ್ಮ ಸಮಕಾಲೀನ ಯಾವ ಶಿಕ್ಷಕನಿಗೂ ಕಡಿಮೆ ಇರಲಿಲ್ಲ. ಆದರೆ ಅವರು ಅದನ್ನು ಆಯ್ಕೆ ಮಾಡಿಕೊಳ್ಳಲಿಲ್ಲ.

ಅವರ ಪ್ರಕಾರ ಭಾರತದಲ್ಲಿರೋ ಎಲ್ಲಾ ಇಂಗ್ಲಿಷ್ ವಿಭಾಗಗಳು ನಮ್ಮ ಸ್ಥಳೀಯ ಸಂಸ್ಕೃತಿಗಳಿಗಾಗಿ ದುಡೀಬೇಕು. ಕರ್ನಾಟಕದಾಗ ಅವು ಕನ್ನಡಕ್ಕಾಗಿ ಕೆಲ್ಸಾ ಮಾಡ್ಬೇಕು ಎಂಬುದು ಅವರ ಖಚಿತ ನಿಲುವು ಆಗಿತ್ತು. ಹೈದರಾಬಾದಿನ ಆಗಿನ ಸಿ.ಐ.ಎಫ್‌.ಎಲ್‌ನಲ್ಲಿ ಓದಿ, ಪಿಎಚ್‌.ಡಿ ಸಂಪಾದಿಸಿ, ಇಂಗ್ಲೆಂಡಿನ ಲ್ಯಾಂಕೆಸ್ಟರ್ ವಿಶ್ವವಿದ್ಯಾಲಯದಲ್ಲಿ ಇನ್ನೊಂದು ಎಂ.ಎ ಮಾಡಿದ ಅವರು ಭಾರತದ ಯಾವುದೇ ಶ್ರೇಷ್ಠ ಶೈಕಣಿಕ ಸಂಸ್ಥೆಯನ್ನು ಸೇರಬಹುದಿತ್ತು. ಧಾರವಾಡವನ್ನೇ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು, ಕನ್ನಡದ ಕೃಷಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದು ವಿವೇಕದ ನಡೆ.

ಆದರೆ, ಇಂದಿಗೂ ಸೋಜಿಗವೆನಿಸುವ ಸಂಗತಿಯೆಂದರೆ ಇಷ್ಟೆಲ್ಲಾ ಕನ್ನಡದ ಬಗ್ಗೆ ಕಾಳಜಿ ಇರುವ ಗಿರಡ್ಡಿಯವರು ಪಾಠ ಮಾಡುವಾಗ ಮಾತ್ರ ಕನ್ನಡ ಸಾಹಿತ್ಯದ ಯಾವ ಸುಳಿವನ್ನೂ ಬಿಟ್ಟುಕೊಡುತ್ತಿರಲಿಲ್ಲ. ಅದೇಕೋ ಏನೋ, ಇಂಗ್ಲಿಷ್ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯವನ್ನು ಬಹಳ ಅಂತರದಲ್ಲಿಯೇ ಇಡುತ್ತಿದ್ದರು. ಕನ್ನಡ ಸಾಹಿತ್ಯದ ಅಭಿರುಚಿ ಇರುವ ಕೆಲವು ವಿದ್ಯಾರ್ಥಿಗಳ ಅಪೇಕ್ಷೆಯನ್ನು ಹುಸಿಗೊಳಿಸುತ್ತಿದ್ದ ಅವರು, ಪಾಠ ಮಾಡುವಾಗ ಕನ್ನಡ ಸಾಹಿತ್ಯ ಪಠ್ಯದ ಯಾವ ಉದಾಹರಣೆಯನ್ನೂ ಕೊಡುತ್ತಿರಲಿಲ್ಲ.

ಅಂದು ಶಿವರಾಮ ಕಾರಂತರು ನಿಧನರಾದ ದಿನ. ಆವತ್ತಾದರೂ ಗಿರಡ್ಡಿಯವರು ಕಾರಂತರ ಬಗ್ಗೆ ಏನನ್ನಾದರೂ ಹೇಳಿಯಾರು ಎಂದು ಕಾಯುತ್ತಿದ್ದೆವು. ಕನ್ನಡ ಅಕ್ಷರಲೋಕಕ್ಕೆ ಏನೂ ಆಗಿಲ್ಲ ಎನ್ನುವಂತೆ ಪಠ್ಯಕ್ರಮವನ್ನು ಮುಗಿಸಿ ಯಥಾವತ್ತಾಗಿ ತಮ್ಮ ಸಿಗರೇಟಿನ ರುಚಿ ಸವಿದರು.

