8ರಂದು ಬಜೆಟ್‌ ಮಂಡನೆ: ಅಧಿವೇಶನಕ್ಕೆ ‘ಆಪರೇಷನ್‌’ ಭೀತಿ, ಅತೃಪ್ತರ ನಡೆ ನಿಗೂಢ

7
ಕಾಂಗ್ರೆಸ್‌ನಿಂದ ವಿಪ್‌ ಜಾರಿ

8ರಂದು ಬಜೆಟ್‌ ಮಂಡನೆ: ಅಧಿವೇಶನಕ್ಕೆ ‘ಆಪರೇಷನ್‌’ ಭೀತಿ, ಅತೃಪ್ತರ ನಡೆ ನಿಗೂಢ

Published:
Updated:

ಬೆಂಗಳೂರು: ಬಿಜೆಪಿಯ ‘ಆಪರೇಷನ್‌ ಕಮಲ’ದ ಆತಂಕ, ಅತೃಪ್ತ ಕಾಂಗ್ರೆಸ್‌ ಶಾಸಕರ ನಿಗೂಢ ನಡೆ, ‌‘ದೋಸ್ತಿ’ ಪಕ್ಷಗಳ ಸಂಖ್ಯಾಬಲದ ಲೆಕ್ಕಾಚಾರದ ಮಧ್ಯೆಯೇ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅಧಿವೇಶನ ಬುಧವಾರ ಆರಂಭವಾಗಲಿದೆ.

ವಿಧಾನಸಭೆಯ ಕಲಾಪಗಳಲ್ಲಿ ಕಡ್ಡಾಯವಾಗಿ ಹಾಜರಾಗಿ, ಸರ್ಕಾರದ ಪರ ಮತ ಚಲಾಯಿಸುವಂತೆ ಪಕ್ಷದ ಶಾಸಕರಿಗೆ ಕಾಂಗ್ರೆಸ್‌ ವಿಪ್‌ ಜಾರಿ ಮಾಡಿದೆ. ಆ ಮೂಲಕ, ‘ಗೈರಾದರೆ ಹುಷಾರ್‌’ ಎಂಬ ಎಚ್ಚರಿಕೆ ನೀಡಿದೆ. ಆದರೆ, ಆ ಪಕ್ಷದ ಅತೃಪ್ತರ ನಡೆಯ ಮೇಲೆ ನಿಗಾ ಇಟ್ಟು ಮುಂದಿನ ಹೆಜ್ಜೆ ಇಡಲು ಬಿಜೆಪಿ ನಿರ್ಧರಿಸಿದೆ.

ಆಪ್ತ ಶಾಸಕರ ಜೊತೆ ಮಂಗಳವಾರ ಬೆಳಿಗ್ಗೆ ಉಪಾಹಾರ ನೆಪದಲ್ಲಿ ಚರ್ಚೆ ನಡೆಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಿದರು.

‘ಕೈ’ ಶಾಸಕರನ್ನು ಕಮಲ ಪಕ್ಷದ ಕಡೆಗೆ ಸೆಳೆಯಲು ಮಹತ್ವದ ಪಾತ್ರ ನಿಭಾಯಿಸುತ್ತಿದ್ದಾರೆ ಎನ್ನಲಾದ ಶಾಸಕ ಸಿ.ಎನ್‌.ಅಶ್ವತ್ಥ ನಾರಾಯಣ ಈ ಸಭೆಗೆ ಗೈರಾಗಿದ್ದರು. ಅವರು ಅತೃಪ್ತ ಶಾಸಕರ ಜೊತೆ ಮುಂಬೈಯಲ್ಲಿದ್ದಾರೆ ಎಂದು ಗೊತ್ತಾಗಿದೆ.

ಅತೃಪ್ತರೆಂದು ಗುರುತಿಸಿಕೊಂಡಿರುವ ಶಾಸಕರ ಪೈಕಿ ಉಮೇಶ ಜಾಧವ್‌ (ಚಿಂಚೋಳಿ) ಅವರ ಮನವೊಲಿಸುವಲ್ಲಿ ಕಾಂಗ್ರೆಸ್‌ ನಾಯಕರು ಯಶಸ್ವಿಯಾಗಿದ್ದಾರೆ. ಮಹೇಶ ಕುಮಟಳ್ಳಿ (ಅಥಣಿ) ಅಧಿವೇಶನಕ್ಕೆ ಹಾಜರಾಗುವ ನಿರೀಕ್ಷೆ ಈ ನಾಯಕರದ್ದು. ಆದರೆ, ರಮೇಶ ಜಾರಕಿಹೊಳಿ (ಗೋಕಾಕ), ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ) ಮತ್ತು ಜೆ.ಎನ್‌. ಗಣೇಶ (ಕಂಪ್ಲಿ) ನಡೆ ಇನ್ನೂ ‘ಕೈ’ಗೆ ನಿಲುಕಿಲ್ಲ.

ಅಧಿವೇಶನ ಏಟು– ಎದುರೇಟಿನ ರಾಜಕೀಯಕ್ಕೆ ವೇದಿಕೆಯಾಗುವುದು ಖಚಿತ. ‘ಆಪರೇಷನ್‌ ಕಮಲ’ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಸಿದ್ಧತೆ ನಡೆಸಿದ್ದರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಟ್ಟು ಮುಗಿಬೀಳಲು ಬಿಜೆಪಿ ಪಾಳೆಯದಲ್ಲಿ ಚರ್ಚೆ ನಡೆದಿದೆ. ತೀವ್ರ ಬರ, ವರ್ಗಾವಣೆ ದಂಧೆ ವಿಷಯವನ್ನೂ ಪ್ರಸ್ತಾಪಿಸಲು ಬಿಜೆಪಿ ತೀರ್ಮಾನಿಸಿದೆ.

ಈ ಮಧ್ಯೆ, ಪಕ್ಷದ ಸಚಿವರಿಗೆ ಮಂಗಳವಾರ ರಾತ್ರಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭೋಜನ ಕೂಟ ಏರ್ಪಡಿಸಿದ್ದರೆ, ಉಭಯ ಪಕ್ಷಗಳ ಶಾಸಕರ ನಿಷ್ಠೆಯ ಪರೀಕ್ಷೆಗಾಗಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಬುಧವಾರ ರಾತ್ರಿ ಔತಣಕೂಟ ಆಯೋಜಿಸಿದ್ದಾರೆ.

ಇಂದಿನಿಂದ ಬಜೆಟ್‌ ಅಧಿವೇಶನ

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಬೆಳಿಗ್ಗೆ 11 ಗಂಟೆಗೆ ಭಾಷಣ ಮಾಡಲಿದ್ದಾರೆ. ಉಭಯ ಸದನಗಳಲ್ಲಿ ಗಣ್ಯ ವ್ಯಕ್ತಿಗಳಿಗೆ ಸಂತಾಪ ಸೂಚನೆ ಬಳಿಕ ಕಲಾಪ ಮುಂದೂಡಿಕೆಯಾಗಲಿದೆ. ಮರುದಿನ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ , 8ರಂದು ಮಧ್ಯಾಹ್ನ 12.30ಕ್ಕೆ 2019–20ನೇ ಸಾಲಿನ ಬಜೆಟ್‌ ಮಂಡಿಸಲಿದ್ದಾರೆ. 15ರಂದು ಅಧಿವೇಶನ ಮುಕ್ತಾಯವಾಗಲಿದೆ.

ಅವಿಶ್ವಾಸ ನಿರ್ಣಯ ಮಂಡನೆ ಇಲ್ಲ: ಬಿಎಸ್‌ವೈ

ಮೈತ್ರಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ ಎಂದು ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು, ‘ರಾಜ್ಯಪಾಲರ ಭಾಷಣ ನೋಡಿಕೊಂಡು ಮುಂದಿನ ಹೋರಾಟ ರೂಪಿಸುತ್ತೇವೆ. ಈ ಬಗ್ಗೆ ಚರ್ಚಿಸಲು ಬುಧವಾರ ಮತ್ತೊಮ್ಮೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ’ ಎಂದರು.

‘ರಾಜ್ಯದಲ್ಲಿ ಸರ್ಕಾರ ಸತ್ತಂತೆ ಆಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಮಧ್ಯೆ ಹೊಂದಾಣಿಕೆ ಇಲ್ಲ. ಕಾಂಗ್ರೆಸ್‌ನ 20 ಶಾಸಕರು ಮುಖ್ಯಮಂತ್ರಿ ಮೇಲೆ ವಿಶ್ವಾಸ ಇಲ್ಲ ಎಂದಿದ್ದಾರೆ. ಸಚಿವರು ಹಾಗೂ ಶಾಸಕರ ನಡುವೆಯೂ ಹೊಂದಾಣಿಕೆ ಇಲ್ಲ’ ಎಂದು ಅವರು ಹೇಳಿದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತರಾತುರಿಯಲ್ಲಿ ಅಧಿವೇಶನ ಕರೆದಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಒಂದು ದಿನವಷ್ಟೇ ನೀಡಲಾಗಿದೆ. ಬಜೆಟ್‌ ಮೇಲಿನ ಚರ್ಚೆಗೆ ನಾಲ್ಕು ದಿನಗಳಷ್ಟೇ ಸಿಗಲಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

* ಮೈತ್ರಿ ಸರ್ಕಾರ ಕಲ್ಲುಬಂಡೆಯಂತೆ ಗಟ್ಟಿಯಾಗಿದೆ. ನಮ್ಮಲ್ಲಿ ಅತೃಪ್ತರು ಯಾರು ಇಲ್ಲ. ಎಲ್ಲರೂ ಎಲ್ಲರೂ ತೃಪ್ತರೇ. ಸದನಕ್ಕೆ ಬರುತ್ತಾರೆ
-ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

* ಮೈತ್ರಿ ಸರ್ಕಾರ ಕಲ್ಲುಬಂಡೆಯಂತೆ ಗಟ್ಟಿಯಾಗಿದೆ. ನಮ್ಮಲ್ಲಿ ಅತೃಪ್ತರು ಯಾರೂ ಇಲ್ಲ. ಎಲ್ಲರೂ ತೃಪ್ತರೇ. ಸದನಕ್ಕೆ ಬರುತ್ತಾರೆ
-ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !