ಆತ್ಮಹತ್ಯೆಗೆ ಯತ್ನಿಸಿದ್ದ ನಟ ಯಶ್‌ ಅಭಿಮಾನಿ ಸಾವು

7

ಆತ್ಮಹತ್ಯೆಗೆ ಯತ್ನಿಸಿದ್ದ ನಟ ಯಶ್‌ ಅಭಿಮಾನಿ ಸಾವು

Published:
Updated:

ಬೆಂಗಳೂರು: ಚಿತ್ರನಟ ಯಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ್ದರಿಂದ ಬೇಸರಗೊಂಡು ಹೊಸಕೆರೆಹಳ್ಳಿಯಲ್ಲಿರುವ ಅವರ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಯಶ್‌ ಅಭಿಮಾನಿ ರವಿ (28) ಮೃತಪಟ್ಟಿದ್ದಾನೆ. 

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ರವಿ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ರವಿ ದೇಹ ಶೇ 80ರಷ್ಟು ಸುಟ್ಟು ಹೋಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ 1.30ರ ಸುಮಾರಿಗೆ ಕೊನೆಯುಸೆರೆಳೆದರು’ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಕೆ.ಟಿ.ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾವಗಡ ತಾಲ್ಲೂಕಿನ ರವಿ, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಲಗ್ಗೆರೆಯಲ್ಲಿ ನೆಲೆಸಿದ್ದರು. ಯಶ್ ಅವರ ಅಪ್ಪಟ ಅಭಿಮಾನಿಯಾಗಿರುವ ಅವರು, ಪ್ರತಿ ವರ್ಷವೂ ಜ.8ರಂದು ಶುಭಾಶಯ ಹೇಳಲು ಮನೆ ಬಳಿ ಬರುತ್ತಿದ್ದರು.

ಹಿರಿಯ ನಟ ಅಂಬರೀಷ್ ನಿಧನದ ಕಾರಣದಿಂದ ಈ ಸಲ ಜನ್ಮದಿನ ಆಚರಣೆ ನಿರಾಕರಿಸಿದ್ದ ಯಶ್, ‘ಶುಭಾಶಯ ಕೋರಲು ಯಾರೂ ಮನೆ ಹತ್ತಿರ ಬರಬೇಡಿ’ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು. ಇತ್ತೀಚೆಗೆ ಮನೆ ಮೇಲೆ ಐಟಿ ದಾಳಿ ನಡೆದಿದ್ದೂ ಅವರಿಗೆ ಇರಿಸು–ಮುರಿಸು ಉಂಟಾಗುವಂತೆ ಮಾಡಿತ್ತು ಎನ್ನಲಾಗಿದೆ.

ಈ ಮನವಿ ಬಳಿಕವೂ ರವಿ ಸೇರಿದಂತೆ ನೂರಾರು ಅಭಿಮಾನಿಗಳು ಮಂಗಳವಾರ ಬೆಳಿಗ್ಗೆಯೇ ಯಶ್ ಅವರ ಮನೆ ಮುಂದೆ ಜಮಾಯಿಸಿದ್ದರು. ಆದರೆ, ತಮ್ಮ ಮಾತಿಗೆ ಬದ್ಧರಾಗಿದ್ದ ಯಶ್, ಕುಟುಂಬ ಸದಸ್ಯರ ಜತೆ ಬೆಳಿಗ್ಗೆಯೇ ಹೊರ ಹೋಗಿದ್ದರು.

ಮಧ್ಯಾಹ್ನದವರೆಗೂ ಕಾದು ಬೇಸರಗೊಂಡ ರವಿ, 2 ಗಂಟೆ ಸುಮಾರಿಗೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರು, ಮಣ್ಣು ಹಾಗೂ ನೀರೆರಚಿ ಬೆಂಕಿ ನಂದಿಸಿದರು. ನಂತರ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. 

ಇದನ್ನೂ ಓದಿಈ ವರ್ಷ ಬರ್ತ್‌ ಡೇ ಆಚರಿಸಿಕೊಳ್ಳಲ್ಲ ಯಶ್‌

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 3

  Sad
 • 1

  Frustrated
 • 17

  Angry

Comments:

0 comments

Write the first review for this !