ಇತ್ತೀಚೆಗೆ ಬೌದ್ಧಿಕ ಲೋಕದಲ್ಲಿ ಮಧ್ಯಮ ಮಾರ್ಗವನ್ನು ಮುಂದಿಟ್ಟ ಗಿರಡ್ಡಿಯವರು, ಭಾಷಾ ಬಳಕೆಗೆ ಸಂಬಂಧಿಸಿದಂತೆ ದ್ವೈತಿಯಾಗಿ ನಡೆದುಕೊಂಡರು. ಇಂಗ್ಲಿಷ್ ವಿಭಾಗದಲ್ಲಿ ಅವರು ಪಕ್ಕಾ ಇಂಗ್ಲಿಷ್ ಮಾಧ್ಯಮದ ಶಿಕ್ಷಕರಂತೆ ವರ್ತಿಸುತ್ತಿದ್ದರು. ಕ್ಲಾಸುಗಳಲ್ಲಿ ಕನ್ನಡ ಉಪಯೋಗಿಸದೇ ಶುದ್ಧವಾಗಿ ಇಂಗ್ಲಿಷ್ ಬಳಸುತ್ತಿದ್ದ ಅವರು ಸಾರ್ವಜನಿಕ ವೇದಿಕೆಯಲ್ಲಿ ಕನ್ನಡವನ್ನು ಉಪಯೋಗಿಸುತ್ತಿದ್ದರು. ಆಗ ಇವರಿಗೆ ಎಳ್ಳಷ್ಟೂ ಇಂಗ್ಲಿಷ್ ಬರುವುದಿಲ್ಲ ಎನ್ನುವ ಹಾಗೆ ಮಾತನಾಡುತ್ತಿದ್ದರು.

ದ್ವಿ–ಭಾಷಾ, ದ್ವಿ- ಸಾಹಿತ್ಯ ಸಂವೇದನೆಯ ತತ್ವವನ್ನು ಅನುಸರಿಸಬೇಕೆಂದು ಅವರಿಂದ ಕಲಿತ ಎಷ್ಟೋ ಶಿಷ್ಯರಿಗೆ ಈಗಲೂ ಗಿರಡ್ಡಿಯವರ ಈ ಪ್ರತ್ಯೇಕ ವಾದ ವಿಚಿತ್ರವಾಗಿಯೇ ಕಾಣುತ್ತದೆ. ತಮ್ಮ ಕನ್ನಡದ ವಿದ್ವತ್‌ ಅನ್ನು ತೋರಿಸಿಕೊಳ್ಳಬಾರದೆಂಬ ಮನೋಭಾವನೆಯಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಅವರು ಹೀಗೆ ಮಾಡುತ್ತಿದ್ದರೆಂದು ನಾ ಕಾಣೆ.

ಜರ್ಮನಿಯ ಬಹುದೊಡ್ಡ ದಾರ್ಶನಿಕ ಇಮಾನ್ಯುಲ್‌ಕಾಂಟ್, ತಾವು ಬೋಧಿಸುತ್ತಿದ್ದ ತತ್ವಶಾಸ್ತ್ರದ ಬಗ್ಗೆ ಶೈಕ್ಷಣಿಕ ಸಂದರ್ಭ ಹೊರತುಪಡಿಸಿ ಎಲ್ಲಿಯೂ ಮಾತನಾಡುತ್ತಿದ್ದಿಲ್ಲವಂತೆ. ಇಂತಹದೊಂದು ಈ ಫಿಲಾಸಫರ್‌ಗಳಿಂದ ಸಾಧ್ಯವೇ ಎನ್ನುವುದು ಸೋಜಿಗ! ನಾವು ಗೌರವಿಸುವ ವ್ಯಕ್ತಿಗಳಲ್ಲಿ ಈ ತರಹದ ವಿಚಿತ್ರ ವೈರುಧ್ಯಗಳು ಕಾಣುವುದುಂಟು.

ಒಬ್ಬ ಮಾಸ್ತರರಾಗಿ ಗಿರಡ್ಡಿಯವರಲ್ಲಿ ಪಾಲಿಸಬೇಕಾದ ಕೆಲವು ಹಿರಿಮೆಗಳನ್ನು ಗುರುತಿಸಬಹುದು. ಪಾಠ ಮಾಡುವಾಗ ಅವರಿಗಿದ್ದ ಶ್ರದ್ಧೆ, ನಿಖರತೆ, ಬದ್ಧತೆಯನ್ನು ಅವರ ಬರವಣಿಗೆಯಲ್ಲಿಯೂ ಕಾಣಬಹುದು. ಕೀರ್ತಿನಾಥ ಕುರ್ತಕೋಟಿಯವರ ಸಂಪೂರ್ಣ ಬರಹಗಳನ್ನು ಬಹಳ ಅಚ್ಚುಕಟ್ಟಾಗಿ ಸಂಪಾದಿಸುತ್ತಿದ್ದ ಸಂದರ್ಭದಲ್ಲಿ, ಪಾಶ್ಚಿಮಾತ್ಯ ವಿದ್ವಾಂಸ- ಸಂಪಾದಕರು ತೋರಿಸುವ ಅತಿಸೂಕ್ಷ್ಮ ಬೌದ್ಧಿಕ ಕಸರತ್ತಿನಿಂದ ಅವರು ಪ್ರಭಾವಿತರಾಗಿದ್ದನ್ನು ಸ್ಮರಿಸಿಕೊಂಡಿದ್ದುಂಟು.

ಆಗಾಗ ಪ್ರೊ.ಜಿ.ಎಸ್‌. ಆಮೂರ ಅವರನ್ನು ಭೇಟಿ ಮಾಡುತ್ತಿದ್ದ ಗಿರಡ್ಡಿಯವರು, ಆಮೂರರನ್ನು ತಮ್ಮ ಗುರುಸಮಾನರೆಂದು ಭಾವಿಸಿ ಒಬ್ಬ ವಿದ್ಯಾರ್ಥಿಯಂತೆ ಕೂತು ಅವರನ್ನು ಆಲಿಸುತ್ತಿದ್ದರು. ಅವರು ನಿವೃತ್ತಿ ಹೊಂದುವ ಸಂದರ್ಭದಲ್ಲೂ ಹೊಸದಾಗಿ ವೃತ್ತಿಜೀವನ ಆರಂಭಿಸಿದವರಲ್ಲಿ ಕಂಡುಬರುವ ಉತ್ಸಾಹ ಅವರ ಪಾಠದಲ್ಲಿರುತ್ತಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಅವರು ವಾರದ ಕೊನೆಯಲ್ಲಿ ಬಂದು ಪಾಠ ಮಾಡಿ ಶೈಕ್ಷಣಿಕ ಬದ್ಧತೆಯನ್ನು ಮೆರೆದಿದ್ದರು.

ಸಾಹಿತ್ಯದ ಅಭಿರುಚಿ ಮೂಡಿಸುವುದು ಕಷ್ಟವಾಗುವ ಹಾಗೂ ಕಲಿಕೆಯ ಮನೋಭಾವನೆಯನ್ನು ಹುಡುಕಾಡಬೇಕಾದ ಈ ಕಾಲದಲ್ಲಿ, ಗಿರಡ್ಡಿಯವರ ಸಾಹಿತ್ಯ ಪ್ರೀತಿ, ಕನ್ನಡದ ಬಗ್ಗೆ ಇರುವ ಬದ್ಧತೆ, ವಿದ್ವಾಂಸನಿಗಿರಬೇಕಾದ ಅಧ್ಯಯನಶೀಲತೆ ಮಾನವಿಕ ಶಿಕ್ಷಕರಿಗೆ ಒಳ್ಳೆಯ ಮಾದರಿ. ಇಂದು ಕನ್ನಡವನ್ನು ಜ್ಞಾನದ ಭಾಷೆಯನ್ನಾಗಿ ಕಟ್ಟಬೇಕಾದ ಸಂದರ್ಭದಲ್ಲಿ, ಗಿರಡ್ಡಿಯವರ ಬದುಕು ಕೊಡುವ ಹೊಳಹು ಇದು.

ಶಿಕ್ಷಕನಾಗುವುದೆಂದರೆ ಬೌದ್ಧಿಕ ಸಾಮರ್ಥ್ಯ ಗಿಟ್ಟಿಸಿಕೊಳ್ಳುವುದು. ಶಿಕ್ಷಕ, ವಿದ್ವಾಂಸ ಇವುಗಳಲ್ಲಿ ಒಂದನ್ನು ಬಿಟ್ಟು ಇನ್ನೊಂದು ಆಗಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT