ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭಾ ಉಗಮಸ್ಥಳದಲ್ಲಿಯೇ ನೀರಿಗಾಗಿ ಹಾಹಾಕಾರ!

Last Updated 16 ಮೇ 2019, 2:27 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ, ಬಾಗಲಕೋಟೆ, ಗದಗ ಹಾಗೂ ಧಾರವಾಡ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸುವ ಮಲಪ್ರಭಾ ನದಿಯ ಉಗಮ ಸ್ಥಳದಲ್ಲಿಯೇ ಈಗ ನೀರಿಲ್ಲ. ಹೌದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿಯ ಮಾವುಲಿದೇವಿ ದೇವಸ್ಥಾನದ ಪಕ್ಕದಲ್ಲಿರುವ ಮಲಪ್ರಭಾ ನದಿಯ ಉಗಮ ಸ್ಥಳದಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ.

ಉಗಮ ಸ್ಥಳದಿಂದ ಕೂಗಳತೆ ದೂರದಲ್ಲಿ 200 ಅಡಿ ಭೂಮಿ ಕೊರೆದು, ಬೋರ್‌ವೆಲ್‌ ಹಾಕಿಸಲಾಗಿದೆ. ಈ ಬೋರ್‌ವೆಲ್‌ ಮೂಲಕ ಅಕ್ಕಪಕ್ಕದ ಗ್ರಾಮಸ್ಥರಿಗೆ ನೀರು ಪೂರೈಸಲಾಗುತ್ತಿದೆ. ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಕಣಕುಂಬಿಯಲ್ಲಿ ಮಳೆಗಾಲದಲ್ಲಿ ಬಿಟ್ಟುಬಿಡದೆ ಮಳೆ ಸುರಿಯುವ ಪ್ರದೇಶದಲ್ಲಿಯೇ ಈಗ ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ಬಂದೊದಗಿದೆ.

ನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ ಪಂಚಾಯ್ತಿಯವರು ಬೋರ್‌ವೆಲ್‌ ನೀರನ್ನು ಮನೆ ಮನೆಗಳಿಗೆ ನಲ್ಲಿ ಮೂಲಕ ಪೂರೈಸುತ್ತಿದ್ದಾರೆ. ಆಗಾಗ ವಿದ್ಯುತ್‌ ಕೈಕೊಡುತ್ತಿರುವುದರಿಂದ ಈ ನೀರು ಕೂಡ ಸಮರ್ಪಕವಾಗಿ ತಲುಪುತ್ತಿಲ್ಲ. ಗ್ರಾಮಸ್ಥರು ಹೈರಾಣಾಗಿದ್ದಾರೆ. ನದಿ ಪಾತ್ರದ ಖಾನಾಪುರ, ಬೈಲಹೊಂಗಲ, ರಾಮದುರ್ಗ ಹಾಗೂ ಸವದತ್ತಿ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಇದೆ.

ಬರಿದಾದ ಗಂಗಾಂಬಿಕಾ ಐಕ್ಯ ಸ್ಥಳ

ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ ಸಮೀಪದ ಗಂಗಾಂಬಿಕಾ (ಸಮಾಜ ಸುಧಾರಕ ಬಸವಣ್ಣನವರ ಪತ್ನಿ) ಐಕ್ಯಸ್ಥಳದ ಸುತ್ತ ಹರಿಯುತ್ತಿದ್ದ ಮಲಪ್ರಭಾ ನದಿಯ ನೀರು ಸಂಪೂರ್ಣ ಬತ್ತಿಹೋಗಿದೆ. ಇಲ್ಲಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ತಲೆಯ ಮೇಲೆ ಹಾಕಿಕೊಳ್ಳಲು ನಾಲ್ಕು ಹನಿ ನೀರೂ ಸಿಗದಂತಹ ಸ್ಥಿತಿ ಬಂದೊದಗಿದೆ. ಅಕ್ಕಪಕ್ಕದ ಕಾದರವಳ್ಳಿ, ವೀರಾಪುರ, ಅಮರಾಪುರ, ಹೊಳಿಹೊಸೂರ ಸುತ್ತಮುತ್ತಲಿನ ಜನರು ನೀರಿಗಾಗಿ ಬವಣೆ ಪಡುತ್ತಿದ್ದಾರೆ. ಇವರಿಗೂ ಟ್ಯಾಂಕರ್‌ ನೀರೇ ಗತಿಯಾಗಿದೆ.

‘ಕಳೆದ ಒಂದು ತಿಂಗಳಿನಿಂದ ನದಿಯಲ್ಲಿ ನೀರೇ ಇಲ್ಲ. ಪಂಚಾಯ್ತಿಯವರು ಬೋರ್‌ವೆಲ್‌ ನೀರನ್ನೇ ಪೂರೈಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಭೀಕರ ಸ್ಥಿತಿ ಇದೇ ಮೊದಲ ಬಾರಿಗೆ ನೋಡಿದ್ದೇನೆ. ಬೋರ್‌ವೆಲ್‌ ಹೆಚ್ಚಾದಷ್ಟು ಭೂಮಿಯೊಳಗಿನ ನೀರು ಕೂಡ ಕಡಿಮೆಯಾಗಿದೆ. ಮೊದಲು 40–50 ಅಡಿಗೆ ನೀರು ಸಿಗುತ್ತಿತ್ತು. ಈಗ 200 ಅಡಿಗಿಂತ ಕೆಳಗೆ ಹೋಗಿದೆ. ಜಲಾನಯನ ಪ್ರದೇಶದಲ್ಲಿಯೇ ಇಂತಹ ಸ್ಥಿತಿ ಇದ್ದರೆ, ಇತರ ಪ್ರದೇಶಗಳಲ್ಲಿ ಸ್ಥಿತಿ ಇನ್ನೂ ಭಯಂಕರವಾಗಿದೆ’ ಎಂದು ಕಣಕುಂಬಿ ನಿವಾಸಿ ರಾಮಚಂದ್ರ ಕೋಕಳೆ ಹೇಳಿದರು.

ಖಾಸಗಿ ಬೋರ್‌ಗಳಿಗೆ ಮೊರೆ

‘ನಿಟ್ಟೂರು ಗ್ರಾಮ ಪಂಚಾಯ್ತಿಯ ಪ್ರಭುನಗರ, ದೇವಲತ್ತಿ, ಜಾಂಬೋಟಿ, ಬೀಡಿ, ಕಾರಲಗಾ, ಇಟಗಿ ಗ್ರಾಮದಲ್ಲಿ ನೀರಿನ ಕೊರತೆ ತೀವ್ರವಾಗಿದೆ. ಪಂಚಾಯ್ತಿ ವತಿಯಿಂದ ಕೊರೆಸಲಾಗಿದ್ದ ಹಲವು ಬೋರ್‌ಗಳು ವಿಫಲವಾಗಿವೆ. ಹೀಗಾಗಿ ರೈತರ ಹೊಲಗಳಲ್ಲಿರುವ ಖಾಸಗಿ ಬೋರ್‌ವೆಲ್‌ಗಳ ಮೊರೆ ಹೋಗಿದ್ದೇವೆ. ಅಲ್ಲಿಂದ ನೀರು ಪಡೆದು, ಟ್ಯಾಂಕರ್‌ ಮೂಲಕ ಗ್ರಾಮಗಳಿಗೆ ಪೂರೈಸಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಸಹಾಯಕ ಎಂಜಿನಿಯರ್‌ ಎಸ್‌.ಪಿ. ವಲ್ಯಾಪುರಕರ ಹೇಳಿದರು.

‘ನದಿಯಷ್ಟೇ ಅಲ್ಲದೇ, ಬೋರ್‌ವೆಲ್‌ಗಳು ಕೂಡ ಬತ್ತಿ ಹೋಗಿವೆ. 8–10 ಬೋರ್‌ವೆಲ್‌ಗಳ ಪೈಕಿ ಕೇವಲ 3–4 ಬೋರ್‌ವೆಲ್‌ಗಳಲ್ಲಿ ಮಾತ್ರ ನೀರು ಇದೆ. ಹೀಗಾಗಿ ಈ ಸಲ ಪರಿಸ್ಥಿತಿ ಗಂಭೀರವಾಗಿದೆ. ಒಂದು ವಾರದೊಳಗೆ ಮುಂಗಾರು ಪೂರ್ವ ಮಳೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಕುಸಿದ ನೀರಿನ ಮಟ್ಟ

ಸವದತ್ತಿ ಬಳಿ ನವಿಲುತೀರ್ಥದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ಜಲಾಶಯವಿದೆ. ಈ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹ ಕಡಿಮೆಯಾಗಿದೆ. ಕಳೆದ ವರ್ಷ 2.076 ಟಿಎಂಸಿ ಅಡಿಯಷ್ಟು ನೀರಿತ್ತು. ಈಗ ಕೇವಲ 1.604 ಟಿಎಂಸಿ ಅಡಿಯಷ್ಟು ನೀರು ಉಳಿದಿದೆ. ಸ್ಥಳೀಯ ಸವದತ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜೊತೆಗೆ ಹುಬ್ಬಳ್ಳಿ– ಧಾರವಾಡ, ಗದಗ ಜಿಲ್ಲೆಯ ರೋಣ, ನರಗುಂದ, ಬಾಗಲಕೋಟೆಯ ಬಾದಾಮಿ ಜನರೂ ಇದೇ ನೀರನ್ನು ಅವಲಂಬಿಸಿದ್ದಾರೆ. ಇವರಿಗೆಲ್ಲರಿಗೂ ಪೂರೈಸಲು ಈಗಿನ ನೀರು ಸಾಕಾಗುವುದಿಲ್ಲ. ಒಂದೆರಡು ಅಡ್ಡ ಮಳೆಗಳು ಸುರಿಯದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT