ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲುದಾರರು ಮಾಲೀಕರಂತೆ ವರ್ತಿಸಿದ್ದು ಪತನಕ್ಕೆ ಕಾರಣ‌: ವಿಶ್ವನಾಥ್

ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ಸಾ.ರಾ.ಮಹೇಶ್‌: ವಿಶ್ವನಾಥ್‌ ಆರೋಪ
Last Updated 4 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ‘ಸಮ್ಮಿಶ್ರ ಸರ್ಕಾರದ ಪತನಕ್ಕೆ ಎರಡೂ ಪಕ್ಷಗಳ ಪಾಲುದಾರರೇ ಕಾರಣ. ಪಾಲುದಾರರು ನಾಯಕರ ಥರ ಕಾಣಲಿಲ್ಲ; ಬದಲಾಗಿ ಮಾಲೀಕರಂತೆ ವರ್ತಿಸಿದರು’ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಅಡಗೂರು ಎಚ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

‘ದೋಸ್ತಿ ಪಕ್ಷಗಳ ಮಾಲೀಕರು ಅತೃಪ್ತರೇ ಹೊರತು ನಾವಲ್ಲ. ಈ ಸರ್ಕಾರದ ಸ್ಥಾಪನೆಗೆ, ಪತನಕ್ಕೆ ನಾವು ಹಾಗೂ ಬಿಜೆಪಿ ಕಾರಣ ಅಲ್ಲ. ಶಾಸಕರನ್ನು ಗೌರವದಿಂದ ನಡೆಸಿಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮಂಡ್ಯ ಜನ ತಮ್ಮ ಕುಟುಂಬಕ್ಕೆ ವಿಷ ಉಣಿಸಿದರು ಎಂದು ಕುಮಾರಸ್ವಾಮಿ ಕೆ.ಆರ್‌.ಪೇಟೆಯಲ್ಲಿ ಹೇಳಿದ್ದಾರೆ. ಆದರೆ, ದೇವೇಗೌಡರ ಕುಟುಂಬಕ್ಕೆ ನಿಜವಾಗಿಯೂ ವಿಷ ಉಣಿಸಿದ್ದು ಸಾ.ರಾ.ಮಹೇಶ್‌. ಅವರ ಕುಟುಂಬ ಹಾಳಾಗಲು ಕಾರಣರಾದರು’ ಎಂದು ಗಂಭೀರ ಆರೋಪ ಮಾಡಿದರು.‌

‘ಹಣ ಪಡೆದಿರುವ ಆರೋಪ ಮಾಡುತ್ತೀಯಾ. ನಿನಗೆ ಮಾನ ಮರ್ಯಾದೆ ಇದೆಯಾ’ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

‘ಸತ್ಯವಂತ, ಸಂತ, ಗಾಂಧಿ ಎಂಬಂತೆ ರಮೇಶ್ ಕುಮಾರ್ ವರ್ತಿಸುತ್ತಾರೆ. ಆದರೆ, ಅವರು ಮಾಡಿದ್ದೇನು? ಸದನದಲ್ಲಿ ಇಲ್ಲದ ವ್ಯಕ್ತಿ ವಿರುದ್ಧ ಮಾತನಾಡಲು ಅವಕಾಶ ಕೊಟ್ಟರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇವೇಗೌಡರ ಫೋಟೊಗೆ ಪೂಜೆ’: ‘ಎಚ್‌.ಡಿ.ದೇವೇಗೌಡರ ಬಳಿ ಕ್ಷಮೆ ಕೇಳುತ್ತೇನೆ. ಅವರು ನನಗೆ ಅವಕಾಶ ಕೊಟ್ಟರು. ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು. ಸನ್ನಿವೇಶಗಳಿಂದಾಗಿ ರಾಜೀನಾಮೆ ಕೊಡಬೇಕಾಯಿತು. ಅವರ ಫೋಟೊವನ್ನು ಇವತ್ತೂ ಮನೆಯಲ್ಲಿಟ್ಟು ಪೂಜೆ ಮಾಡುತ್ತೇನೆ’ ಎಂದರು.

ಪೊಲೀಸ್‌ ಸರ್ಪಗಾವಲಿನಲ್ಲಿ ಪತ್ರಿಕಾಗೋಷ್ಠಿ

ಪೊಲೀಸ್‌ ಸರ್ಪಗಾವಲಿನಲ್ಲಿ ವಿಶ್ವನಾಥ್‌ ಅವರು ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಮೀಸಲು ಪೊಲೀಸ್‌ ಪಡೆಯ ಎರಡು ವ್ಯಾನ್‌, 30 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭವನದತ್ತ ತೆರಳುತ್ತಿದ್ದ ಜೆಡಿಎಸ್‌ ಕಾರ್ಯಕರ್ತರನ್ನು ಅರ್ಧದಲ್ಲೇ ತಡೆದರು. ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ವಿಶ್ವನಾಥ್‌ ಪರ, ವಿರೋಧ ಘೋಷಣೆ ಕೂಗಿದರು.

‘ಸಿದ್ದರಾಮಯ್ಯನವರೇ, ರಾಜೀನಾಮೆ ಯಾವಾಗ?’

‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರೇ, ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಹೊಣೆ ಹೊತ್ತು ನಿಮ್ಮ ನಾಯಕ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ. ನಾನು ಜೆಡಿಎಸ್‌ ಅಧ್ಯಕ್ಷ ಸ್ಥಾನ ತೊರೆದೆ. ನೀವು ಏಕೆ ಗೂಟ ಹೊಡ್ಕೊಂಡು ಅಲ್ಲೇ ಕುಳಿತಿದ್ದೀರಿ. ಯಾವಾಗ ರಾಜೀನಾಮೆ ನೀಡುತ್ತೀರಿ’ ಎಂದು ವಿಶ್ವನಾಥ್‌ ಪ್ರಶ್ನಿಸಿದರು.

‘ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಖೆಡ್ಡಾ ತೋಡಿದರು’ ಎಂದು ಆರೋಪಿಸಿದರು.

‘ದೇವೇಗೌಡರ ಫೋಟೊಗೆ ಪೂಜೆ’

‘ಎಚ್‌.ಡಿ.ದೇವೇಗೌಡರ ಬಳಿ ಕ್ಷಮೆ ಕೇಳುತ್ತೇನೆ. ಅವರು ನನಗೆ ಅವಕಾಶ ಕೊಟ್ಟರು. ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು. ಸನ್ನಿವೇಶಗಳಿಂದಾಗಿ ರಾಜೀನಾಮೆ ಕೊಡಬೇಕಾಯಿತು. ಅವರ ಫೋಟೊವನ್ನು ಇವತ್ತೂ ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT